Latest

ಪಿ ಎಫ್ ಐ ವಿರುದ್ಧ ಕಠಿಣ ಕ್ರಮ : ಸಚಿವ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:

ಪಿಎಫ್ಐ ಸಂಘಟನೆ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಪಿಎಫ್‌ಐ ಸಂಘಟನೆ ತನ್ನ ನೈಜ ಬಣ್ಣವನ್ನು ಮತ್ತೊಮ್ಮೆ ತೋರಿಸಿದೆ. ಸಂಘಟನೆಯ ನಾಯಕರು ದೇಶದ್ರೋಹಿ ಹೇಳಿಕೆ ನೀಡಿದ್ದು, ಸೌಹಾರ್ದ ಕೆಡಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ದೇಶದ ಜನರನ್ನು ವಿಭಜಿಸುವುದಕ್ಕೆ ಕಾರಣವಾಗುವ ದ್ವೇಷದ ಹೇಳಿಕೆ ನೀಡಿರುವ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಆರ್‌ಎಸ್‌ಎಸ್‌ ಮತ್ತು ರಾಮ ಮಂದಿರ ನಿರ್ಮಾಣದ ವಿರುದ್ಧ ಪಿಎಫ್‌ಐ ಸಮಾವೇಶದಲ್ಲಿ ಹೇಳಿಕೆ ನೀಡಿದ್ದಾರೆ. ಆರ್‌ಎಸ್‌ಎಸ್‌ ದೇಶಪ್ರೇಮಿ ಸಂಘಟನೆ. ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ನೈತಿಕತೆ ಪಿಎಫ್‌ಐ ಸಂಘಟನೆಗೆ ಇಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್‌ ಸಮ್ಮತಿ ನೀಡಿದೆ. ಪಿಎಫ್‌ಐ ದೇಶಕ್ಕೆ ಮಾರಕವಾದ ಸಂಘಟನೆ. ಹಣಕ್ಕಾಗಿ ದೇಶದ ವಿರುದ್ಧ ಇರುವ ವಿಚ್ಛಿದ್ರಕಾರಿ ಶಕ್ತಿಗಳ ಜತೆ ಸೇರಿರುವ ಸಂಘಟನೆ ಅದಾಗಿದೆ’ ಎಂದು ಹೇಳಿದರು.

ಈಗಾಗಲೇ ಪಿಎಫ್‌ಐ ಮುಖಂಡರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಘಟನೆಗೆ ಕಾರಣವಾದ ಎಲ್ಲರಿಗೂ ಶಿಕ್ಷೆಯಾಗುವಂತೆ ಕ್ರಮ ಜರುಗಿಸಲಾಗುವುದು ಎಂದರು.

*ಟ್ವಿಟರ್‌ನಲ್ಲಿ ಪುನರುಚ್ಛಾರ*

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದಂತೆ ಪಿಎಫ್‌ಐ ಪ್ರಧಾನ ಕಾರ್ಯದರ್ಶಿ ಅನೀಸ್‌ ಅಹ್ಮದ್‌ ಮಾಡಿದ್ದ ಭಾಷಣವನ್ನು ಪುನರುಚ್ಛರಿಸಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಯಾಸಿರ್‌ ಹಸನ್‌ ಶನಿವಾರ ಟ್ವೀಟ್ ಮಾಡಿದ್ದಾರೆ.

‘ಕಾರ್ಪೋರೇಟ್‌ ಕುಳಗಳ ಹಣದಿಂದ ಕೊಬ್ಬಿರುವ ಬಿಜೆಪಿಗೆ ದೇಣಿಗೆ ಸಂಗ್ರಹಿಸದೇ ರಾಮ ಮಂದಿರ ಕಟ್ಟುವುದು ದೊಡ್ಡ ಸಂಗತಿಯೇನಲ್ಲ. ಆದರೆ, ಗಲಭೆ, ಕೋಮು ಧ್ರುವೀಕರಣ, ಮುಸ್ಲಿಮರನ್ನು ಬೆದರಿಸುವ ಪಿತೂರಿಯ ಉದ್ದೇಶವನ್ನಷ್ಟೇ ಹೊಂದಿರುವ ಬಿಜೆಪಿಯ ಮಂದಿರ ನಿರ್ಮಾಣಕ್ಕೆ ಯಾರೂ ದೇಣಿಗೆ ನೀಡಬಾರದು ಎಂಬ ಅನೀಸ್‌ ಅವರ ಹೇಳಿಕೆಯನ್ನು ಪುನರುಚ್ಛರಿಸಬೇಕಿದೆ’ ಎಂದು ಹಸನ್‌ ಟ್ವೀಟ್‌ ಮಾಡಿದ್ದಾರೆ.

ಅದು ರಾಮ ಮಂದಿರವಲ್ಲ, ಆರ್ ಎಸ್ ಎಸ್ ಮಂದಿರ; ವಿವಾದಾತ್ಮಕ ಹೇಳಿಕೆ ನೀಡಿದ ಪಿಎಫ್ ಐ ಮುಖಂಡ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button