Belagavi NewsBelgaum NewsKannada NewsKarnataka News

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕತೆಗೆ ಬಲ: ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ, ಅದರಲ್ಲೂ ವಿಶೇಷವಾಗಿ ಶಕ್ತಿ ಯೋಜನೆಯಿಂದ ರಾಜ್ಯದ ಆರ್ಥಿಕತೆಗೆ ಬಲ ಬಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.

ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಭಾನುವಾರ ನಡೆದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಬಸ್ಸುಗಳ ಲೋಕಾರ್ಪಣೆ, ಅಪಘಾತರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಹಾಗೂ ಹಾರೂಗೇರಿ ನೂತನ ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಕ್ತಿ ಯೋಜನೆ ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಯೋಜನೆ. ಎಲ್ಲರ ಸಹಕಾರದಿಂದ ಯೋಜನೆ ಯಶಸ್ವಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಾರಿ ಶಕ್ತಿಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಮಹಿಳೆಯರಿಗೆ ಆರ್ಥಿಕವಾಗಿ ಅನುಕೂಲವಾಗಿದೆ. ಪ್ರತಿ ತಿಂಗಳು ಅವರಿಗೆ ಹಣ ಉಳಿತಾಯವಾಗುತ್ತಿದೆ. ಪಂಚ ಗ್ಯಾರಂಟಿಗಳಿಂದ ಪ್ರತಿ ತಿಂಗಳಿಗೆ ಪ್ರತಿ ಕುಟುಂಬಕ್ಕೆ 6ರಿಂದ 7 ಸಾವಿರ ರೂ. ಉಳಿತಾಯವಾಗುತ್ತಿದೆ. ಇದರ ಜೊತೆಗೆ ರಾಜ್ಯದ ಆರ್ಥಿಕತೆಯೂ ಬೆಳೆಯುತ್ತಿದೆ ಎಂದು ಅವರು ತಿಳಿಸಿದರು.

ರಸ್ತೆ ಸಾರಿಗೆ ಸಂಸ್ಥೆ ಮೊದಲು ನಷ್ಟದಲ್ಲಿತ್ತು. ಶಕ್ತಿ ಯೋಜನೆಯಿಂದಾಗಿ ಲಾಭದತ್ತ ಸಾಗುತ್ತಿದೆ. ದೇವಸ್ಥಾನಗಳಿಗೆ ಕೂಡ ಆದಾಯ ಹೆಚ್ಚಾಗಿದೆ. ಪಂಚ ಗ್ಯಾರಂಟಿಗಳಿಂದ ಆರ್ಥಿಕ ಚೇತರಿಕೆ ಉಂಟಾಗಿದೆ. ಪಕ್ಷಾತೀತವಾಗಿ ಎಲ್ಲರಿಗೂ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ವಿರೋಧ ಮಾಡಿದವರೂ ಈಗ ಬಸ್ ಗಳಲ್ಲಿ ಉಚಿತವಾಗಿ ಓಡಾಡುತ್ತಿದ್ದಾರೆ. ಶಕ್ತಿ ಯೋಜನೆಗೆ ಶಕ್ತಿ ತುಂಬಲು ಇನ್ನಷ್ಟು ಬಸ್ ಗಳನ್ನು ನೀಡಲಾಗುತ್ತಿದೆ ಎಂದು ಚನ್ನರಾಜ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ರೀತಿಯಲ್ಲಿ ಬಜೆಟ್ ಮಂಡಿಸಿ ಕೊಟ್ಟ ಭಾಷೆಯನ್ನು ಉಳಿಸಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳು ಯಾವ ಅಡ್ಡಿಯೂ ಇಲ್ಲದೆ ಮುಂದುವರಿಯಲಿದೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದ ಅವರು, ಬೆಳಗಾವಿ ದೊಡ್ಡ ಜಿಲ್ಲೆಯಾಗಿರುವುದರಿಂದ ಇನ್ನೂ ಹೆಚ್ಚಿನ ಬಸ್ ಗಳನ್ನು ಜಿಲ್ಲೆಗೆ ಕೊಡಬೇಕು ಎಂದು ಸಚಿವ ರಾಮಲಿಂಗಾ ರಡ್ಡಿ ಅವರಲ್ಲಿ ಮನವಿ ಮಾಡಿದರು.

ಸಮಾರಂಭದಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಾಸಕರಾದ ಅಶೋಕ ಪಟ್ಟಣ, ಬಾಬಾಸಾಹೇಬ್ ಪಾಟೀಲ, ಆಸೀಫ್ ಸೇಠ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ರಾಜು ಕಾಗೆ , ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ  ಎಸ್. ಭರತ್  ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button