ಪ್ರಗತಿವಾಹಿನಿ ಸುದ್ದಿ, ನವದೆಹಲಿ – ರಾಜ್ಯದಲ್ಲಿ ದಿನದಿಂದ ದಿನಕ್ಕೆ ತೀವ್ರವಾಗುತ್ತಿರುವ ಹಿಜಾಬ್ -ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಸಚಿವರು, ಸ್ವ ಪಕ್ಷೀಯರು ಸೇರಿದಂತೆ ಎಲ್ಲರಿಗೂ ಖಡಕ್ ಸಂದೇಶ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಎಲ್ಲ ಕಾಲೇಜು ಬಂದ್ ಮಾಡಬೇಕೆ ಎನ್ನುವ ಕುರಿತು ಇಂದು ರಾತ್ರಿಯೇ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ತೀರ್ಪು ಬರುವವರೆಗೆ ಯಾರೂ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಬಾರದು. ಎಲ್ಲರೂ ಶಾಂತವಾಗಿರಬೇಕು ಎಂದು ತಿಳಿಸಿದರು.
ವಿವಾದ ಇತ್ಯರ್ಥವಾಗುವವರೆಗೆ ಶಾಲೆ, ಕಾಲೇಜುಗಳನ್ನು ಬಂದ್ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸೇರಿದಂತೆ ಹಲವರು ಆಗ್ರಹ ಮಾಡಿರುವ ಕುರಿತು ಪ್ರಶ್ನಿಸಿದಾಗ, ಎಲ್ಲೆಲ್ಲಿ ಗಲಭೆಯಾಗಿದೆ ಅಲ್ಲೆಲ್ಲ ಕಾಲೇಜು ಬಂದ್ ಮಾಡುವಂತೆ ತಿಳಿಸಿದ್ದೇನೆ. ಇಂದು ರಾತ್ರಿ ಬೆಂಗಳೂರಿಗೆ ವಾಪಸ್ ಆದ ನಂತರ ಉನ್ನತ ಪೊಲೀಸ್ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆ ಕರೆದಿದ್ದೇನೆ. ಸಭೆಯಲ್ಲಿ ರಾಜ್ಯಾದ್ಯಂತ ಶಾಲೆ, ಕಾಲೇಜು ಬಂದ್ ಮಾಡಬೇಕೆ ಬೇಡವೇ ಎನ್ನುವ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಕಾಲೇಜಿನಲ್ಲಿ ಕೇಸರಿ ಧ್ವಜ ಹಾರಾಟ; ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ