Big Breaking… ಕೇಂದ್ರ ತಂದಿರುವ ಕಾನೂನಿಗೆ ರಾಜ್ಯ ಸರಕಾರದ ವಿರೋಧ; ಹೊಸ ತಿದ್ದುಪಡಿ ತರಲು ಚಿಂತನೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳು ಇಂದು ೦೧.೦೭.೨೦೨೪ ರಿಂದ ಜಾರಿಗೆ ಬಂದಿವೆ. ಆದರೆ, ಈ ಕಾನೂನುಗಳ ಸಮಗ್ರತೆ ಮತ್ತು ಭಾರತೀಯ ಮೌಲ್ಯಗಳನ್ನು ಮತ್ತು ಐತಿಹಾಸಿಕ ಕೆಲವು ಕಲಂಗಳನ್ನು ಎತ್ತಿಹಿಡಿಯಲು ಕೇಂದ್ರ ಸರ್ಕಾರ ಈ ಕಾನೂನು ರಚನೆ ಮಾಡುವ ಸಂದರ್ಭದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಸರಕಾರ ಹೇಳಿದೆ.
ಕಾನೂನು ಸಚಿವ ಎಚ್.ಕೆ.ಪಾಟೀಲ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಈ ಮೂರು ಕಾನೂನುಗಳನ್ನು ರಚನೆ ಮಾಡುವ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಅಭಿಪ್ರಾಯ ಸಲಹೆ/ಸೂಚನೆಗಳನ್ನು ಕೇಂದ್ರ ಗೃಹ ಸಚಿವರು, ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಸಲಹೆ-ಸೂಚನೆಗಳಿಗಾಗಿ ಕೋರಿದ್ದರು. ಈ ಮೂರು ಕಾನೂನುಗಳು ಜನರ ಬದುಕಿನ ದೃಷ್ಟಿಯಿಂದ ಹಾಗೂ ನ್ಯಾಯದಾನ ವ್ಯವಸ್ಥೆ ದೃಷ್ಟಿಯಿಂದ ಪ್ರಮುಖವಾದವುಗಳು ಎಂದು ಪರಿಗಣಿಸಿ, ಮುಖ್ಯಮಂತ್ರಿಗಳು ನನಗೆ ಪತ್ರ ಕಳುಹಿಸಿ ಈ ಮೂರು ಕರಡು ಕಾನೂನುಗಳ ಅಧ್ಯಯನ ಮಾಡಿ ಸೂಕ್ತವಾದ ಸಲಹೆಗಳನ್ನು ನೀಡಲು ಕೋರಿದ್ದರು. ನನ್ನ ಅಧ್ಯಕ್ಷತೆಯಲ್ಲಿ ಕಾನೂನು ಇಲಾಖೆ, ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಗಳು ಹಾಗೂ ನಿವೃತ್ತ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು, ನಿವೃತ್ತ ಡಿಜಿಪಿ, ಕಾನೂನು ತಜ್ಞರು, ವಿಶ್ವವಿದ್ಯಾಲಯದ ಮಟ್ಟದ ಪ್ರೋಫೇಸರ್ಗಳು, ಹಿರಿಯ ವಕೀಲರು ಒಳಗೊಂಡಂತೆ ತಜ್ಞರ ಸಮಿತಿ ಅಧ್ಯಯನ ಮಾಡಿ ಹಲವು ಮಹತ್ವದ ಶಿಫಾರಸ್ಸುಗಳನ್ನು ಮಾಡಿ, ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ ಅಧಿನಿಯಮ ಇವುಗಳ ಬಗ್ಗೆ ವಿವರವಾದ ವರದಿ ನೀಡಲಾಗಿತ್ತು.
ಮುಖ್ಯಮಂತ್ರಿಗಳು ಈ ಅಧ್ಯಯನ ಹಾಗೂ ತಜ್ಞ ಸಮಿತಿಯ ಸದಸ್ಯರ ವಿಶೇಷ ಅನುಭವದ ಹಿನ್ನೆಲೆಯ ಸಲಹೆ, ಸೂಚನೆ ಗಮನಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸುಗಳನ್ನು ಕಳುಹಿಸಿ, ರಾಜ್ಯದ ಪರವಾಗಿ ವಿವರವಾದ ಶಿಫಾರಸ್ಸುಗಳನ್ನು ಕಳುಹಿಸಲಾಗಿರುವ ಬಗ್ಗೆ ವಿವರಿಸಿ ಪತ್ರ ಬರೆದಿದ್ದರು. ರಾಜ್ಯ ಸರ್ಕಾರದ ಕಳುಹಿಸಿದ ಬಹುತೇಕ ಸಲಹೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸದೇ ತಾವು ಮಾಡಿದ ಕರಡನ್ನೇ ಯಥಾವತ್ತಾಗಿ ಜಾರಿಗೆ ತಂದಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಮೂರು ಶಾಸನಗಳನ್ನು ವಿರೋಧಿಸುವುದಲ್ಲದೇ ಈ ಮೂರು ಕಾನೂನುಗಳಿಗೆ ಸಂಬಂಧಿಸಿದಂತೆ ಕರ್ನಾಟಕದ ವ್ಯಾಪ್ತಿಯಲ್ಲಿ ಹಲವಾರು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರದ ಗಂಭೀರವಾಗಿ ಚಿಂತಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಈ ಕೆಳಕಂಡ ಮಹತ್ವದ ಅಂಶಗಳ ಹಿನ್ನೆಲೆಯಲ್ಲಿ ಮೂರು ಹೊಸ ಕಾನೂನುಗಳ ಕುರಿತು ಮರು ಚಿಂತನೆ ಕ್ರಮಕ್ಕೆ ಮುಂದಾಗಿದೆ:
1. ಸಂಸದೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಇಂತಹ ಮಹತ್ವದ ಮಾತೃ ಕಾನೂನುಗಳನ್ನು ಅಮೂಲಾಗ್ರವಾಗಿ ಬದಲಾವಣೆ ಮಾಡಿ, ಹೊಸ ಕಾನೂನನ್ನೇ ರಚನೆ ಮಾಡುವ ಸಂದರ್ಭದಲ್ಲಿ ಪ್ರಜಾಸತ್ತಾತ್ಮಕ ಸಂಪ್ರದಾಯಗಳನ್ನು ಬದಿಗೊತ್ತಿ ಚುನಾವಣೆಗಳು ಘೋಷಣೆಯಾಗಲು ಇನ್ನೂ ಕೆಲವೇ ದಿನಗಳು ಬಾಕಿಯಿರುವಂತೆ ಕಾನೂನುಗಳ ಅನುಷ್ಠಾನಗಳ ದಿನಾಂಕವನ್ನು ಹಿಂದಿನ ಸರ್ಕಾರದ ಕ್ಯಾಬಿನೆಟ್ನಲ್ಲಿಯೇ ನಿರ್ಣಯಿಸಿ ಗಂಭೀರ ಕಾನೂನಾತ್ಮಕ ಲೋಪ ಎಸಗಿದೆ. ಕೇಂದ್ರದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಈ ಹೊಸ ಸರ್ಕಾರ ಅನುಷ್ಠಾನಕ್ಕೆ ತರಬೇಕೆ ಬೇಡವೇ ಎಂಬ ಬಗ್ಗೆ ಮತ್ತು ಹಿಂದಿನ ಸರ್ಕಾರ ನಿರ್ಣಯಿಸಿದ ದಿನಾಂಕದದೇಂ ಜಾರಿಗೆ ತರಬೇಕೆ ಎಂಬ ಬಗ್ಗೆ ಕೇಂದ್ರದ ಹೊಸ ಸಚಿವ ಸಂಪುಟದಲ್ಲಿ ಚರ್ಚೆ ಆಗದೇ ಏಕಪಕ್ಷಿಯವಾಗಿ ಕೈಗೊಂಡ ನಿರ್ಣಯದ ಕ್ರಮದಿಂದ ಕಾನೂನಾತ್ಮಕ ಲೋಪವಾಗಿದೆ.
2. ರಾಜ್ಯ ಸರ್ಕಾರವು ಈ ಲೋಪಗಳು ಹಾಗೂ ಈ ಕಾಯ್ದೆ ಅನುಷ್ಠಾನದಿಂದ ಆಗುತ್ತಿರುವ ಅನಾನುಕೂಲಗಳ ಹಿನ್ನೆಲೆಯಲ್ಲಿ ವೃಥಾ ಗೊಂದಲ ಸೃಷ್ಟಿಸುವ ಈ ಕಾನೂನುಗಳನ್ನು ನಾವು ವಿರೋಧಿಸುತ್ತೇವೆ.
3. ಈ ಕಾನೂನುಗಳು ಸ್ವಾತಂತ್ರಂತ್ಯ ಹೋರಾಟದ ಇತಿಹಾಸ, ಸ್ವಾತಂತ್ರಂತ್ಯ ಹೋರಾಟದ ಪ್ರಮುಖ ಅಸ್ತ್ರ ಮೌಲಿಕವಾಗಿ ಮಾಡಿದಂತಹ ಹೋರಾಟಗಳು, ಸತ್ಯಾಗ್ರಹ, ಹೋರಾಟಗಾರರು ದೇಶದ ಲಾಂಛನ, ಧ್ವಜ, ಗೀತೆ, ರಾಷ್ಟ್ರಪಿತ ಇವೆಲ್ಲವುಗಳಿಗೆ ಗೌರವ ನೀಡುವ ಕಾನೂನು ತಿದ್ದುಪಡಿಗಾಗಿ ರಾಜ್ಯ ಸರ್ಕಾರ ನೀಡಿರುವ ಸಲಹೆಗಳನ್ನು ಕೇಂದ್ರ ಸರ್ಕಾರ ಒಪ್ಪದೇ ಇರುವುದು ದುರದೃಷ್ಟಕರ.
4. ಮುಖ್ಯಮಂತ್ರಿಯವರು ಕೇಂದ್ರಕ್ಕೆ ಕಳುಹಿಸಿರುವ ಪತ್ರ ಹಾಗೂ ನಮ್ಮ ರಾಜ್ಯದ ವರದಿ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ತಿದ್ದುಪಡಿಗಳನ್ನು ತಂದು ಈ ಕಾನೂನುಗಳನ್ನು ತಿದ್ದುಪಡಿ ಮಾಡಬೇಕು. ಅಲ್ಲಿಯವರೆಗೂ ಜಾರಿಗೊಳಿಸಿರುವುದನ್ನು ತಡೆಹಿಡಿಯಲು ಆಗ್ರಹಿಸುತ್ತೇವೆ.
5. ಒಂದು ವೇಳೆ ಕೇಂದ್ರ ಸರ್ಕಾರ ನಮ್ಮ ಈ ಮನವಿಯನ್ನು ಒಪ್ಪದೇ ಜನಾಭಿಪ್ರಾಯ ನಿರ್ಲಕ್ಷಿಸಿ ಮುಂದುವರೆದರೆ, ರಾಜ್ಯ ಸರ್ಕಾರ ಈ ಕಾನೂನುಗಳಿಗೆ ಸಂಬಂಧಪಟ್ಟಂತೆ ಕರ್ನಾಟಕದ ವ್ಯಾಪ್ತಿಯಲ್ಲಿ ಭಾರತೀಯ ಸಂವಿಧಾನದ ಅನುಚ್ಛೇದ-೭ರ ೩ನೇ ಪಟ್ಟಿಯಲ್ಲಿ ಪ್ರದತ್ತವಾಗಿರುವ ಅಧಿಕಾರ ಚಲಾಯಿಸಿ ತಿದ್ದುಪಡಿಗಳನ್ನು ತರಲು ರಾಜ್ಯ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ.
ಭಾರತೀಯ ನ್ಯಾಯ ಸಂಹಿತೆ:
೧. ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಹೆಚ್ಚು ಮಹತ್ವ ಮತ್ತು ಮೌಲ್ಯಯುತವಾದ ರೀತಿಯಲ್ಲಿ ಉಪವಾಸ ಸತ್ಯಾಗ್ರಹ ಪರಿಣಾಮಕಾರಿಯಾದ ಅಸ್ತ್ರವಾಗಿತ್ತು. ಈ ಉಪವಾಸ ಸತ್ಯಾಗ್ರಹಗಳು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ತಮ್ಮದೇ ಆದ ಅಪಾರವಾದ ಕೊಡುಗೆ ನೀಡಿದವು. ಸ್ವಾತಂತ್ರೋತ್ತರ ಭಾರತದಲ್ಲಿ ಸರ್ಕಾರಗಳ ತಪ್ಪುಗಳನ್ನು ಎತ್ತಿತೋರಿಸಲು ಮತ್ತು ಅಧಿಕಾರಸ್ಥರನ್ನು ಎಚ್ಚರಿಸಲು ಈ ಉಪವಾಸ ಸತ್ಯಾಗ್ರಹ ಒಂದು ಉಪಕರಣವಾಗಿ ಬಳಕೆಯಾಗುತ್ತಿದೆ. ಆದರೆ ಇದೀಗ ಈ ಉಪವಾಸ ಸತ್ಯಾಗ್ರಹವನ್ನು ಆತ್ಮಹತ್ಯೆಗೆ ಯತ್ನವೆಂದು ಅಪರಾಧಿಕರಣಗೊಳಿಸಲಾಗುತ್ತಿದೆ. ಪ್ರಜಾಸತ್ತಾತ್ಮಕವಾದ ಪ್ರತಿಭಟನೆಯನ್ನು ಹತ್ತಿಕ್ಕಲು ಈ ಉಪವಾಸ ಸತ್ಯಾಗ್ರಹವನ್ನು ಅಪರಾಧಿಕರಣಗೊಳಿಸಲಾಗುತ್ತಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕುವ ಯಾವುದೇ ಪ್ರಯತ್ನವನ್ನು ತಡೆಯಲು ನಾವು ಸೂಕ್ತ ತಿದ್ದುಪಡಿಯನ್ನು ತರಲಿದ್ದೇವೆ.
೨. ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಅವರನ್ನು ಅಪಮಾನಿಸುವ, ಅವರನ್ನು ಅನಾದರಿಸುವ ಮತ್ತು ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗಳಿಗೆ ಪ್ರಚೋದನಾತ್ಮಕ ಭಾಷೆ ಉಪಯೋಗಿಸುವ ಮೂಲಕ ಮಾಡುವ ಅಪಮಾನ, ಅನಾದರ, ತಿರಸ್ಕಾರಗಳನ್ನು ರಾಷ್ಟ್ರೀಯ ಐಕ್ಯತೆಯ ಮೇಲೆ ಪರಿಣಾಮಬೀರುವ ಅಪರಾಧಗಳೆಂದು ಪರಿಗಣಿಸಲು.
೩. “ಸಂಘಟಿತ ಅಪರಾಧ” ಎಂಬ ಹೊಸ ಅಪರಾಧವನ್ನು ಸೇರ್ಪಡೆ ಮಾಡಲಾಗಿದೆ. ಆದರೆ ಈ ಅಪರಾಧದ ವ್ಯಾಖ್ಯೆ ಅಸ್ಪಷ್ಟವಾಗಿದೆ ಮತ್ತು ಅಸಂಬದ್ಧವಾಗಿದೆ. ಇಂತಹ ಅಸ್ಪಷ್ಟ ಮತ್ತು ಪರಿಭಾವಿತ ವ್ಯಾಖ್ಯಾನಗಳನ್ನು ಆಧರಿಸಿ ವ್ಯಕ್ತಿಗಳ ಮೇಲೆ ಮೊಕದ್ದಮೆ ಹೂಡಲು ತನಿಖಾ ಸಂಸ್ಥೆಗಳಿಗೆ ಏಕಪಕ್ಷಿಯ ಮತ್ತು ವಿವೇಚನಾಧಿಕಾರವನ್ನು ನೀಡಿದೆ. ಈ ವ್ಯಾಖ್ಯಾನವು ಭೂಕಬಳಿಕೆ, ಗುತ್ತಿಗೆ ಹತ್ಯೆ, ಸೈಬರ್ ಅಪರಾಧಗಳು, ಇತ್ಯಾದಿ ಹೊಸ ಪರಿಭಾಷೆಗಳನ್ನು ಉಪಯೋಗಿಸುತ್ತದೆ. ಆದರೆ ಈ ಪರಿಭಾಷೆಗಳನ್ನು ಹೊಸ ಕಾಯ್ದೆಯಲ್ಲಿ ಎಲ್ಲೂ ಅರ್ಥಪೂರ್ಣವಾಗಿ ವ್ಯಾಖ್ಯಾನಿಸಿಲ್ಲ. ಸಣ್ಣಪುಟ್ಟ ಸಂಘಟಿತ ಅಪರಾಧಗಳೆಂದು ಪ್ರತ್ಯೇಕವಾಗಿ ಪರಿಗಣಿಸಿದೆ. ಆದರೆ ಎಲ್ಲಾ ಸಂಘಟಿತ ಅಪರಾಧಗಳನ್ನು ಸಮಾನವಾಗಿ ಪರಿಗಣಿಸಬೇಕಾದ ಅವಶ್ಯಕತೆಯಿದೆ. ಈ ಕುರಿತಾಗಿ ಸೂಕ್ತ ತಿದ್ದುಪಡಿ ಮಾಡಲು ಚಿಂತಿಸಲಾಗುತ್ತಿದೆ.
೪. ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವ ಅಪರಾಧಗಳಿಗೆ ಕೇವಲ ಮೂರು ವರ್ಷಗಳ ಕಾರಾಗೃಹವಾಸ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಕಲ್ಪಿಸಿದೆ. ಕಠಿಣಾತಿ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಉದ್ದೇಶದಿಂದ ಈ ಕನಿಷ್ಠ ದಂಡನೆಯನ್ನು ವಿಧಿಸುವ ತಿದ್ದುಪಡಿ ತರಲಾಗುವುದು.
೫. ಸೈಬರ್ ಅಪರಾಧಗಳಿಗೆ, ಹ್ಯಾಕಿಂಗ್, ಆರ್ಥಿಕ ಅಪರಾಧಗಳು, ಅಣ್ವಸ್ತ್ರ ಗೌಪ್ಯತೆಗಳನ್ನು ಬೇಹುಗಾರಿಕೆ ನಡೆಸುವ, ನಗದು ಸಂಗ್ರಹಿಸುವ, ಕರದಾತರ ಸ್ವರ್ಗವೆನಿಸುವ ರಾಷ್ಟ್ರಗಳಲ್ಲಿ ಹಣ ಹೂಡಿಕೆ ಮಾಡುವ ಮತ್ತು ತಂತ್ರಜ್ಞಾನದ ಮೂಲಕ ವಿಧ್ವಂಸಕ ಕೃತ್ಯವೆಸಗುವ ಇತ್ಯಾದಿ ಅಪರಾಧಿಗಳಿಗೆ ಪ್ರತ್ಯೇಕ ಅಧ್ಯಾಯದ ಮೂಲಕ ವ್ಯವಹರಿಸಲು ತಿದ್ದುಪಡಿ ತರಲಾಗುವುದು.
೬. ಮೃತದೇಹದ ಮೇಲೆ ಎಸಗಲಾಗುವ ಅತ್ಯಾಚಾರ ಮತ್ತು ಮೃತ ವ್ಯಕ್ತಿಗೆ ತೋರುವ ಅಗೌರವಗಳನ್ನು ಅಪರಾಧಿಕರಣಗೊಳಿಸಲು ತಿದ್ದುಪಡಿ ತರಲಾಗುವುದು.
ಭಾರತೀಯ ನಾಗರಿಕರ ಸುರಕ್ಷಾ ಸಂಹಿತೆ:
1. ಹೊಸ ಕಾಯ್ದೆಯಡಿಯಲ್ಲಿ ಪೋಲಿಸ್ ಕಸ್ಟಡಿ ಅವಧಿಯನ್ನು ೯೦ ದಿನಗಳವರೆಗೆ ಅವಕಾಶ ಕಲ್ಪಿಸಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆ. ಆದ್ದರಿಂದ ಇದನ್ನು ಸೂಕ್ತವಾಗಿ ಅತ್ಯಂತ ಕಡಿಮೆ ಮತ್ತು ಮಿತವಾದ ಸಮಯಕ್ಕೆ ಕಡಿತಗೊಳಿಸಲು ತಿದ್ದುಪಡಿ ತರಲಾಗುವುದು.
2. ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿತರಾದ ವ್ಯಕ್ತಿಗಳ ಆಸ್ತಿ-ಪಾಸ್ತಿಯನ್ನು ಜಪ್ತಿ ಮಾಡಲು ಪೋಲಿಸರಿಗೆ ನೀಡಲಾಗಿರುವ ಅಧಿಕಾರವನ್ನು ನ್ಯಾಯಾಲಯಗಳಿಗೆ ನೀಡಲು ತಿದ್ದುಪಡಿ ಮಾಡಲಾಗುವುದು.
ಇಂತಹ ಸುಧಾರಣಾ ಮತ್ತು ಕ್ರಾಂತಿಕಾರಿ ತಿದ್ದುಪಡಿಗಳನ್ನು ತರಲು ಸರ್ಕಾರ ಚಿಂತಿಸುತ್ತಿದೆ ಎಂದು ಎಚ್.ಕೆ.ಪಾಟೀಲ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ