ಏಕತಾ ಪ್ರತಿಮೆಯನ್ನೇ ಒಎಲ್ ಎಕ್ಸ್ ನಲ್ಲಿ ಮಾರಾಟಕ್ಕಿಟ್ಟ ಭೂಪ

ಪ್ರಗತಿವಾಹಿನಿ ಸುದ್ದಿ; ಅಹ್ಮದಾಬಾದ್: ದೇಶಾದ್ಯಂತ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಂಕು ಹರಡದಂತೆ ಈಗಾಗಲೇ ಲಾಕ್ ಡೌನ್ ಘೋಷಿಸಲಾಗಿದೆ. ಈ ನಡುವೆ ಕಿಡಿಗೇಡಿಯೊಬ್ಬ ವಿಶ್ವದ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸರ್ದಾರ್ ವಲ್ಲಭ ಬಾಯ್ ಪಟೇಲ್ ಏಕತಾ ಪ್ರತಿಮೆಯನ್ನು ಒಎಲ್ ಎಕ್ಸ್ ನಲ್ಲಿ ಮಾರಾಟಕ್ಕಿಟ್ಟಿದ್ದಾನೆ.

ಏಕತಾ ಪ್ರತಿಮೆಯ ಫೋಟೋವನ್ನು ಒಎಲ್‌ಎಕ್ಸ್‌ನಲ್ಲಿ ಅಪ್ಲೋಡ್ ಮಾಡಿರುವ ಅನಾಮಧೇಯ ವ್ಯಕ್ತಿಯೊಬ್ಬ ಪ್ರತಿಮೆ 30 ಸಾವಿರ ಕೋಟಿ ರೂಪಾಯಿಗೆ ಮಾರಾಟಕ್ಕಿದೆ ಎಂದು ಹಾಕಿದ್ದಾನೆ. ಈ ನಡುವೆ ಈ ಜಾಹಿರಾತನ್ನು ಯಾವುದೇ ರೀತಿಯ ಪೂರ್ವಾಪರ ವಿಚಾರಸಿದೆ ಸಾರ್ವಜನಿಕವಾಗಿ ಜಾಹಿರಾತು ಪ್ರಸಾರ ಮಾಡಿದ್ದಾಕ್ಕಾಗಿ ಕೆವಾಡಿಯಾ ಸ್ಥಳೀಯ ಆಡಳಿತ ಒಎಲ್‍ಎಕ್ಸ್ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.

ಈ ಬಗ್ಗೆ ಕೆವಾಡಿಯಾದ ಉಪ ಆಯುಕ್ತ ನಿಲೇಶ್ ದುಬೆ ಮಾಹಿತಿ ನೀಡಿದ್ದು, ಏಕತಾ ಪ್ರತಿಮೆ ದೇಶದ ಆಸ್ತಿ. ಇದನ್ನು ಕಿಡಿಗೇಡಿಯೊಬ್ಬ ಮಾರಾಟಕ್ಕಿದೆ ಎಂದು ಒಎಲ್‌ಎಕ್ಸ್‌ನಲ್ಲಿ ಜಾಹಿರಾತು ನೀಡಿದ್ದಾನೆ. ಇದನ್ನು ವಿಚಾರಿಸದೇ ಒಎಲ್‍ಎಕ್ಸ್ ಕೂಡ ಜಾಹಿರಾತು ಪ್ರಸಾರ ಮಾಡಿದೆ. ಆದ್ದರಿಂದ ಸಂಸ್ಥೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇವೆ ಎಂದಿದ್ದಾರೆ.

ಭಾರತದ ಮೊದಲ ಗೃಹ ಸಚಿವ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸ್ಮರಣಾರ್ಥವಾಗಿ ಗುಜರಾತಿನ ಸರ್ದಾರ್ ಸರೋವರ ಬಳಿ ಈ ಏಕತಾ ಪ್ರತಿಮೆ ನಿರ್ಮಿಸಲಾಗಿದ್ದು, 2018ರ ಅಕ್ಟೋಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರತಿಮೆ ಅನಾವರಣ ಮಾಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button