Kannada NewsKarnataka NewsLatest

*ಮ್ಯಾನ್ಯುಯಲ್ ಕೆಲಸ ಮಾಡಿಸಿದರೆ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಇರಕೂಡದು. ಯಾರಾದರೂ ಮ್ಯಾನ್ಯುಯಲ್ ಕೆಲಸ ಮಾಡಿಸಿದರೆ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.‌

ರಾಜ್ಯದಲ್ಲಿ ಗುರುತಿಸಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗಳಿಗೆ ಸಹಾಯಧನ ವಿತರಣೆ ಮತ್ತು ಪುನರ್ವಸತಿ ಸಮಾವೇಶವನ್ನು ಉದ್ಘಾಟಿಸಿ, ತಲಾ 40 ಸಾವಿರ ರೂ ಸಹಾಯಧನ ವಿತರಿಸಿ ಮಾತನಾಡಿದರು.

ಪೌರ ಕಾರ್ಮಿಕರು ಘನತೆಯಿಂದ ಬದುಕು ಕಟ್ಟಿಕೊಳ್ಳಬೇಕು ಎನ್ನುವುದು ನಮ್ಮ ಪಕ್ಷದ ಮತ್ತು ನಮ್ಮ ಬದ್ಧತೆ. ಹೀಗಾಗಿ ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೇ ಸಫಾಯಿ ಕರ್ಮಚಾರಿಗಳ ಸಂಬಳವನ್ನು 7 ಸಾವಿರದಿಂದ 17 ಕ್ಕೆ ಏರಿಸಿದ್ದೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗಳಿಗೆ ಅವಕಾಶವೇ ಇಲ್ಲ. ಯಾರಾದರೂ ಮ್ಯಾನ್ಯುಯಲ್ ಕೆಲಸ ಮಾಡಿಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ವರಿಸಿದರು.

ಸಫಾಯಿ ಕರ್ಮಚಾರಿಗಳು ಮನೆ ಕಟ್ಟಿಕೊಳ್ಳಲು 7.5 ಲಕ್ಷ ನೆರವು ನೀಡುವ ಕಾರ್ಯಕ್ರಮವನ್ನೂ ಜಾರಿಗೆ ತಂದಿದ್ದು ನಮ್ಮ ಸರ್ಕಾರವೇ. ನಾನು ಮುಖ್ಯಮಂತ್ರಿಯಾಗಿ‌ ಈ ಕಾರ್ಯಕ್ರಮಗಳನ್ನು ಜಾರಿ‌ ಮಾಡಿದೆ ಎಂದರು.

ಅಂಬೇಡ್ಕರ್ ಸಂವಿಧಾನ ನೀಡದೇ ಹೋಗಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಲೇ ಇರಲಿಲ್ಲ. ಆದ್ದರಿಂದ ಸಂವಿಧಾನ ವಿರೋಧಿಗಳು ನಮ್ಮ ವಿರೋಧಿಗಳು ಎನ್ನುವುದನ್ನು ನಾವು-ನೀವು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸಂವಿಧಾನದ ವಿರೋಧಿಗಳನ್ನು ಸಾರಾ ಸಗಟಾಗಿ ತಿರಸ್ಕರಿಸಿ ಎಂದು ಕರೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ, ಮಾಯ್ಕೊಂಡ ಶಾಸಕರಾದ ಬಸಂತಪ್ಪ , ನೆಲಮಂಗಲ ಶಾಸಕರಾದ ಶ್ರೀನಿವಾಸ್ ಸೇರಿ ಹಲವು ಪ್ರಮುಖರು ಮತ್ತು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಮಾವೇಶದಲ್ಲಿ 4000 ಕ್ಕೂ ಹೆಚ್ಚು ಸಫಾಯಿ ಕರ್ಮಚಾರಿಗಳಿಗೆ ನಗದು ಸಹಾಯಧನ ವಿತರಿಸಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button