
ಪ್ರಗತಿವಾಹಿನಿ ಸುದ್ದಿ; ಕಾಬೂಲ್: ಅಪ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಉಗ್ರರ ಅಟ್ಟಹಾಸ ಮೇರೆ ಮೀರಿದ್ದು, ಸಾರ್ವಜನಿಕವಾಗಿ ಅಪ್ಘಾನ್ ಸೇನೆಯ ನಾಲ್ವರು ಕಮಾಂಡರ್ ಗಳನ್ನು ತಾಲಿಬಾನಿಗಳು ನೇಣಿಗೇರಿಸಿದ್ದಾರೆ.
ಅಪ್ಘಾನಿಸ್ತಾನದಲ್ಲಿ ಕ್ಷಣ ಕ್ಷಣಕ್ಕೂ ಅಭದ್ರತೆ, ಭಯದ ವಾತಾವರಣ ಹೆಚ್ಚುತ್ತಿದ್ದು, ಜನರು ಮಾತ್ರವಲ್ಲ ಅಪ್ಘಾನ್ ಯೋಧರು ಕೂಡ ದೇಶ ಬಿಟ್ಟು ಪರಾರಿಯಾಗುತ್ತಿದ್ದಾರೆ. ಕಂದಹಾರ್ ಸ್ಟೇಡಿಯಂ ನಲ್ಲಿ ತಾಲಿಬಾನ್ ಉಗ್ರರು ಅಪ್ಘಾನ್ ನ ನಾಲ್ಕು ಪ್ರಮುಖ ಕಮಾಂಡರ್ ಗಳನ್ನು ನೇಣಿಗೇರಿಸಿದ್ದಾರೆ. ಈ ನಾಲ್ವರು ಕಮಾಂಡರ್ ಗಳು ಅಪ್ಘಾನ್ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಅವರ ಆಪ್ತರಾಗಿದ್ದರು ಎನ್ನಲಾಗಿದೆ.
ಅಪ್ಘಾನ್ ಅಧ್ಯಕ್ಷ ಅಶ್ರಫ್ ಘನಿ ತಮ್ಮ ಸ್ಥಾನದಿಂದ ಕೆಳಗಿಳಿದು ತಮ್ಮ ಸ್ಥಾನವನ್ನು ತಾಲಿಬಾನಿಗಳಿಗೆ ಬಿಟ್ಟುಕೊಟ್ಟ ಬಳಿಕ ಅಮ್ರುಲ್ಲಾ ಸಲೇಹ್ ತಾನೇ ಅಪ್ಘಾನ್ ಉಸ್ತುವಾರಿ ಎಂದು ಘೋಷಿಸಿದ್ದರು. ಕಾಬೂಲ್ ವಶವಾದರೂ ತಾಲಿಬಾನಿಗಳಿಗೆ ನಾವು ಶರಣಾಗಲ್ಲ ಎಂದಿದ್ದರು. ಇದೇ ಕಾರಣಕ್ಕೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕಮಾಂಡರ್ ಗಳನ್ನು ಸಾರ್ವಜನಿಕವಾಗಿ ನೇಣುಹಾಕಿ ಹತ್ಯೆ ಮಾಡಲಾಗಿದೆ.
ಈ ನಡುವೆ ಅಪ್ಘಾನ್ ನ ಯೋಧರು ಜೀವ ಭಯದಲ್ಲಿ ದೇಶ ತೊರೆದು, ಮಿಲಿಟರಿ ವಿಮಾನಗಳ ಮೂಲಕ ಉಜ್ಬೇಕಿಸ್ತಾನಕ್ಕೆ ಪಲಾಯನ ಮಾಡುತ್ತಿದ್ದಾರೆ ಎನ್ನಲಾಗಿದೆ.