*ಜೈನ ಮುನಿಗಳ ಹಂತಕರ ವಿರುದ್ಧ ಕಠಿಣ ಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್* *CBI ತನಿಖೆ ನಡೆಸಿ: ಅಭಯ ಪಾಟೀಲ, ಸಂಜಯ ಪಾಟೀಲ*
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು/ಬೆಳಗಾವಿ/ ಚಿಕ್ಕೋಡಿ: ದುಷ್ಕರ್ಮಿಗಳಿಂದ ಹತ್ಯೆಗೀಡಾಗಿರುವ ಜೈನ ಮುನಿಗಳ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ಆಶ್ರಮ ಸಮೀಪ ಹೊಲದಲ್ಲಿ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.
ನಾಂದಣಿ ಜಿನಸೇನ ಭಟ್ಟಾರಕ ಸ್ವಾಮೀಜಿ, ಕೊಲ್ಲಾಪುರದ ಲಕ್ಷ್ಮೀ ಸೇನಾ ಭಟ್ಟಾರಕ ಸ್ವಾಮೀಜಿ, ವರೂರಿನ ಧರ್ಮಸೇನಾ ಭಟ್ಟಾರಕ ಸ್ವಾಮೀಜಿ, ಅಥಣಿ ಶಾಸಕ ಲಕ್ಷ್ಮಣ ಸವದಿ, ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ, ವೀಣಾ ಪಟ್ಟಣಕುಡಿ, ಸತೀಶ ಅಪ್ಪಾಜಿಗೌಡ, ಉತ್ತಮ ಪಾಟೀಲ ಭಾಗವಹಿಸಿದ್ದರು.
ದಿಕ್ಕು ತಪ್ಪಿಸಲಾಗುತ್ತಿದೆ – ಆರೋಪ
ಮುನಿಗಳ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಶಾಸಕ ಅಭಯ ಪಾಟೀಲ ಹಾಗೂ ಮಾಜಿ ಶಾಸಕ ಸಂಜಯ ಪಾಟೀಲ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿದ ಅವರು, ಆರಂಭಿಕ ತನಿಖೆ ನೋಡಿದರೆ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆದಂತೆ ಕಾಣುತ್ತಿದೆ. ಆರೋಪಿಗಳಲ್ಲಿ ಒಬ್ಬನ ಹೆಸರನ್ನು ಮರೆಮಾಚಿ, ಇನ್ನೊಬ್ಬನ ಹೆಸರನ್ನು ಮಾತ್ರ ಹೇಳಲಾಗುತ್ತಿದೆ. ಮೊದಲ ಆರೋಪಿಯನ್ನು ಎರಡನೇ ಆರೋಪಿ ಎಂದು, ಎರಡನೇ ಆರೋಪಿಯನ್ನು ಮೊದಲ ಆರೋಪಿ ಎಂದು ತೋರಿಸಲಾಗಿದೆ. ಉದ್ದೇಶಪೂರ್ವಕವಾಗಿ ಒಂದು ಕೋಮಿನವರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಆರಂಭದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಿಕ್ಕೇ ಹಿಂದೇಟು ಹಾಕಿದ್ದ ಪೊಲೀಸರು ನಂತರದಲ್ಲಿ ಕೇವಲ ಒಂದು ಆರೋಪಿಯ ಹೆಸರು ಹೇಳುತ್ತಿದ್ದಾರೆ. ಇನ್ನೊಂದು ಆರೋಪಿ ಹೆಸರು ಬಹಿರಂಗಪಡಿಸಬೇಡಿ ಎಂದು ಮಾಧ್ಯಮಗಳಿಗೂ ಹೇಳುತ್ತಿದ್ದಾರೆ. ಹಾಗಾಗಿ ಪೊಲೀಸರ ತನಿಖೆಯಿಂದ ನ್ಯಾಯ ಸಿಗುವುದಿಲ್ಲ. ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಪ್ರಕರಣ ಖಂಡಿಸಿ ನಾಳೆ ಚಿಕ್ಕೋಡಿಯಲ್ಲಿ ಮೌನ ಪ್ರತಿಭಟನೆ ನಡೆಸುವುದಾಗಿ ಅವರು ಹೇಳಿದರು.
ಕಠಿಣ ಕ್ರಮ – ಡಿ.ಕೆ.ಶಿವಕುಮಾರ
ಬೆಳಗಾವಿಯಲ್ಲಿ ಜೈನ ಮುನಿಗಳಾದ ಕಾಮಕುಮಾರನಂದಿ ಮಹಾರಾಜರ ಹತ್ಯೆ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.
ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿಗಳು, “ಜೈನ ಮುನಿಗಳ ಹತ್ಯೆ ಖಂಡನೀಯ. ಇದನ್ನು ಸರ್ಕಾರ ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನಿನ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಯಾರೊಬ್ಬರೂ ಪ್ರಚೋದನೆಗೆ ಒಳಗಾಗಬಾರದು, ಬೇರೆಯವರನ್ನು ಪ್ರಚೋದಿಸಬಾರದು. ಶಾಂತಿ ಸುವ್ಯವಸ್ಥೆ ಕಾಪಾಡಬೇಕು.
ಇನ್ನು ಹುಬ್ಬಳ್ಳಿ ಬಳಿಯ ವರೂರು ಶ್ರೀ ಗುಣಧರ ನಂದಿ ಮಹಾರಾಜರು ಸ್ವಾಮೀಜಿಗಳು, ಎಲ್ಲಾ ಸ್ವಾಮೀಜಿಗಳಿಗೆ ಭದ್ರತೆ ನೀಡಬೇಕು ಎಂದು ಅನ್ನ, ನೀರು ತ್ಯಜಿಸಿ ಪ್ರತಿಭಟನೆಗೆ ಮುಂದಾಗಿರುವ ಮಾಹಿತಿ ಬಂದಿದೆ. ಸ್ವಾಮೀಜಿಗಳಿಗೆ ಭದ್ರತೆ ನೀಡುವ ಕೆಲಸ ಮಾಡುತ್ತೇವೆ. ಕೂಡಲೇ ಅವರು ತಮ್ಮ ಪ್ರತಿಭಟನೆ ಕೈಬಿಡಬೇಕು. ನಾನು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಸಂಪರ್ಕ ಸಾಧ್ಯವಾಗಿಲ್ಲ. ಹೀಗಾಗಿ ಸ್ಥಳೀಯ ಶಾಸಕರು, ಮಂತ್ರಿಗಳ ಜೊತೆ ಈ ವಿಚಾರವಾಗಿ ಮಾತನಾಡಿದ್ದೇನೆ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ