ಹುಕ್ಕೇರಿ ಬಳಿ 3 ಬಸ್ ಗಳಿಗೆ ಕಲ್ಲು ತೂರಾಟ: ಓರ್ವರಿಗೆ ಗಾಯ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಹುಕ್ಕೇರಿ ತಾಲೂಕಿನ ಬೆನಕನಹೊಳಿ ಬಳಿ ಗುರುವಾರ ರಾತ್ರಿ 3 ಬಸ್ ಗಳಿಗೆ ಕಲ್ಲು ತೂರಲಾಗಿದೆ. ಘಟನೆಯಲ್ಲಿ ವ್ಯಕ್ತಿಯೋರ್ವರಿಗೆ ಗಾಯವಾಗಿದೆ.
ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕರ್ನಾಟಕ ಸಾರಿಗೆ ಸಂಸ್ಥೆಯ ಒಂದು ಹಾಗೂ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಎರಡು ಬಸ್ ಗಳಿಗೆ ಕಲ್ಲು ತೂರಲಾಗಿದ್ದು, ಬಸ್ ನ ಗಾಜುಗಳು ಒಡೆದಿವೆ. ಮೂರೂ ಬಸ್ ಒಂದರ ಹಿಂದೆ ಒಂದು ಬರುತ್ತಿದ್ದವು. 2 ಬಸ್ ಮುಂಬಾಗದ ಗ್ಲಾಸ್ ಒಡೆದಿದ್ದರೆ, ಒಂದು ಬಸ್ ನ ಪಕ್ಕದ ಗ್ಲಾಸ್ ಒಡೆದಿದೆ.
ಬಸ್ ಪ್ರಯಾಣಿಕ ರಮೇಶ್ ಗುಣದರ ಚಿವಟೆ (ವಯಸ್ಸು 55, ಸಾ ಕಾಮತ್ಯಾಟ್ಟಿ, ಹುಕ್ಕೇರಿ ಅಗ್ನಿಶಾಮಕ ಠಾಣೆಯ ಚಾಲಕ) ಎನ್ನುವವರ ಹಣೆಗೆ ಕಲ್ಲೇಟು ಬಿದ್ದಿದೆ. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ. ಎಸ್ಪಿ ಭೀಮಾಶಂಕರ ಗುಳೇದ ಕೂಡ ಸ್ಥಳಕ್ಕೆ ಧಾವಿಸಿದ್ದಾರೆ.
ಇತ್ತೀಚೆಗೆ ಸಂಕೇಶ್ವರ ಬಳಿ ಕನ್ನಡ ಧ್ವಜ ವಿವಾದ ನಡೆದಿತ್ತು. ಈ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆಯ ಬಣಗಳು ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದವು. ಆದರೆ ಈ ಘಟನೆಯಲ್ಲಿ ಎರಡೂ ರಾಜ್ಯಗಳಿಗೆ ಸೇರಿದ ಬಸ್ ಗಳಿಗೆ ಕಲ್ಲು ತೂರಲಾಗಿದೆ. ಹಾಗಾಗಿ ಇದಕ್ಕೆ ಕಾರವೇನು ಎನ್ನುವ ಕುರಿತು ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ. ಘಟನೆಯ ಸ್ಥಳದಲ್ಲಿ ಯಾರೂ ಕಂಡು ಬಂದಿಲ್ಲ.
ಗಾಯಾಳುವಿಗೆ ಚಿಕಿತ್ಸೆ ಕೊಡಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ