*ಆಸ್ಪತ್ರೆಯಲ್ಲಿ 3 ವರ್ಷದ ಹೆಣ್ಣು ಮಗು ಪತ್ತೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೊದಗಾ ಗ್ರಾಮದ ನಿರ್ಮಲ ನಗರದಲ್ಲಿ ಮೇ, 15, 2025 ರಂದು ಕಾರ್ಡಿನಲ್ ಗ್ರೇಸಿಯಸ್ ಆಸ್ಪತ್ರೆಯಲ್ಲಿ ಅಂದಾಜು 3 ವರ್ಷದ ಹೆಣ್ಣು ಮಗುವನ್ನು ಅಪರಿಚಿತರು ಬಿಟ್ಟು ಹೊಗಿದ್ದು, ಸದರಿ ವಿಷಯವನ್ನು ಆಸ್ಪತ್ರೆಯ ಸಿಬ್ಬಂದಿ ಸ್ಥಳೀಯ ಮಾರಿಹಾಳ ಪೋಲಿಸ್ ಠಾಣೆಗೆ ಮಾಹಿತಿಯನ್ನು ನೀಡಿ ಮಗುವನ್ನು ರಕ್ಷಣೆ ಮಾಡಿರುತ್ತಾರೆ.
ಆಸ್ಪತ್ರೆಯ ಸಿಬ್ಬಂದಿಯವರು ಮಗುವಿನ ಅಭಿರಕ್ಷಣೆಗಾಗಿ ಬೆಳಗಾವಿಯ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ದತ್ತು ಸ್ವೀಕಾರ ಕೇಂದ್ರಕ್ಕೆ ದಾಖಲು ಮಾಡಿದ್ದು, ನಂತರ ಸಂಸ್ಥೆಯ ಸಿಬ್ಬಂದಿಯವರು ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ, ಮಕ್ಕಳ ಕಲ್ಯಾಣ ಸಮಿತಿಯವರ ಆದೇಶದ ಮೇರೆಗೆ ಮಗುವನ್ನು ತಾತ್ಕಾಲಿಕವಾಗಿ ರಕ್ಷಣೆ ಮತ್ತು ಪೋಷಣೆಗಾಗಿ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ದತ್ತು ಸ್ವೀಕಾರ ಕೇಂದ್ರದಲ್ಲಿ ಅಭಿರಕ್ಷಣೆಗಾಗಿ ಇಡಲಾಗಿದೆ.
ಮಗುವಿನ ಜೈವಿಕ ಪಾಲಕರು ಇದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪ್ಲಾಟ ನಂ.2688, ಸೆಕ್ಟರ್ ನಂ.12 ಡಬಲ್ ರೋಡ ಶ್ರೀನಗರ, ಬೆಳಗಾವಿ ಇವರ ದೂರವಾಣಿ ಸಂಖ್ಯೆ : 0831-2474111 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಡಾ.ಪರ್ವಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.