Kannada NewsKarnataka NewsLatest

ವಿಶ್ವಕರ್ಮ ಅಧ್ಯಯನ ಕೇಂದ್ರ ಸ್ಥಾಪನೆಗೆ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ರಾಜ್ಯದಲ್ಲಿ ವಿಶ್ವಕರ್ಮ ಅಧ್ಯಯನ ಕೇಂದ್ರ ಸ್ಥಾಪನೆ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು  ಭರವಸೆ ನೀಡಿದರು.

 ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಿಂದುಳಿದವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ಇರಬೇಕಾಗುತ್ತದೆ. ಕರಕುಶಲಕರ್ಮಿಗಳಿಗೆ ಇಲಾಖೆ ರಚಿಸಬೇಕು ಎಂಬ ಬೇಡಿಕೆಯ ಬಗ್ಗೆ ಪರಿಶೀಲನೆ ಮಾಡಲಾಗುವುದು. ನೇಕಾರರಿಗೆ ಇರುವ ಸೌಲಭ್ಯಗಳ ಮಾದರಿಯಲ್ಲಿ ಸೌಲಭ್ಯಗಳು ಹಾಗೂ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂಬ ಬೇಡಿಕೆ ಇದ್ದು ಅನುದಾನ  ಹೆಚ್ಚು ಮಾಡಲಾಗುವುದು ಎಂದು ಭರವಸೆ  ನೀಡಿದರು. 

*ಎಲ್ಲ ಧರ್ಮಗಳಿಗಿಂತ ಮನುಷ್ಯ ಧರ್ಮ ಮಿಗಿಲು*

ನಾವು ಸಮಾಜದಲ್ಲಿ ಹುಟ್ಟಿದ ಮೇಲೆ ಸಮಾಜದ ಋಣ ತೀರಿಸಬೇಕು. ಹಾಗೆ ಮಾಡುವುದೇ ನಮ್ಮೆಲ್ಲರ ಕರ್ತವ್ಯ. ನಾವು ಎಷ್ಟು ದಿನ ಬದುಕಿರುತ್ತೇವೆ ಎನ್ನುವುದು ಮುಖ್ಯ ಅಲ್ಲ. ರಾಷ್ಟ್ರ ಕವಿ ಕುವೆಂಪು ಹೇಳುವಂತೆ ಎಲ್ಲ ರೂ ವಿಶ್ವಮಾನವರಾಗಿಯೇ ಹುಟ್ಟಿದರೂ, ಬೆಳೆಯುವಾಗ ಅಲ್ಪ ಮಾನವರಾಗುತ್ತಾರೆ. ನಾವು ವಿಶ್ವಮಾನವರಾಗಲು ಪ್ರಯತ್ನ ಮಾಡುವುದೇ ಸಮಾಜಕ್ಕೆ ಕೊಡುವ ಕೊಡುಗೆ. ನಾವು ಮನುಷ್ಯರಾಗಿ ಬಾಳುವ ಪ್ರಯತ್ನ ಮಾಡಬೇಕು. ಧರ್ಮ, ಧರ್ಮಗಳ ನಡುವೆ ಸಂಘರ್ಷ, ಜಾತಿ ಜಾತಿಗಳ  ನಡುವೆ ಸಂಘರ್ಷ ಉಂಟು ಮಾಡುತ್ತಿದ್ದಾರೆ. ಧರ್ಮ ಬದುಕಿನ ಮಾರ್ಗ. ಮನುಷ್ಯನ ಬದುಕಿಗಾಗಿ ಧರ್ಮವಿದೆ. ಯಾವ ಧರ್ಮ ಮನುಷ್ಯನನ್ನು ದ್ವೇಷಿಸುತ್ತದೆಯೋ ಅದನ್ನು ಧರ್ಮ ಎಂದು ಕರೆಯಲಾಗುವುದಿಲ್ಲ. ಬಸವಣ್ಣ ಹೇಳಿದಂತೆ  ದಯೆಯೇ ಧರ್ಮದ ಮೂಲ. ಎಲ್ಲ ಧರ್ಮಗಳಿಗಿಂತ ಮನುಷ್ಯ ಧರ್ಮ ಮಿಗಿಲು. ಮನುಷ್ಯರಾಗಲು ಪ್ರಯತ್ನಿಸೋಣ. ನಾವು ಸಮಾಜದ ಋಣ ತೀರುಸುವ ಕೆಲಸ ಮಾಡಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.

*ಹಿಂದುಳಿದ ಸಮಾಜಗಳಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬದೇ ಹೋದರೆ ಅವು ಮುಖ್ಯ ವಾಹಿನಿಗೆ ಬರುವುದು ಕಷ್ಟ*

ಹಿಂದೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅನೇಕ ಹಿಂದುಳಿದ ಜಾತಿಗಳ ಜಯಂತಿ ಹಾಗೂ ನಿಗಮಗಳನ್ನೂ ರಚನೆ ಮಾಡಲು ತೀರ್ಮಾನ ಮಾಡಿ ಹಣವನ್ನೂ ಒದಗಿಸಿದ್ದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಸಮಾಜಗಳಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬದೇ ಹೋದರೆ ಅವು ಮುಖ್ಯ ವಾಹಿನಿಗೆ ಬರುವುದು ಕಷ್ಟವಾಗುತ್ತದೆ. 

*ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಂತಾಗ ಮಾತ್ರ ಬದಲಾವಣೆ*

 ಆಯಾ ಜಾತಿಯವರೇ ತಮ್ಮ ಜಯಂತಿಗಳನ್ನು ಆಚರಣೆ ಮಾಡಿದರೆ ಜಾತಿ ಬಣ್ಣ ಬರುತ್ತದೆ. ಸರ್ಕಾರ ಮಾಡಿದರೆ ಜಾತಿ ಬಣ್ಣ ಬರುವುದಿಲ್ಲ. ನಾವು ಸರ್ವರನ್ನೂ ಒಳಗೊಂಡ ಸಮಾಜ ನಿರ್ಮಾಣ ಮಾಡುವುದರಲ್ಲಿ ನಂಬಿಕೆವುಳ್ಳವರು. ಕೆಲವೇ ಜಾತಿಗಳ ಸಮಾಜ ನಿರ್ಮಾಣವಾಗಬಾರದು. ನಮ್ಮಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಇದೆ. ಅನಾದಿ ಕಾಲದಿಂದಲೂ ನೈಪುಣ್ಯತೆ, ಕೌಶಲ್ಯವಿದ್ದರೂ ಆರ್ಥಿಕವಾಗಿ ಸಬಲರಲ್ಲ. ಸಬಲರಾಗಲು ಆರ್ಥಿಕ, ಸಾಮಾಜಿಕ  ರಾಜಕೀಯ ಅವಕಾಶಗಳು ಸಿಗಬೇಕು. ಇಲ್ಲದಿದ್ದರೆ ಯಾವ ಜಾತಿಯೂ ಮೇಲೆ ಬರಲು ಸಾಧ್ಯವಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದದ್ದು ಸಾರ್ಥಕವಾಗಲು, ರಾಜಕೀಯ ಪ್ರಜಾಪ್ರಭುತ್ವ ಇದ್ದರೆ ಸಾಲದು, ಆರ್ಥಿಕ ಸಾಮಾಜಿಕ ಪ್ರಜಾಪ್ರಭುತ್ವ ಇರಬೇಕು ಎಂದು ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ರಾಜಕೀಯ ಪ್ರಜಾಪ್ರಭುತ್ವ ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಂತಾಗ ಮಾತ್ರ ಬದಲಾವಣೆ ಸಾಧ್ಯವಾಗುತ್ತದೆ ಎಂದು ಪುನರುಚ್ಚರಿಸಿದರು. 

 ಸ್ವಾತಂತ್ರ್ಯ ಗಳಿಸಿ 76 ವರ್ಷಗಳಾಗಿದ್ದರೂ ಸಾಮಾಜಿಕ, ಆರ್ಥಿಕ ಅಸಮಾನತೆ ಇದೆ. ಸಂವಿಧಾನದಲ್ಲಿ ಎಲ್ಲರೂ ಸಮಾನರು.ಸಂವಿಧಾನದ ಧ್ಯೇಯೋದ್ದೇಶಗಳನ್ನು ಜಾರಿ ಮಾಡುವ ಬದ್ಧತೆ ಇರುವವರ ಬಳಿ ಅಧಿಕಾರ ಇದ್ದರೆ  ಸಮಾನತೆ ತರಲು ಸಾಧ್ಯ.

*ಎಲ್ಲರನ್ನೂ ಒಳಗೊಂಡ ಸಮಾಜ ನಿರ್ಮಾಣ ಮಾಡಬೇಕು*

 ಸಂವಿಧಾನದ ವಿರುದ್ಧ ಇರುವವರ ಬಳಿ ಅಧಿಕಾರ ಇದ್ದರೆ ಸಾಧ್ಯವಿಲ್ಲ. ಬಹುತ್ವದ ಸಮಾಜ ಉಳ್ಳ ನಾವು ಎಲ್ಲರನ್ನೂ ಒಳಗೊಂಡ ಸಮಾಜ ನಿರ್ಮಾಣ ಮಾಡಬೇಕು. ವೈವಿಧ್ಯ ತೆಯಲ್ಲಿ ಏಕತೆ ಕಾಣಬೇಕು. ಒಂದು ಧರ್ಮ ಆಧಾರಿತ ದೇಶವಲ್ಲ ಇದು. ಒಂದು ಜಾತಿ, ಭಾಷೆ ಆಧಾರಿತ ದೇಶವಲ್ಲ. ಸಹಿಷ್ಣುತೆ, ಸಹಬಾಳ್ವೆ ಎಂದು ಸಂವಿಧಾನ ಹೇಳುತ್ತದೆ ಎಂದರು.

*ನಿಮ್ಮ ಧರ್ಮ ಪ್ರೀತಿಸಿ: ಇನ್ನೊಂದು ಧರ್ಮ  ದ್ವೇಷಿಸದಿರಿ*

ಪ್ರತಿಯೊಬ್ಬರೂ ನಮ್ಮ ನಮ್ಮ ಧರ್ಮ ಪ್ರೀತಿಸಿ, ಗೌರವಿಸಿ. ಆದರೆ ಇನ್ನೊಂದು ಧರ್ಮವನ್ನು  ದ್ವೇಷಿಸಬಾರದು. ಅವರನ್ನೂ ಪ್ರೀತಿ ಗೌರವದಿಂದ ಕಂಡಾಗ ಮಾತ್ರ ನಾವು ಮನುಷ್ಯರಾಗಲು ಸಾಧ್ಯ.  ಕಾಂಗ್ರೆಸ್ ಅನೇಕ ಜನರಿಗೆ ರಾಜ್ಯಸಭಾ, ವಿಧಾನಪರಿಷತ್ ಸದಸ್ಯರಾಗುವ ಅವಕಾಶ ನೀಡಿದ್ದೇವೆ. ಬಿಂಬಾ  ನಾಯ್ಕರ್, ರಘು ಆಚಾರ್ಯ ಅವರನ್ನು ಕಾಂಗ್ರೆಸ್ ಸರ್ಕಾರ ನೇಮಿಸಿದ್ದು. ಅವಕಾಶ ದೊರೆತಾಗ ರಾಜಕೀಯ ಶಕ್ತಿ ತುಂಬುವ ಕೆಲಸ ಮಾಡಲಾಗಿದೆ. ರಾಜಕೀಯ ಅಧಿಕಾರವಿಲ್ಲದಿದ್ದರೆ, ನಿಮ್ಮ ಪರವಾಗಿ ಧ್ವನಿ ಎತ್ತುವವರು ಇರುವುದಿಲ್ಲ ಎಂದರು. 

*ಜಾತಿ ವ್ಯವಸ್ಥೆಗೆ  ಚಾಲನೆ ಇಲ್ಲ*

ಶಿಕ್ಷಣ ಪಡೆಯದಿದ್ದರೆ  ಸಮಾಜ ಮುಂದುವರೆಯುವುದಿಲ್ಲ. ಜಾತಿ ವ್ಯವಸ್ಥೆ ಜಡತ್ವದಿಂದ ಕೂಡಿದ್ದು, ಅದಕ್ಕೆ ಚಲನೆ ಇಲ್ಲ. ಸಾಮಾಜಿಕ ವ್ಯವಸ್ಥೆಗೆ ಆರ್ಥಿಕ, ಸಮಾಜಿಕ ಶಕ್ತಿ ಇಲ್ಲದಿದ್ದರೆ, ವ್ಯವಸ್ಥೆ ಬದಲಾಗುವುದಿಲ್ಲ. ಇದು ಬಂದಾಗ ಮಾತ್ರ  ಚಲನೆ ಸಾಧ್ಯ. ಬದಲಾವಣೆಗೆ ವಿರುದ್ಧ ಇರುವವರು ಸಾಮಾಜಿಕ ವೈರಿಗಳು ಎಂದರು.

*ಹಿಂದೇಟು ಹಾಕುವುದಿಲ್ಲ*

ಸರ್ಕಾರ ಆಚರಿಸುವ  ಜಯಂತಿ ಕಾರ್ಯಕ್ರಮ ಗಳಲ್ಲಿ ಭಾಗವಹಿಸಲು ನಾನು ಹಿಂದೇಟು ಹಾಕುವುದಿಲ್ಲ. ಸರ್ಕಾರದ ವತಿಯಿಂದ ಜನಾಂಗದ ಕಾರ್ಯಕ್ರಮ ಆಚರಿಸಿದರೆ ಹೆಚ್ಚು ಮಹತ್ವ ಇರುತ್ತದೆ. ಹಾಗಾಗಿ ಸರ್ಕಾರವೇ ಅನೇಕ ಹಿಂದುಳಿದ ಜಯಂತ್ಯೋತ್ಸವವನ್ನು ಆಚರಣೆ ಮಾಡುತ್ತಿದೆ ಎಂದರು.

*ನಾನು ನಾನೇ-ನಾನು ದೇವರಾಜ ಅರಸು ಆಗಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ*

*ನೆಹರೂ-ಇಂದಿರಾಗಾಂಧಿ-ದೇವರಾಜ ಅರಸು ಎಲ್ಲರೂ ಭಿನ್ನವಾಗಿದ್ದರು. ಆದರೆ ಸಾಮಾಜಿಕ ನ್ಯಾಯವನ್ನು ಪಾಲಿಸುತ್ತಿದ್ದರು* 

*ನಾನು ಯಾವತ್ತೂ ವಿಶ್ವಕರ್ಮ ಸಮುದಾಯದ ಜತೆಗೆ ಇರುತ್ತೇನೆ* 

*ಭಾಷಣದ ಮಾತಿಗಿಂತ ಯಾರಲ್ಲಿ ಬದ್ಧತೆ-ಕಾಳಜಿ ಇದೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ: ಸಿಎಂ ಸಿದ್ದರಾಮಯ್ಯ ಕರೆ* 

ನನ್ನನ್ನು ಎಲ್ಲರೂ ಎರಡನೇ ದೇವರಾಜ ಅರಸು ಅಂತಾರೆ. ಆದರೆ, ದೇವರಾಜ ಅರಸು ದೇವರಾಜ ಅರಸುನೇ ಸಿದ್ದರಾಮಯ್ಯ ಸಿದ್ದರಾಮಯ್ಯನೇ. ನಾನು ದೇವರಾಜ ಅರಸು ಆಗಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. 

ಕೆಲವರು ನನ್ನನ್ನು ಎರಡನೇ ದೇವರಾಜು ಅರಸು ಅಂತಾರೆ. ಅದು ಸಾಧ್ಯವಿಲ್ಲ. ನಾನು ಅರಸು ಆಗಲು ಸಾಧ್ಯವಿಲ್ಲ. ಅರಸು, ಇಂದಿರಾಗಾಂಧಿ, ನೆಹರೂ ಎಲ್ಲರೂ ಭಿನ್ನವಾಗಿದ್ದರು. ಆದರೆ ಇವರೆಲ್ಲರ ಸಾಮಾಜಿಕ ಕೊಡುಗೆಗಳು ಅಪಾರ.  ಯಾರ ಕೊಡುಗೆಗಳನ್ನೂ ಅಲ್ಲಗಳೆಯಲಾಗದು. ಒಬ್ಬರು ಇನ್ನೊಬ್ಬರಾಗಲು ಸಾಧ್ಯವಿಲ್ಲ. ಹಾಗೆಯೇ ನಾನು ದೇವರಾಜ  ಅರಸು ಆಗಲು ಸಾಧ್ಯವಿಲ್ಲ. ನಾವು ರೂಪಿಸುವ ಕಾಳಜಿ ಮತ್ತು ಕಾರ್ಯಕ್ರಮಗಳಲ್ಲಿ ಸಾಮಾಜಿಕ ನ್ಯಾಯ ಇರುತ್ತದೆ. ಎಲ್ಲಾ ಹಿಂದುಳಿದ ಜಾತಿ, ಸಮುದಾಯಗಳು ಸಮಾನ ಅವಕಾಶಗಳನ್ನು ಪಡೆದುಕೊಂಡು ಮುಂದುವರೆದಾಗ ಮಾತ್ರ ಇಡೀ ಸಮಾಜ ಮುಂದುವರೆಯುತ್ತದೆ. ಕೆಲವೇ ಜಾತಿ-ಸಮುದಾಯಗಳು ಅವಕಾಶಗಳನ್ನು ಪಡೆದುಕೊಂಡು ಉಳಿದವುಗಳು ಅವಕಾಶ ವಂಚಿತರಾಗುತ್ತಿದ್ದರೆ ಅದನ್ನು ಪ್ರಗತಿ ಪಥದಲ್ಲಿರುವ ಸಮಾಜ ಎಂದು ಕರೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. 

ಬಿಂಬಾರಾಯ್ಕರ್, ರಘು ಆಚಾರ್ಯ ಸೇರಿ ವಿಶ್ವಕರ್ಮ  ಸಮುದಾಯದ ಹಲವರಿಗೆ ರಾಜಕೀಯ ಪ್ರಾತಿನಿಧ್ಯ ಮತ್ತು ಅಧಿಕಾರವನ್ನು ಒದಗಿಸಿಕೊಟ್ಟಿದೆ. ರಘು ಆಚಾರ್ಯ ದುಡುಕಿ ನಮ್ಮನ್ನೆಲ್ಲಾ ಬಿಟ್ಟು ಕಾಂಗ್ರೆಸ್ ತೊರೆದರು. ನಾನು ಎಷ್ಟು ಹೇಳಿದರೂ ಕೇಳಲಿಲ್ಲ ಎಂದರು. 

ಕಾಂಗ್ರೆಸ್ ಪ್ರತಿಯೊಂದು ಜಾತಿ, ಸಮುದಾಯಗಳಿಗೂ ಅವಕಾಶ ಮತ್ತು ಅಧಿಕಾರವನ್ನು ನಿರಂತರವಾಗಿ ಒದಗಿಸುತ್ತಲೇ ಬಂದಿದೆ. ಆ ಮೂಲಕ ಹಿಂದುಳಿದ ಸಮುದಾಯಗಳಿಗೆ, ದಲಿತ ಸಮುದಾಯಗಳಿಗೂ ಶಕ್ತಿ ತುಂಬುತ್ತಿದೆ. ಒಂದು ಕೋಟಿ ರೂಪಾಯಿವರೆಗಿನ ಕಾಂಟ್ರಾಕ್ಟ್ ಕೆಲಸಗಳಿಗೆ ಮೀಸಲಾತಿ ಒದಗಿಸಿದ್ದು ನಾವೆ ತಾನೇ ಎಂದು ನೆನಪಿಸಿದ ಮುಖ್ಯಮಂತ್ರಿಗಳು ನನಗೆ ಅಧಿಕಾರ ಎನ್ನುವುದು ಸಾಮಾಜಿಕ ನ್ಯಾಯವನ್ನು ಆಚರಿಸುವ, ಪಾಲಿಸುವ ಒಂದು ಸಾಧನ ಎಂದು ವಿವರಿಸಿದರು. 

ವಿಶ್ವಕರ್ಮ ಸಮುದಾಯದ ಮಕ್ಕಳಿಗೆ ಶಾಲೆ, ಹಾಸ್ಟೆಲ್ ಗಳನ್ನು ನಿರ್ಮಿಸುವ ಕಾರಣಕ್ಕೆ ಸರ್ಕಾರದಿಂದ ಜಾಗ ಕೇಳಿದ್ದೀರಿ. ಎಲ್ಲಾ ಸಮುದಾಯಗಳೂ ಜಾಗ ಪಡೆದುಕೊಂಡಿವೆ. ನೀವೂ ಪಡೆದುಕೊಳ್ಳಿ. ನಮ್ಮ ಸರ್ಕಾರ ನಿಮಗೂ ಜಾಗ ಒದಗಿಸುತ್ತದೆ ಮಕ್ಕಳನ್ನು ಹೆಚ್ಚೆಚ್ಚು ಶಿಕ್ಷಿತರನ್ನಾಗಿ ಮಾಡಿ ಎಂದು ಹಾರೈಸಿದರು.

ವಿಶ್ವಕರ್ಮ ನಿಗಮಕ್ಕೆ ಮೊದಲಿನಿಂದಲೂ ಹೆಚ್ಚು ಅನುದಾನ ಕೊಡುತ್ತಾ ಬಂದಿರುವವರು ನಾವೇ. ಈಗ ಇನ್ನಷ್ಟು ಹೆಚ್ಚಿಸಬೇಕು ಎನ್ನುವ ಬೇಡಿಕೆ ಇದೆ. ಆ ಬಗ್ಗೆ ಪರಿಶೀಲಿಸಲಾಗುವುದು. ಚುನಾವಣೆ ಬಂದಾಗ ಭಾಷಣಗಳಲ್ಲಿ ಕಾಳಜಿಗಳು ಕೇಳಿಸುತ್ತವೆ. ಆದರೆ, ಯಾರಿಗೆ-ಯಾವ ಪಕ್ಷಕ್ಕೆ ನಿಜವಾದ ಬದ್ಧತೆ ಇದೆ ಎನ್ನುವುದನ್ನು ಗುರುತಿಸಿ ತೀರ್ಮಾನ ತೆಗೆದುಕೊಳ್ಳಿ. ಕಾಳಜಿ, ಬದ್ಧತೆ ಇಲ್ಲದವರ ಕೈಗೆ ಅಧಿಕಾರ ಕೊಟ್ಟು ಸಮಾಜಕ್ಕೆ ಒಳ್ಳೆಯದು ಆಗಬೇಕು ಎಂದು ತಲೆ ಚಚ್ಚಿಕೊಂಡರೆ ಸಾಧ್ಯವಿಲ್ಲದ ಮಾತು. ಆದ್ದರಿಂದ ಸಾಮಾಜಿಕ ನ್ಯಾಯವನ್ನು ಯಾರು, ಯಾವ ಪಕ್ಷದವರು ಪಾಲಿಸುತ್ತಿದ್ದಾರೆ ಎನ್ನುವುದನ್ನು ಪ್ರಾಮಾಣಿಕವಾಗಿ ಗ್ರಹಿಸಿ ಎಂದು ಕರೆ ನೀಡಿದರು. 

ಮಧುಗಿರಿ ನಿಟ್ಟರಹಳ್ಳಿ ಅಭಯಹಸ್ತೆ ಆದಿಲಕ್ಷ್ಮಿ ಸಂಸ್ಥಾನ ಮತ್ತು ವಿಶ್ವಕರ್ಮ ಸಂಪನ್ಮೂಲ ಮಠದ ಶ್ರೀ ಶ್ರೀ ಶ್ರೀ ಡಾ.ನೀಲಕಂಠಚಾರ್ಯ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮುದಾಯದ ಮುಖಂಡರು ಮತ್ತು ಇಲಾಖೆಯ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button