Kannada NewsKarnataka NewsLatestPolitics

*ಸ್ಟಿಂಗ್, ಹನಿಟ್ರ್ಯಾಪ್ ನಮ್ಮ ಸಂಸ್ಕೃತಿ ಅಲ್ಲ*: *ಸಚಿವ ಎಸ್.ಎಸ್. ಮಲ್ಲಿಕಾರ್ಜುನ್*

ಪ್ರಗತಿವಾಹಿನಿ ಸುದ್ದಿ: ಸ್ಟಿಂಗ್ ಆಪರೇಷನ್ ಮತ್ತು ಹನಿಟ್ರ್ಯಾಪ್ ನಮ್ಮ ಸಂಸ್ಕೃತಿ, ಸಂಸ್ಕಾರವಲ್ಲ. ಈಗ ಎಲ್ಲೆಂದರಲ್ಲಿ ಕ್ಯಾಮೆರಾ ಇಟ್ಟು ವಿಡಿಯೋ ಮಾಡಲಾಗುತ್ತಿದೆ. ಇಂತಹ ಘಟನೆಗಳು ನಡೆಯಬಾರದು ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ.

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಮತ ಚಲಾಯಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಸ್ಟಿಂಗ್ ಆಪರೇಷನ್ ಕುರಿತು ಪ್ರತಿಕ್ರಿಯಿಸಿದರು. ಯತೀಂದ್ರ ಏನು ಹೇಳಿಕೆ ನೀಡಿದ್ದಾರೆ ಎಂಬುದು ತಮಗೆ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದರು.

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ಚಿನ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಮಲ್ಲಿಕಾರ್ಜುನ್ ಹೇಳಿದರು. ಪಕ್ಷದ ಕಾರ್ಯಕರ್ತರು ಪ್ರತಿಯೊಬ್ಬರ ಬಳಿಗೂ ತೆರಳಿ ಮತಯಾಚನೆ ಮಾಡಿದ್ದಾರೆ. ಕಾಂಗ್ರೆಸ್ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಿದ್ದು, ಗೆಲುವಿನ ನಿರೀಕ್ಷೆಯಿದೆ. ಈ ಚುನಾವಣೆ ಮುಂದಿನ ಚುನಾವಣೆಗೆ ನೂರಕ್ಕೆ ನೂರರಷ್ಟು ದಿಕ್ಸೂಚಿಯಾಗಲಿದೆ ಎಂದು ತಿಳಿಸಿದರು.

ನಂದಿನಿ ಹಾಲಿನ ದರ ಹೆಚ್ಚಳದ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಆದ್ದರಿಂದ ಈ ಕುರಿತು ನಂತರ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದರು. ಮೈಸೂರು ದಸರಾ ಸಂದರ್ಭದಲ್ಲಿ ಸಚಿವರನ್ನು ತಡೆಹಿಡಿದ ವಿಚಾರವಾಗಿ ಮಾತನಾಡಿದ ಮಲ್ಲಿಕಾರ್ಜುನ್, ಮುಖ್ಯಮಂತ್ರಿ ಈಗಾಗಲೇ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಿದ್ದಾರೆ. ಏನಾಗಿದೆ ಎಂಬ ಕುರಿತು ವರದಿ ಬಂದ ಬಳಿಕ ಮುಖ್ಯ ಕಾರ್ಯದರ್ಶಿ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button