ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ನಡೆಯತ್ತಿರುವ ಕನ್ನಡ ವೈದ್ಯ ಬರಹಗಾರರ ಐದನೆಯ ರಾಜ್ಯ ಸಮ್ಮೇಳನದ ಸಮಾರೋಪದಲ್ಲಿ ಒಟ್ಟು 7 ನಿರ್ಣಯಗಳನ್ನು ಅಂಗೀಕರಿಸಲಾಗಿದೆ.
ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ನಾ ಸೋಮೇಶ್ವರ ಅವರು,ಕನ್ನಡ ಸಂಘ / ಬಳಗಗಳ ಮೂಲಕ ಕನ್ನಡ ವೈದ್ಯ ಸಾಹಿತ್ಯದ ಬೆಳವಣಿಗೆ,
ಪ್ರಾತಿನಿಧಿಕ ಕಥಾ ಸಂಕಲನ ಪ್ರಕಟಣೆ, ಪ್ರಸಾರಾಂಗ ಸ್ಥಾಪನೆ, ಇತರ ಪ್ರಸಾರಾಂಗಗಳ ಜೊತೆ ಸಹಕಾರ, ವೈದ್ಯಕೀಯ ಗ್ರಂಥಾಲಯಗಳಲ್ಲಿ ಕನ್ನಡ ವೈದ್ಯ ಸಾಹಿತ್ಯ ಲಭ್ಯತೆ, ಪಠ್ಯ ಪುಸ್ತಕಗಳಲ್ಲಿ ಆರೋಗ್ಯ ಸಾಹಿತ್ಯಕ್ಕೆ ಒತ್ತು, ಕನ್ನಡ ವೈದ್ಯ ಬರಹಗಾರರ ಮಾಹಿತಿ ದಾಖಲಿಸುವ ನಿರ್ಣಯ ಅಂಗೀಕರಿಸಿತು.
ಸಮಾರೋಪ ಭಾಷಣ ಮಾಡಿದ ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಹಾಗೂ ಲಿಂಗರಾಜ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಬಸವರಾಜ ಜಗಜಂಪಿ ಅವರು ಸಮಾರೋಪ ಭಾಷಣ ಮಾಡಿ, ಬೆಳಗಾವಿ ಮಹಾನಗರ ಕರ್ನಾಟಕದ ಉಪರಾಜಧಾನಿ, ಕರ್ನಾಟಕದ ಮಣಿಮುಕುಟದಂತಿರುವ ಬೆಳಗಾವಿಯ ಇಲ್ಲಿನ ಹೊರವಲಯದಲ್ಲಿ ನಿರ್ಮಾಗೊಂಡಿರುವ ಸುವರ್ಣ ವಿಧಾನಸೌಧವು ವಿಶೇಷ ಹೆಮ್ಮೆ ತಂದಿದೆ. 2011ರಲ್ಲಿ ಬೆಳಗಾವಿಯಲ್ಲಿ ಎರಡನೆಯ ವಿಶ್ವಕನ್ನಡ ಸಮ್ಮೇಳನ ಮೂರುದಿನಗಳ ಕಾಲ ಅದ್ದೂರಿಯಾಗಿ ಜರುಗಿದುದನ್ನು ಮೆಲುಕು ಹಾಕುತ್ತ, ಇದೀಗ ಎರಡು ದಿನಗಳ ಕಾಲ ವೈದ್ಯ ಬರಹಗಾರ ಸಮ್ಮೇಳನ ನಡೆಸುತ್ತಿರುವುದು ಅಭಿನಂದನೀಯ. ಕನ್ನಡದ ಭದ್ರಕೋಟೆ ಎಂಬ ಶ್ರೇಯಸ್ಸಿಗೆ ಪಾತ್ರವಾದ ಕೆಎಲ್‌ಇ ಸಂಸ್ಥೆಯ ಪ್ರೀತಿಯ ಆತಿಥ್ಯದಲ್ಲಿ ಜರುಗುತ್ತಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ.
ಖ್ಯಾತ ವೈದ್ಯರು, ಥಟ್ ಅಂತ ಹೇಳಿ ಕಾರ್ಯಕ್ರಮದ ಖ್ಯಾತಿಯ ಡಾ.ನಾ. ಸೋಮೇಶ್ವರ ಅವರು ಸರ್ವಾಧ್ಯಕ್ಷರಾಗಿರುವುದು ಹಿರಿಯ ವೈದ್ಯಸಾಹಿತಿಗೆ ಸಂದ ಸೂಕ್ತ ಗೌರವವಾಗಿದೆ.
ತುಂಬ ಅರ್ಥಪೂರ್ಣ ಹಾಗೂ ಉಪಯುಕ್ತ ಗೋಷ್ಠಿಗಳು, ಕಾರ್ಯಾಗಾರಗಳು, ರಸಪ್ರಶ್ನೆ ಕಾರ್ಯಕ್ರಮಗಳು ಯುವ ಬರಹಗಾರರನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ವೈದ್ಯಕೀಯ ಕಾಲೇಜಿನ ಕನ್ನಡ ಬಳಗಗಳು ಕೂಡ ಪೂರಕ ವಾತಾವರಣ ನಿರ್ಮಿಸುತ್ತವೆ.
ವೈದ್ಯವಿಜ್ಞಾನದ ಎಲ್ಲ ಶಿಸ್ತುಗಳಲ್ಲಿ ಪರಿಶ್ರಮದ ಸಾಧನೆಗೈದವರು ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ, ಸಮಾವೇಶದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ವೈದ್ಯ ಸಾಹಿತಿಗಳು ಪರಸ್ಪರ ಮುಖಾಮುಖಿಯಾಗಲು ಇಂಥ ಸಮಾವೇಶಗಳಿಂದ ಮಾತ್ರ ಸಾಧ್ಯ.
ಸಮಾವೇಶದ ನೆಪದಲ್ಲಿ ಹಿರಿಯ ವೈದ್ಯ ಬರಹಗಾರರು ಕಿರಿಯರೊಡನೆ, ಉದಯೋನ್ಮುಖ ಪ್ರತಿಭಾವಂತರೊಡನೆ ಅನುಸಂಧಾನ ನಡೆಸುವ ಸದವಕಾಶ ಒದಗುತ್ತದೆ. ಅದರಿಂದ ಯುವಲೇಖಕರು ತಮ್ಮಲ್ಲಿನ ಪ್ರತಿಭೆ-ಸೃಜನಶೀಲತೆಗಳನ್ನು ಬಳಸಿಕೊಂಡು ತಮ್ಮ ಆಸಕ್ತಿಯ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿಸಲು ಅಣಿಗೊಳ್ಳುತ್ತಾರೆ. ಅಂತೆಯೇ ಇಂಥ ಸಮಾವೇಶಗಳ ಉದ್ದೇಶ ಈಡೇರಿದಂತಾಗುತ್ತದೆ.
ಇಂದಿನ ಯುವಯುವತಿಯರು ತುಂಬ ಪ್ರತಿಭಾವಂತರು ಅಷ್ಟೇ ಜಾಣರು. ಅವರ ಆಸಕ್ತಿ ಯಾವುದರಲ್ಲಿದೆ ಎಂಬುದನ್ನು ಕಂಡುಕೊಂಡು ಅವರನ್ನು ಆ ನಿಟ್ಟಿನಲ್ಲಿ ರೂಪಿಸುವ ಕೆಲಸ ಆಗಬೇಕು. ಅವರಲ್ಲಿನ ರುಚಿ- ಅಭಿರುಚಿಗಳನ್ನು ಪರಿಷ್ಕರಿಸುವ ಕಾರ್ಯಕೂಡ ಆಗಬೇಕು. ಅವಕಾಶಕ್ಕಾಗಿ ಕಾಯುತ್ತಿರುವ ಯುವಶಕ್ತಿ ನಮ್ಮ ದೇಶದ ಸಂಪತ್ತು. ಅಂತೆಯೆ ಗಾಂಧೀಜಿ Youths are the salt of the Nation ಎಂದರು. ಈ ಮಾತು ಎಲ್ಲ ಕಾಲದ ಯುವಕರಿಗೂ ಅನ್ವಯಿಸುತ್ತದೆ.
ಜೀವನೋಪಾಯಕ್ಕಾಗಿ ಒಂದು ವೃತ್ತಿ, ಆನಂದಕ್ಕಾಗಿ ಒಂದು ಕಲೆಯನ್ನು ಆಶ್ರಯಿಸುವ ವ್ಯಕ್ತಿ ನೆಮ್ಮದಿಯ ಬದುಕು ನಡೆಸುತ್ತಾನೆ. ಅದರೊಂದಿಗೆ ಸಾಹಿತ್ಯಸೃಷ್ಟಿಗೆ ತೊಡಗುವವರು ದೈನಂದಿನ ವೃತಿ ಬದುಕಿನ ಒತ್ತಡದಿಂದ ಹೊರಬಂದು ಒಂದು ಅಪೂರ್ವ ವಿಶ್ರಾಂತಿ ಪಡೆಯಲು ಸಾಧ್ಯ.
ವೃತ್ತಿ ವೃತ್ತಿ ಯಾವುದೆ ಇರಲಿ, ವ್ಯಕ್ತಿಯ ಪ್ರವೃತ್ತಿ ತುಂಬ ಮುಖ್ಯ. ಸಾಹಿತ್ಯ-ಸಂಗೀತ-ನಾಟಕಗಳನ್ನು ಪ್ರೀತಿಸುವವರು ಎಲ್ಲಿದ್ದರೂ ಸುಖಿಗಳು, ಅಂತೆಯೇ ಎಲ್ಲರಿಗೂ ಒಂದಿಲ್ಲ ಒಂದು ಕ್ಷೇತ್ರದಲ್ಲಿ ಆಸಕ್ತಿಯಿರುತ್ತದೆ. ಆ ಆಸಕ್ತಿಯನ್ನು ಘೋಷಿಸಿಕೊಂಡು ಬೆಳೆಯಬೇಕು. ಆಸಕ್ತರನ್ನು ಬೆಳೆಸಬೇಕು.
ಈ ಪ್ರಪಂಚದಲ್ಲಿ ಸಾವಿಲ್ಲದ ಏಕಮಾತ್ರ ವಸ್ತುವೆಂದರೆ ಪುಸ್ತಕ ಎಂಬುದು ಜನಜನಿತ ಮಾತು. ಪುಸ್ತಕಗಳು ಜಗತ್ತನ್ನು ಆಳುತ್ತವೆ ಎಂಬ ಮಾತು ಕೂಡ ಅಷ್ಟೇ ಗಮನಾರ್ಹ. ಭಾರತ ವರ್ಷದ ಆದಿ ಕವಿ ವಾಲ್ಮೀಕಿ ಮತ್ತು ಕವಿವ್ಯಾಸರು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೆ ಅವರು ತಪಸ್ಸಿನ ಫಲವಾಗಿ ಸೃಷ್ಟಿಗೊಂಡ ರಾಮಾಯಣ ಮಹಾಭಾರತದಂತಹ ಮಹಾನ ಗ್ರಂಥಗಳು ತಮ್ಮ ಮೌಲ್ಯದರ್ಶಗಳಿಂದ ಭಾರತೀಯರಿಗೆ ಇಂದಿಗೂ ಪರಮಪೂಜ್ಯವಾಗಿವೆ. ವೆಟಿಕನ್‌ಟಿಸಿಟಿ ಚರ್ಚ್ ದಲ್ಲಿ ಅದ್ಭುತ ಶಿಲ್ಪಗಳನ್ನು ಕೆತ್ತಿದ ಭಿತಿಗಳಿಗೆ ಬಣ್ಣ ತುಂಬಿದ ಮೈಕಲ್ ಎಂಜಲೋ ಇಂದು ಇಲ್ಲ. ಆದರೆ ಭಾವ ಶ್ರೀಮಂತಿಕೆಯಿಂದ ಕೂಡಿದ ಆ ಆದ್ಭುತ ಶಿಲ್ಪಗಳು ವರ್ಣಚಿತ್ರಗಳು ಇಂದಿಗೂ ಜಗತ್ತಿನ ಎಲ್ಲ ಭಾಗಗಳ ಪ್ರವಾಸಿಗಳನ್ನು ತಮ್ಮತ್ತ ಸೂಚಿಗಲ್ಲಿನಂತೆ ಸೆಳೆಯುತ್ತವೆ. ಅದೆ ಕವಿಗಳ-ಶಿಲ್ಪಿಗಳ ಬದುಕಿನ ಸಾರ್ಥಕತೆ.
ಕನ್ನಡ ವೈದ್ಯ ಬರಹಗಾರರ ಸಾಹಿತ್ಯ ಚರಿತ್ರೆಗೆ ತನ್ನದೇ ಆದ ಶ್ರೀಮಂತ ಪರಂಪರೆಯಿದೆ. ಯುವ ಲೇಖಕರು ಆ ಚರಿತ್ರೆಯ ಅಧ್ಯಯನಕ್ಕೆ ಶೃದ್ಧೆಯಿಂದ ಒಡ್ಡಿಕೊಳ್ಳಬೇtಕು. ಪೂರ್ವಸೂರೆಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ಸಾಹಿತ್ಯ ಸೃಷ್ಟಿಗೆ ತೊಡಗಬೇಕು.
ಡಾ. ನಾ. ಸೋಮೇಶ್ವರ, ಡಾ. ಸ.ಜ.ನಾಗಲೋಟಿಮಠ, ಡಾ. ಪಿ.ಎಸ್.ಶಂಕರ, ಡಾ.t ದಯಾನಂದ ನೂಲಿ, ಡಾ. ಕರವೀರಪ್ರಭು ಕ್ಯಾಲಕೊಂಡ, ಡಾ.ಪ್ರದೀಪಕುಮಾರ ಹೆಬ್ರಿ, ಡಾ. ಎ. ನಾರಾಯಣಪ್ಪ, ಡಾ. ಸಿ.ಎಂ. ಗುರುಮೂರ್ತಿ, ಡಾ. ಎಂ.ಬಿ. ರೇಣುಕಾರ್ಯ, ಡಾ.ಶಮಂತಕಮಣಿ ರಾಜೇಂದ್ರನ್, ಡಾ. ಬಿ.ಜಿ. ಚಂದ್ರಶೇರ್ಖ, ಡಾ. ಎಂ. ಎಸ್. ರಾಜಣ್ಣ, ಡಾ. ಡಿ.ಕೆ. ಮಹಾಬಲರಾಜು, ಡಾ.ನಾ. ಮೊಗಸಾಲೆ, ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ, ಡಾ. ಕೆ. ನಾಗರಾಜರಾವ್, ಡಾ. ಓಂಪ್ರಕಾಶ್, ಡಾ. ಜಿ.ಎಸ್. ಪಾಲಾಕ್ಷ, ಡಾ. ಶಶಿಕಲಾ ಪಿ. ಕೃPlease ಷ್ಣಮೂರ್ತಿ, ಮೋಹನ್ ವರ್ಣೇಕರ ಡಾ. ಎಂ.ಬಿ. ರಾಮಮೂರ್ತಿ, ಡಾ. ವೆಂಕಟರಮಣ ಗುಪ್ತ, ಡಾ. ಯಲಗೂರೇಶ ಸಂಕನಾಳ, ಡಾ. ಎಚ್.ಎಸ್.ಅನುಪಮಾ, ಡಾ. ವೀಣಾ ಟಿ.ಎ. ಡಾ. ಎಸ್.ಎನ್. ಓಂಕಾರ, ಡಾ. ಶುಭ್ರತಾ, ಡಾ. ಎಚ್.ಎಸ್.ಪ್ರೇಮ, ಡಾ. ವೀಣಾ ಭಟ್, ಡಾ. ಅರುಣಾ ಯಡಿಯಾಳ್, ಡಾ. ಸರೋಜ, ಡಾ. ಆಶಾ ಬೆನಕಪ್ಪ, ಡಾ. ವಿರುಪಾಕ್ಷ ದೇವರಮನೆ, ಡಾ. ಪಿ.ವಿ.ಭಂಡಾರಿ, ಡಾ. ಎಸ್.ಪಿ.ಯೋಗಣ್ಣ, ಡಾ. ವಿನೋದ್ ಛಬ್ಬಿ, ಡಾ. ವಿನೋದ್ ಕುಲಕರ್ಣಿ, ಶಾರದ ಗೋಪಾಲ, ಡಾ. ವಾಣಿರಾವ್, ಡಾ. ವಿ.ಪ್ರಕಾಶ್, ಡಾ. ಅಣ್ಣಪ್ಪ ಪಾಂಗಿ, ಡಾ. ಅವಿನಾಶ ಕವಿ, ಡಾ.ಚೇತನ
ಮೊದಲಾದವರು ತಮ್ಮ ವೃತ್ತಿಯೊಂದಿಗೆ ಪ್ರೀತಿಯ ಪ್ರವೃತ್ತಿಯನ್ನು ಜೋಪಾನದಿಂದ ಕಾಪಿಟ್ಟುಕೊಂಡು ಬಂದವರು ತಮ್ಮ ಆಸಕ್ತಿಯ ವಿಷಯಗಳ ಅನುಭವಗಳನ್ನು ಹಂಚಿಕೊಂಡವರು. ಸಶಕ್ತವಾದ ಕೃತಿಗಳನ್ನು ಕೊಟ್ಟವರು. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ ಮಾಡಿದ ಸಾಧನೆ ಕೆಲವು ಹಿರಿಯರದು.
ಬರವಣಿಗೆ ತುಂಬ ಶ್ರಮ ಬೇಡುವ ಕೆಲಸ. ಅದಕ್ಕಾಗಿ ಹೆಚ್ಚು ಹೆಚ್ಚು ಓದಬೇಕು. ಸಮಯವನ್ನು ಹೊಂದಿಸಿಕೊಳ್ಳಬೇಕು. ಒಂದಿಷ್ಟು ತ್ಯಾಗ ಮಾಡಬೇಕು. ತ್ಯಾಗದಿಂದ ಮಾತ್ರ ದೊಡ್ಡ ಕೆಲಸಗಳಾಗುತ್ತವೆ ಎಂಬುದು ಅನುಭವದ ಮಾತು. ಅನುಭವವನ್ನು ಅಕ್ಷರಕ್ಕಿಳಿಸುವ ವ್ಯಕ್ತಿಗೆ ಅಭಿವ್ಯಕ್ತಿ ಸಾಮರ್ಥ್ಯವಿರಬೇಕು. ಸೌಂದರ್ಯ ದೃಷ್ಟಿಯೊರಬೇಕು. ತನ್ನಲ್ಲಿರುವ ಸೃಜನಶೀಲತೆಯನ್ನು ಸಮರ್ಪಕವಾಗಿ ಬಳಸಿಕೊಂಡು ರಚನೆಗಿಳಿದವರಿಂದ ಒಳ್ಳೆಯ ಕೃತಿಗಳು ಬರುತ್ತವೆ. ಆ ಕೃತಿಗಳು ನಮ್ಮ ಸಮಾಜವನ್ನು ತಿದ್ದುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಸ್ವಸ್ಥ ಸಮಾಜ ಕಟ್ಟುವಲ್ಲಿ ವೈದ್ಯಸಾಹಿತ್ಯ ಖಂಡಿತಾಗಿಯೂ ನೆರವು ನೀಡುತ್ತದೆ.
ವೈದ್ಯ ಬರಹಗಾರರು ಮಾನವೀಯ ಕಾಳಜಿ ಕಳಕಳಿಗಳೊಂದಿಗೆ ಸೂಕ್ಷ್ಮಸಂವೇದನಶೀಲರಾಗಿ ಕೃತಿಗಳನ್ನು ರಚಿಸಿಕೊಟ್ಟ ವರ್ತಮಾನದ ವಾರಸುದಾರರಿಗೆ ಮಾರ್ಗದರ್ಶನ ಮಾಡುವಂತಾಗಬೇಕು.
ಡಾ ರವೀಂದ್ರ ಅಣಿಗೊಳ್, ಭಾರತೀಯ ವೈಕೀಯ ಸಂಘದ ರಾಜ್ಯಾಧ್ಯಕ್ಷ ಡಾಕ್ಟರ್ ಶ್ರೀನಿವಾಸ್ ಎಸ್, ಜೆ ಎನ್ ಎಂ ಸಿ ಪ್ರಾಚಾರ್ಯ ಡಾಕ್ಟರ್ ಏನ್ ಎಸ್ ಮಹಾನ್ ಶೆಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಡಾಕ್ಟರ್ ನೇತ್ರಾವತಿ ಕವಿ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ