ರಾಜ್ಯ ರಾಜಕೀಯದಲ್ಲಿ ತಲ್ಲಣ, ಎಲ್ಲ ಪಕ್ಷಗಳೂ ಕಂಗಾಲು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ತಲ್ಲಣ ಉಂಟಾಗಿದೆ. ಅನರ್ಹ ಶಾಸಕರು ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳಿಗೂ ಚುನಾವಣೆ ಘೋಷಣೆ ದೊಡ್ಡ ಶಾಕ್ ನೀಡಿದೆ.
ಇನ್ನೊಂದು ತಿಂಗಳಲ್ಲಿ ರಾಜ್ಯ ರಾಜಕೀಯದ ಚಿತ್ರಣವನ್ನೇ ಬದಲಾಯಿಸಬಹುದಾದ ಉಪಚುನಾವಣೆ ಘೋಷಣೆ ಶನಿವಾರ ಎಲ್ಲರನ್ನೂ ತುದಿಗಾಲ ಮೇಲೆ ನಿಲ್ಲಿಸಿದೆ. ರಾಜಕೀಯ ಪಕ್ಷಗಳ ಮುಖಂಡರೆಲ್ಲ ಪೂರ್ವ ನಿಗಧಿತ ಎಲ್ಲ ಕೆಲಸಗಳನ್ನೂ ಬದಿಗೊತ್ತಿ ಚುನಾವಣೆ ಸಿದ್ದತೆಗೆ ತೊಡಗಿದ್ದಾರೆ.
ಇಷ್ಟು ಬೇಗ ಚುನಾವಣೆ ಘೋಷಣೆಯಾಗಲಿದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಅನರ್ಹತೆಯ ಪ್ರಕರಣ ಸುಪ್ರಿಂ ಕೋರ್ಟ್ ನಲ್ಲಿ ಇತ್ಯರ್ಥವಾಗುವವರೆಗೂ ಚುನಾವಣೆ ನಡೆಯುವುದಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ ಇದೀಗ, ಚುನಾವಣೆ ಘೋಷಣೆಯ ಜೊತೆಗೆ, ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಚುನಾವಣೆ ಆಯೋಗ ಘೋಷಿಸಿರುವುದು ಬಿಜೆಪಿಗೆ ಮತ್ತು ಅನರ್ಹರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದರಿಂದ ಖುಷಿಯಾಗಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದರಲ್ಲಿ ನಿರತರಾಗಿದ್ದಾರೆ.
ಜೆಡಿಎಸ್ ವರಿಷ್ಠರಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ದೇವೇಗೌಡ ಜೆಡಿಎಸ್ ಏಕಾಂಗಿಯಾಗಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂದು ಪ್ರಕಟಿಸಿದ್ದಾರೆ.
ಕಾಂಗ್ರೆಸ್ ನಾಯಕರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ತಯಾರಿಸುತ್ತಿದ್ದು, ನಾಳೆ ಹಿರಿಯ ನಾಯಕರ ಸಭೆ ನಡೆಸುವ ಸಾಧ್ಯತೆ ಇದೆ. ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಹಾಗೂ ಹಿರಿಯ ಸಚಿವರು ಅನರ್ಹ ಶಾಸಕರ ಜೊತೆ ಸಭೆ ನಡೆಸಿದ್ದಾರೆ.
ಅನರ್ಹ ಶಾಸಕರು ನವದೆಹಲಿಗೆ ತೆರಳಿ ವಕೀಲರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ಅನರ್ಹರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎನ್ನುವ ಚುನಾವಣೆ ಆಯೋಗದ ಹೇಳಿಕೆ ವಿರುದ್ಧ ಸುಪ್ರಿಂ ಕೋರ್ಟ್ ಮೆಟ್ಟಿಲೆರಲು ಸಿದ್ದತೆ ನಡೆಸಿದ್ದಾರೆ. ಜೊತೆಗೆ, ಅನರ್ಹತೆ ಕುರಿತ ಪ್ರಕರಣ ಮುಗಿಯುವವರೆಗೆ ಚುನಾವಣೆ ಅಧಿಸೂಚನೆಗೆ ತಡೆಯಾಜ್ಞೆ ನೀಡುವಂತೆ ಕೋರಲಿದ್ದಾರೆ.
ಒಂದೊಮ್ಮೆ ತಡೆಯಾಜ್ಞೆ ಸಿಗದಿದ್ದಲ್ಲಿ ತಮ್ಮ ಬದಲಾಗಿ ಯಾರನ್ನು ಕಣಕ್ಕಿಳಿಸಬೇಕೆನ್ನುವ ಕುರಿತು ಚಿಂತನೆ ನಡೆಸಿದ್ದಾರೆ. ಎಲ್ಲ ಅನರ್ಹ ಶಾಸಕರೂ ಬೆಂಗಳೂರಿನಲ್ಲಿ ಸೇರುತ್ತಿದ್ದು, ಇಂದು ರಾತ್ರಿಯೇ ನವದೆಹಲಿಗೆ ತೆರಳುವ ಸಾಧ್ಯತೆ ಇದೆ (ಪ್ರಗತಿವಾಹಿನಿ).
ಅನರ್ಹರಿಗೆ ಶಾಕ್ -ಹಠಾತ್ ಉಪಚುನಾವಣೆ ಘೋಷಣೆ
25ರ ವರೆಗೂ ಡಿ.ಕೆ.ಶಿವಕುಮಾರ ಬಿಡುಗಡೆ ಇಲ್ಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ