*ಸ್ಟಿಂಗ್ ಆಪರೇಷನ್ ಪ್ರಕರಣ*: *ಬಂಧನದ ಭೀತಿಯಿಂದ ವಿದೇಶಕ್ಕೆ ಹಾರಿದ ಕೃಪಾ ಆಳ್ವ?*

ಪ್ರಗತಿವಾಹಿನಿ ಸುದ್ದಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿರುವ ನಡುವೆಯೇ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ವಿದೇಶಕ್ಕೆ ತೆರಳಿದ್ದಾರೆ. ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಪ್ರಕ್ರಿಯೆಯಿಂದ ದೂರ ಉಳಿಯಲು ವಿದೇಶಕ್ಕೆ ತೆರಳಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬರ್ತಿದೆ. ಆದರೆ, ವಿದೇಶ ಪ್ರಯಾಣದ ಹಿಂದಿನ ನಿಖರ ಕಾರಣದ ಬಗ್ಗೆ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ.
ಇತ್ತೀಚೆಗಷ್ಟೇ ಕೃಪಾ ಆಳ್ವ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿ ಸುದೀರ್ಘ ಹೇಳಿಕೆ ದಾಖಲಿಸಿದ್ದರು. ವಿಚಾರಣೆ ವೇಳೆ, ಮುಂದಿನ ದಿನಗಳಲ್ಲಿ ಯಾವಾಗ ಕರೆದರೂ ಕಡ್ಡಾಯವಾಗಿ ಹಾಜರಾಗಬೇಕು ಎಂದು ಪೊಲೀಸರು ಸೂಚನೆ ನೀಡಿ ಕಳುಹಿಸಿದ್ದರು. ಆದರೆ, ಹೇಳಿಕೆ ದಾಖಲಿಸಿದ ಬಳಿಕ ಬೆಂಗಳೂರಿನಿಂದ ಜಪಾನ್ಗೆ ತೆರಳಿ, ಅಲ್ಲಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ, ಪ್ರಕರಣದ ತನಿಖೆಯ ನಡೆ ಮತ್ತು ಪ್ರಗತಿ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಪೊಲೀಸರು ಬಂಧಿಸಬಹುದೆಂಬ ಆತಂಕದಿಂದ ಕೃಪಾ ಆಳ್ವ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸದೆ ವಿದೇಶಕ್ಕೆ ತೆರಳಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವ ಅವರಿಗೆ ನೋಟಿಸ್ ನೀಡುವಂತೆ ಕೆಪಿಸಿಸಿಯಿಂದ ಸೂಚನೆ ಬಂದಿತ್ತು ಎನ್ನಲಾಗಿದೆ. ಆದರೂ, ಇದುವರೆಗೂ ಕೆಪಿಸಿಸಿಯಿಂದ ಅಧಿಕೃತ ನೋಟಿಸ್ ಜಾರಿಯಾಗಿಲ್ಲ. ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಕೃಪಾ ಆಳ್ವ ಅವರ ವಿದೇಶ ಪ್ರಯಾಣ ಮತ್ತು ಮುಂದಿನ ಕಾನೂನು ಕ್ರಮಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




