Kannada NewsKarnataka News

ಮತ್ತೆ ಆಟೋ ಮೀಟರ್ ಕಾರ್ಯಾಚರಣೆ ಆರಂಭ

ಮತ್ತೆ ಆಟೋ ಮೀಟರ್ ಕಾರ್ಯಾಚರಣೆ ಆರಂಭ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಜುಲೈ 23 ರಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ನಿರ್ಧರಿಸಿದಂತೆ ಬೆಳಗಾವಿ ನಗರ ಸಂಚಾರ ಪೊಲೀಸ್ ಹಾಗೂ ಆರ್‌ಟಿಓ ಅಧಿಕಾರಿಗಳು ಇಂದು ಮೀಟರ್ ಹಾಕದೇ ಮನಸೋ ಇಚ್ಛೆಯಂತೆ ಬಾಡಿಗೆ ಪಡೆಯುವ ಆಟೋರಿಕ್ಷಾಗಳ ವಿರುದ್ಧ ಕಾರ್ಯಾಚರಣೆಗಿಳಿದಿದ್ದಾರೆ.

ಒಟ್ಟು 49 ಆಟೋರಿಕ್ಷಾಗಳನ್ನು ಪರಿಶೀಲಿಸಿದ್ದು ಅವುಗಳ ಪೈಕಿ 32 ಆಟೋರಿಕ್ಷಾಗಳನ್ನು ತಡೆಹಿಡಿಯಲಾಗಿದ್ದು, ಇತರೆ ಸಂಚಾರ ನಿಯಮಗಳ ಉಲ್ಲಂಘನೆಗಾಗಿ 9 ಆಟೋರಿಕ್ಷಾಗಳ ಮೇಲೆ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. 1800 ರೂ. ಸ್ಥಳದಂಡ ವಿಧಿಸಲಾಗಿದೆ.

ಕಾನೂನು ರೀತ್ಯ ನಡೆದುಕೊಂಡು ಮೀಟರ್ ಬಳಸಿದ್ದರಿಂದ ಹಾಗೂ ದಾಖಲಾತಿಗಳನ್ನು ಸರಿಯಾಗಿ ಇಟ್ಟುಕೊಂಡ 8 ಆಟೋರಿಕ್ಷಾಗಳ ಚಾಲಕರಿಗೆ ಕಾನೂನು ಪಾಲಿಸಲು ಪ್ರೋತ್ಸಾಹಿಸಿ ಆಟೋರಿಕ್ಷಾಗಳನ್ನು ಬಿಡುಗಡೆ ಮಾಡಲಾಗಿದೆ.
ನಗರದಲ್ಲಿಯ ಆಟೋರಿಕ್ಷಾ ಚಾಲಕರು ಸಾರ್ವಜನಿಕರಿಂದ ಹೆಚ್ಚಿನ ದರ ಕೇಳಿದರೆ, ಮೀಟರ್ ಅಳವಡಿಸದಿದ್ದರೆ ಅಥವಾ ಬಾಡಿಗೆಗೆ ನಿರಾಕರಿಸಿದರೆ ಅಂತಹ ಆಟೋಚಾಲಕರ ವಿರುದ್ಧ ವಾಹನ ಸಂಖ್ಯೆ ಸಮೇತ ನಗರ ಪೊಲೀಸ್ ನಿಯಂತ್ರಣ ಕೋಣೆ ದೂರವಾಣಿ ಸಂಖ್ಯೆ: 100 ಅಥವಾ 2405233 ಹಾಗೂ ವಾಟ್ಸಪ್ ಸಂಖ್ಯೆ: 9483931100 ನೇದ್ದಕ್ಕೆ ಮಾಹಿತಿ ನೀಡಲು ಸಾರ್ವಜನಿಕರಲ್ಲಿ ಕೋರಲಾಗಿದೆ.

ನಗರದಲ್ಲಿಯ ಆಟೋರಿಕ್ಷಾ ಚಾಲಕರು, ಮಾಲೀಕರು ಹಾಗೂ ಆಟೋರಿಕ್ಷಾ ಸಂಘದವರು ಕಡ್ಡಾಯವಾಗಿ ಆಟೋ ಮೀಟರ್ ಬಳಸಿ ಸರ್ಕಾರ ನಿಗಧಿ ಪಡಿಸಿದ ದರದಂತೆ ಬಾಡಿಗೆ ಪಡೆಯುವುದು ಮತ್ತು ತಮ್ಮ ವಾಹನಕ್ಕೆ ಸಂಬಂಧಿಸಿದ ಎಲ್ಲ ಸಮರ್ಪಕ ದಾಖಲಾತಿಗಳನ್ನು ಹೊಂದಿರತಕ್ಕದ್ದು, ತಪ್ಪಿದಲ್ಲಿ ಕಾನೂನು ರೀತ್ಯ ಕ್ರಮ ಕೈಕೊಳ್ಳಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಆಟೋಗಳಿಗೆ ಮೀಟರ್ ಕಡ್ಡಾಯ ಮಾಡಬೇಕೆನ್ನುವ ಕೂಗು ದಶಕಗಳ ಹಿಂದಿನಿಂದಲೂ ಇದೆ. ಪ್ರತಿ ಬಾರಿ ಅಧಿಕಾರಿಗಳು ಬದಲಾದಾಗ ಆಟೋ ಮೀಟರ್ ಕಡ್ಡಾಯ ಮಾಡುವುದಾಗಿ ಹೇಳುತ್ತಾರೆ. ಕಾರ್ಯಾಚರಣೆ ಆರಂಭಿಸಿ ಕೆಲವೇ ದಿನದಲ್ಲಿ ಮರೆತುಬಿಡುತ್ತಾರೆ. ರಾಜಕೀಯ ಒತ್ತಡಕ್ಕೂ ಮಣಿಯುತ್ತಾರೆ.

ಈ ಬಾರಿ ಏನಾಗಲಿದೆ ಕಾದು ನೋಡಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button