ಪ್ರವಾಹ ಬಾಧಿತ ಗ್ರಾಮಗಳ ಸ್ವಚ್ಛತೆಗೆ ಕಟ್ಟುನಿಟ್ಟಿನ ಸೂಚನೆ
- ಸಂತ್ರಸ್ತರಿಗೆ ರೇಷನ್ ಕಿಟ್ : ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಪ್ರವಾಹ ಸಂತ್ರಸ್ತ ಕುಟುಂಬಗಳು ಸ್ವಯಂಪ್ರೇರಣೆಯಿಂದ ತಮ್ಮ ಮನೆಗಳಿಗೆ ವಾಪಸ್ ಹೋಗಲು ಮುಂದಾದರೆ ಅಂತಹ ಕುಟುಂಬಗಳಿಗೆ ವಿಶೇಷ ರೇಷನ್ ಕಿಟ್ ನೀಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಪ್ರವಾಹದಲ್ಲಿ ಸಿಲುಕಿರುವ ಜನರಿಗೆ ಪರಿಹಾರ ಹಾಗೂ ಪುನರ್ವಸತಿಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ ತಹಶಿಲ್ದಾರರೊಂದಿಗೆ ಗುರುವಾರ(ಆ.15) ನಡೆಸಿದ ವಿಡಿಯೋ ಸಂವಾದದಲ್ಲಿ ಈ ವಿಷಯ ತಿಳಿಸಿದರು.
ಸಂತ್ರಸ್ತ ಕುಟುಂಬಗಳಿಗಾಗಿ ಸಿದ್ಧಪಡಿಸಲಾಗಿರುವ ಪ್ರತಿ ರೇಷನ್ ಕಿಟ್ ಗಳಲ್ಲಿ ಹತ್ತು ಕೆ.ಜಿ. ಅಕ್ಕಿ, ಒಂದು ಕೆ.ಜಿ. ತೊಗರಿ ಬೇಳೆ, 1 ಕೆ.ಜಿ.ಸಕ್ಕರೆ, 1 ಕೆ.ಜಿ. ಅಯೋಡಿನ್ ಯುಕ್ತ ಉಪ್ಪು, ಒಂದು ಲೀಟರ್ ತಾಳೆಎಣ್ಣೆ ಮತ್ತು ಐದು ಲೀಟರ್ ಸೀಮೆ ಎಣ್ಣೆ ಒಳಗೊಂಡಿರುತ್ತದೆ.
ಈಗಾಗಲೇ ಪರಿಸ್ಥಿತಿ ಸುಧಾರಿಸಿರುವ ಗ್ರಾಮದ ಜನರು ತಾವಾಗಿಯೇ ಸ್ವಯಂಪ್ರೇರಣೆಯಿಂದ ತಮ್ಮ ಮನೆಗೆ ತೆರಳಲು ಮುಂದಾದ ಕುಟುಂಬಗಳಿಗೆ ಈ ರೇಷನ್ ಕಿಟ್ ಗಳನ್ನು ನೀಡಲಾಗುವುದು.
ಆಯಾ ಗ್ರಾಮ ಪಂಚಾಯತಿ ಮೂಲಕವೇ ರೇಷನ್ ಕಿಟ್ ನೀಡಲು ತಿಳಿಸಲಾಗಿರುವುದರಿಂದ ಕಿಟ್ ಗಳ ವಿತರಣೆ ಸಂದರ್ಭದಲ್ಲಿ ಕಡ್ಡಾಯವಾಗಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರನ್ನು ಆಹ್ವಾನಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ತಾಲ್ಲೂಕುವಾರು ರೇಷನ್ ಕಿಟ್ ಬೇಡಿಕೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದರೆ ಜಿಲ್ಲಾಡಳಿತದಿಂದ ಕಿಟ್ ಪೂರೈಸಲಾಗುವುದು.
ಪ್ರವಾಹ ಹಾನಿ-ಸಮಗ್ರ ವರದಿಗೆ ಸೂಚನೆ :
ಮನೆ, ಕುಸಿತ ಹಾಗೂ ಮೂಲಸೌಕರ್ಯಗಳ ಹಾನಿ ಸೇರಿದಂತೆ ಪ್ರವಾಹದಿಂದ ಉಂಟಾಗಿರುವ ಪ್ರತಿಯೊಂದು ಹಾನಿಯ ಬಗ್ಗೆ ಮಾಹಿತಿಯನ್ನು ಒದಗಿಸಲು ಸರ್ಕಾರ ನಿಗದಿತ ನಮೂನೆಯನ್ನು ಕಳುಹಿಸಿದೆ. ಆದ್ದರಿಂದ ಆ ನಮೂನೆಯಲ್ಲಿ ತಕ್ಷಣವೇ ಮಾಹಿತಿಯನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮನೆ ಕುಸಿತದ ಬಗ್ಗೆ ವರದಿ ನೀಡುವಾಗ ನಿಯಮಾವಳಿ ಜತೆಗೆ ಮಾನವೀಯತೆ ಆಧಾರದ ಮೇಲೆ ಹಾನಿಯನ್ನು ಪರಿಗಣಿಸಬೇಕು ಎಂದು ಹೇಳಿದರು. ಹಾನಿ ಅಂದಾಜು ಮಾಡುವಾಗ ಏಕರೂಪತೆಯನ್ನು ಅನುಸರಿಸುವಂತೆ ತಿಳಿಸಿದರು.
ಸಂಪೂರ್ಣ ಮನೆ ಕುಸಿದಿರುವ ಕುಟುಂಬಗಳಿಗೆ ಈಗಿರುವ ನಿಯಮಾವಳಿ ಪ್ರಕಾರ ತಕ್ಷಣ 95 ಸಾವಿರ ರೂಪಾಯಿ ಪರಿಹಾರ ನೀಡಿದರೆ ಅವರು ಸ್ವತಃ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಅನುಕೂಲವಾಗಬಹುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಗ್ರಾಮ ಸ್ವಚ್ಛತೆಗೊಳಿಸಲು ಸೂಚನೆ :
ಪ್ರವಾಹ ಸಂತ್ರಸ್ತರು ಮರಳಿ ತಮ್ಮ ಗ್ರಾಮಕ್ಕೆ ತೆರಳುವ ಮುಂಚೆ ಗ್ರಾಮಗಳ ಸ್ವಚ್ಛತೆ ಅತ್ಯಗತ್ಯವಾಗಿದೆ. ಆದ್ದರಿಂದ ಗ್ರಾಮ ಪಂಚಾಯಿತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ತಮ್ಮಲ್ಲಿ ಲಭ್ಯವಿರುವ ಅನುದಾನ ಬಳಸಿಕೊಂಡು ಕೂಡಲೇ ಸ್ವಚ್ಛತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು. ಸ್ವಚ್ಛತೆಗಾಗಿ ಆಯಾ ಸಂಸ್ಥೆಗಳಲ್ಲಿ ಸದ್ಯಕ್ಕೆ ಇರುವ ಇರುವ ಅನುದಾನವನ್ನು ಬಳಸಿಕೊಳ್ಳಬೇಕು.
ಸಂಘ-ಸಂಸ್ಥೆಗಳು, ಯುವಕ ಮಂಡಳಗಳು, ಎನ್ ಸಿಸಿ, ಎನ್.ಎಸ್.ಎಸ್., ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಾರ್ವಜನಿಕರ ನೆರವಿನೊಂದಿಗೆ ಶ್ರಮದಾನದ ಮೂಲಕ ಮುಳುಗಡೆಗೊಂಡಿದ್ದ ಪ್ರತಿಯೊಂದು ಗ್ರಾಮಗಳಲ್ಲಿ ಸ್ವಚ್ಛತೆ ಮಾಡಬೇಕು.
ಅನೇಕ ದಿನಗಳ ಕಾಲ ನೀರು ನಿಂತಿದ್ದರಿಂದ ರೋಗರುಜಿನಗಳು ಹರಡುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಜನರು ಗ್ರಾಮಗಳಿಗೆ ಹಿಂದಿರುಗುವ ಮುಂಚೆ ಮೊದಲು ಸ್ವಚ್ಛತೆ ಆಗಬೇಕು ಎಂದರು.
ಪರಿಹಾರ ಸಾಮಗ್ರಿ-ಸಿಸಿ ಕ್ಯಾಮೆರಾ ಅಳವಡಿಸಿ :
ಪ್ರತಿ ತಾಲ್ಲೂಕಿನಲ್ಲಿ ಸ್ವೀಕರಿಸಲಾಗುವ ಪರಿಹಾರ ಸಾಮಗ್ರಿಗಳ ದಾಸ್ತಾನು ಕೊಠಡಿಗಳಿಗೆ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಹಾಗೂ ಸಾಮಗ್ರಿಗಳ ವಿವರಗಳನ್ನು ದಾಸ್ತಾನು ವಹಿಗಳಲ್ಲಿ ನಮೂದಿಸಬೇಕು ಎಂದು ಜಿಲ್ಲಾ ನೋಡಲ್ ಅಧಿಕಾರಿಯೂ ಆಗಿರುವ ಅಪರ ಪ್ರಾದೇಶಿಕ ಆಯುಕ್ತ ಶಶಿಧರ್ ಕುರೇರ್ ತಿಳಿಸಿದರು.
ಪ್ರವಾಹ ನಿರ್ವಹಣೆ ನಿರ್ಲಕ್ಷ್ಯ-ಅಮಾನತು ಎಚ್ಚರಿಕೆ :
ಪ್ರವಾಹ ಸಂಬಂಧಿಸಿದ ಕೆಲಸಗಳನ್ನು ನಿರ್ಲಕ್ಷ್ಯ ತೋರುವ ಹಾಗೂ ನೋಡಲ್ ಅಧಿಕಾರಿಗಳ ಜತೆ ಸಹಕಾರ ನೀಡದ ಅಧಿಕಾರಿಗಳನ್ನು ಅಮಾನತು ಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.
ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುವ ಉದ್ದೇಶದಿಂದ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಅವರು ಕಡ್ಡಾಯವಾಗಿ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.
ತಹಶಿಲ್ದಾರರ ಕೋರಿಕೆಯ ಮೇರೆಗೆ ಪರಿಹಾರ ನೀಡಲು ಈಗಾಗಲೇ ಅನುದಾನ ನೀಡಲಾಗಿದ್ದು, ಇನ್ನೂ ಹಣದ ಅಗತ್ಯವಿದ್ದರೆ ತಕ್ಷಣವೇ ಬಿಡುಗಡೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು, ಸಾವಿರಾರು ಸಂಖ್ಯೆಯಲ್ಲಿ ಕುಸಿದಿರುವ ಮನೆಗಳಿಗೆ ಪರಿಹಾರ ನೀಡುವಾಗ ವೈಜ್ಞಾನಿಕ ರೀತಿಯಲ್ಲಿ ಪರಿಶೀಲಿಸಬೇಕು. ಛಾಯಾಚಿತ್ರ ಹಾಗೂ ಸಾಧ್ಯವಾದರೆ ವಿಡಿಯೋ ಚಿತ್ರೀಕರಣ ಮಾಡುವ ಮೂಲಕ ಸೂಕ್ತ ದಾಖಲಾತಿಗಳನ್ನು ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ., ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ, ಉಪ ವಿಭಾಗಾಧಿಕಾರಿ ಡಾ.ಕವಿತಾ ಯೋಗಪ್ಪನವರ, ಪ್ರವಾಹ ನಿರ್ವಹಣೆಗೆ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ಮತ್ತು ಆಯಾ ತಾಲ್ಲೂಕಿನ ನೋಡಲ್ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ