Kannada NewsKarnataka News

ಕೇಂದ್ರ, ರಾಜ್ಯ ಸರಕಾರಗಳಿಗೆ ಗಡಿ ದಾಖಲೆಗಳ ಸಲ್ಲಿಕೆ

ಕೇಂದ್ರ, ರಾಜ್ಯ ಸರಕಾರಗಳಿಗೆ ಗಡಿ ದಾಖಲೆಗಳ ಸಲ್ಲಿಕೆ

ಕರ್ನಾಟಕ-ಮಹಾರಾಷ್ಟ್ರ ಗಡಿ ಹಂಚಿಕೆ ವಿವಾದ ಸರ್ವೋಚ್ಛ ನ್ಯಾಯಾಲಯದ ಅಂಗಳದಲ್ಲಿದೆ. ೨೦೦೪ ನೇ ಇಸ್ವಿಯಲ್ಲಿ ದಾಖಲಾದ ಗಡಿ ದಾವೆಯು ೧೫ ವರ್ಷ ಕಳೆದರೂ ಈ ವರೆಗೆ ಪ್ರಾಥಮಿಕ ವಿವಾದಾಂಶಗಳ ಮೇಲೆ ವಿಚಾರಣೆ ನಡೆದಿರಲಿಲ್ಲ. ಕರ್ನಾಟಕ ಸರ್ಕಾರ ರಚಿಸಿದ ಕರ್ನಾಟಕ ಗಡಿ ರಕ್ಷಣಾ ಆಯೋಗದ ಅಧ್ಯಕ್ಷರಾದ ದಿವಂಗತ ನಾಡೋಜ ಡಾ.ವಿ.ಎಸ್.ಮಳಿಮಠ ಅವರ ಪ್ರಯತ್ನದಿಂದ ಮಗದೊಮ್ಮೆ ಪ್ರಾಥಮಿಕ ವಿವಾದಂಶಗಳ ಮೇಲೆ ವಿಚಾರಣೆಗೆ ಸುಪ್ರಿಂಕೋರ್ಟ ಕೈಗೆತ್ತಿಕೊಂಡಿದೆ.

ಪ್ರಾಥಮಿಕ ಹಂತದ ವಿಚಾರಣೆಗೆ ಸಂಬಂಧಿಸಿದಂತೆ ಗಡಿ ದಾಖಲೆಗಳನ್ನು ಸಂಗ್ರಹಿಸಿದ ರಾಜ್ಯ ವಕೀಲರ ಸಾಹಿತ್ಯ ಪರಿಷತ್ತಿನ ಬೆಳಗಾವಿ ಅಧ್ಯಕ್ಷ  ಡಾ. ರವೀಂದ್ರ ತೋಟಿಗೇರ, ಉಪಾಧ್ಯಕ್ಷ ಕುಮಾರ ಸರವದೆ ನವ ದೆಹಲಿಗೆ ತೆರಳಿ ಸಂಸತ್ ಅಧಿವೇಶನ ಜರುಗುವ ಮುನ್ನ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಕೇಂದ್ರ ರೇಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿಯವರಿಗೆ ಇವರ ಪ್ರತ್ಯೇಕ ಕಛೇರಿಗಳಿಗೆ ಹೋಗಿ ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಅನುಕೂಲವಾಗಲಿರುವ ೩೮೮ ಪುಟಗಳುಳ್ಳ ಈ ದಾಖಲೆಗಳು ಪ್ರಾಥಮಿಕ ಹಂತದ ವಿಚಾರಣೆಗೆ ಅನುಕೂಲವಾಗಲಿವೆ. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ದಿವಾಣಿ ಕಿರಿಯ ಶ್ರೇಣಿ ನ್ಯಾಯಾಲಯದಲ್ಲಿ ದಾಖಲಾದ ಗಡಿದಾವೆಯಲ್ಲಿ, ೧೯೮೮ ರಲ್ಲೇ ಮಹಾರಾಷ್ಟ್ರ ರಾಜ್ಯ ಸರ್ಕಾರ ಅಸಲ ದಾವಾ ಸಂಖ್ಯೆ ೧೨೮/೧೯೮೮ ರಲ್ಲಿ ಸಲ್ಲಿಸಿದ ಕೈಪಿಯತ್‌ನ ಪ್ರಕಾರ ರಾಜ್ಯ ಪುನರ ವಿಂಗಡನಾ ಕಾಯ್ದೆ ನ್ಯಾಯ ಬದ್ಧ ಹಾಗೂ ನ್ಯಾಯ ಸಮ್ಮತವೆಂದಿದೆ.

ಸುಪ್ರಿಂ ಕೋರ್ಟಿನ ಹಿರಿಯ ವಕೀಲರ ಭೇಟಿ

ಗಡಿ ದಾವೆಯನ್ನು ಇತ್ಯರ್ಥ ಮಾಡುವ ಅಧಿಕಾರ ಸಿವ್ಹಿಲ್ (ದಿವಾಣಿ ನ್ಯಾಯಾಲಯಕ್ಕಿಲ್ಲ. ರಾಜ್ಯ ಪುನರ್ ವಿಂಗಡನಾ ಕಾಯ್ದೆ ಕಾನೂನು ಬಾಹಿರ, ಶೂನ್ಯ ನಿರರ್ಥಕವೆಂಬುದನ್ನು ತಾವು ಒಪ್ಪುವದಿಲ್ಲ. ರಾಜ್ಯ ಪುನರ್ ವಿಂಗಡನಾ ಕಾಯ್ದೆಯ ಕಲಂ ೭(೧)(b), ೮(೧)(b) (೧) ಹಾಗೂ (೨) ಸಂವಿಧಾನದ ವಿರೋಧದಲ್ಲಿದೆ ಎಂಬುದನ್ನು ತಾವು ಒಪ್ಪುವುದಿಲ್ಲ ಎಂಬ ಅಂಶಗಳನ್ನೊಳಗೊಂಡ ಮಹಾರಾಷ್ಟ್ರ ರಾಜ್ಯದ ಕೈಪಿಯತ್‌ನಲ್ಲಿರುವ ಮಜಕೂರಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಯಿತು.

ಆದ ಕಾರಣ ಈ ದಾಖಲೆಗಳು ಕೇಂದ್ರ ಸರ್ಕಾರಕ್ಕೆ ಪ್ರಾಥಮಿಕ ಹಂತದ ವಿವಾದಾಂಶಗಳ ವಿಚಾರಣೆಗೆ ಸಹಕಾರಿಯಾಗಲಿವೆ ಎಂದು ತಿಳಿಯಪಡಿಸಲಾಯಿತು. ದಾಖಲೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ನಿಯೋಗ, ಕೇಂದ್ರ ಸರ್ಕಾರಕ್ಕೆ ಒತ್ತಾಯಪಡಿಸಿತು. ದಾಖಲೆಗಳ ಜೊತೆ ಮನವಿಗಳನ್ನು ಸ್ವೀಕರಿಸಿದ ಕೇಂದ್ರ ಸಚಿವರುಗಳು ಕಾನೂನು ಸಲಹೆ ಪಡೆದು ಸೂಕ್ತ ಕ್ರಮ ಜರುಗಿಸಲಾಗುವದು ಎಂದು ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ನಂತರ ಕರ್ನಾಟಕ ಸರ್ಕಾರ ಪರ ಸುಪ್ರಿಂ ಕೋರ್ಟಿನ ಹಿರಿಯ ವಕೀಲರಾದ ಶರದ ಜವಳಿ, ಸಂಜಯ ಹೆಗಡೆ, ಕರ್ನಾಟಕ ಸರ್ಕಾರದ ಸ್ಟ್ಯಾಂಡಿಂಗ್ ಕೌನ್ಸಿಲ್ ವಿ.ಎನ್.ರಘುಪತಿ ಯವರನ್ನು ಭೆಟ್ಟಿಯಾದ ನಿಯೋಗ ಅವರಿಗೂ ದಾಖಲೆಗಳನ್ನು ನೀಡಲಾಯಿತು. ಕರ್ನಾಟಕ ಸರ್ಕಾರ ಪರ ವಕೀರುಗಳು ದಾಖಲೆಗಳಿಗೆ ತೀಕ್ಷಣವಾಗಿ ಪ್ರತಿಕ್ರಿಯಿಸಿ ಕರ್ನಾಟಕ ಗಡಿ ರಕ್ಷಣಾ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ಹಾಗೂ ಕರ್ನಾಟಕ ಅಡ್ವೋಕೇಟ್ ಜನರಲ್‌ರವರನ್ನು ಸಂಪರ್ಕಿಸಿ ದಾಖಲೆಗಳ ಮಹತ್ವ ಹಾಗೂ ಅವುಗಳ ವಿವರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುವದು ಎಂದರು. ರಾಜ್ಯ ವಕೀಲರ ಸಾಹಿತ್ಯ ಪರಿಷತ್ತಿನ ನಡೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಜೊತೆಗೆ ಪರಿಷತ್ತು ಮಹತ್ವಪೂರ್ಣ ಗಡಿ ದಾಖಲೆಗಳನ್ನು ಸಂಗ್ರಹಿಸಿದ್ದು ತಮಗೆ ಅತೀವ ಸಂತಸ ತಂದಿದೆ ಎಂದರು.

ಕಾವೇರಿ ಹಾಗೂ ಮಹಾದಾಯಿ ನದಿ ನೀರು ಹಂಚಿಕೆ

ತದ ನಂತರ ಕಾವೇರಿ ಹಾಗೂ ಮಹಾದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಪರ ಹಿರಿಯ ನ್ಯಾಯವಾದಿ ಮೋಹನ ಕಾತರಕಿ ಹಾಗೂ ಅನೀಲ ಕಾತರಕಿಯವರನ್ನು ನಿಯೋಗ ಭೆಟ್ಟಿಯಾಗಿ ತಾವು ಸಂಗ್ರಹಿಸಿದ ಪ್ರಾಥಮಿಕ ವಿಚಾರಣೆಗೆ ಸಂಬಂಧಿಸಿದ ದಾಖಲೆಗಳ ಬಗ್ಗೆ ಚರ್ಚಿಸಲಾಯಿತು. ಈ ದಾಖಲೆಗಳ ಬಗ್ಗೆ ತಾವು ಪತ್ರ ಬರದು ಕರ್ನಾಟಕ ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವದು ಎಂದು ಕಾತರಕಿ ಅವರು ತಿಳಿಸಿದರು.

ಪ್ರಾಥಮಿಕ ಹಂತದ ವಿಚಾರಣೆಗೆ ಸಂಬಂಧಿಸಿದಂತೆ ಈಗಾಗಲೇ ೨೦೧೭ ರಲ್ಲೇ ಕರ್ನಾಟಕ ಗಡಿ ರಕ್ಷಣಾ ಆಯೋಗದ ಅಧ್ಯಕ್ಷ ನ್ಯಾ. ಕೆ.ಎಲ್.ಮಂಜುನಾಥ, ಆಗೀನ ಮುಖ್ಯ ಮಂತ್ರಿ ಸಿದ್ಧರಾಮಯ್ಯ, ಅಂದಿನ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಗಡಿ ಸಚಿವ ಎಚ್.ಕೆ.ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ರವರಿಗೆ ನೀಡಿದರೂ ಯಾವುದೆ ಪ್ರಯೋಜನೆವಾಗಿಲ್ಲದ ಕಾರಣ ಮತ್ತೊಮ್ಮೆ ನವ ದೆಹಲಿಯ ಕರ್ನಾಟಕ ಭವನದಲ್ಲಿ ಸಚಿವ ಸಂಪುಟ ರಚನೆಗೆ ಸಭೆ ಸೇರಿದ ಸಂದರ್ಭದಲ್ಲಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಕೂಡ ಪ್ರಾಥಮಿಕ ಹಂತದ ವಿಚಾರಣೆಗೆ ಸಹಕಾರಿಯಾಗಲಿರುವ ಈ ಮಹತ್ವಪೂರ್ಣ ದಾಖಲೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಸಾರಿ ಸಾರಿ ಮನವರಿಕೆ ಮಾಡಿಕೊಳ್ಳಲಾಯಿತು.

ಈ ದಾಖಲೆಗಳು ಕರ್ನಾಟಕ ರಾಜ್ಯಕ್ಕೂ ಕೂಡ ಅನುಕೂಲವಾಗಲಿವೆ ಎಂಬುದನ್ನೂ ಕೂಡ ಒತ್ತಿ ಹೇಳಲಾಯಿತು. ಸುಮಾರು ಅರ್ಧ ಘಂಟೆಗಳ ಕಾಲ ಮನವಿಯನ್ನು ಆಲಿಸಿದ ಯಡಿಯೂರಪ್ಪನವರು ಮಾತನಾಡಿ ತಮ್ಮ ಸರ್ಕಾರವು ಗಡಿ ವಿಷಯದಲ್ಲಿ ನಿರ್ಲಕ್ಷ ತೋರುವದಿಲ್ಲ, ಗಡಿ ವಿವಾದವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಜೊತೆಗೆ ನಾಡು-ನುಡಿ-ನೆಲ-ಜಲಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವುದಾಗಿ ನಿಯೋಗಕ್ಕೆ ತಿಳಿಸಿದರು. ನಿಯೋಗ ನೀಡಿರುವ ಗಡಿ ದಾಖಲೆಗಳನ್ನು ಸಮರ್ಪಕವಾಗಿ ಹಾಗೂ ಕಾನೂನಾತ್ಮಕವಾಗಿ ಬಳಸಿಕೊಳ್ಳಲಾಗುವದು ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ರಾಜ್ಯ ವಕೀಲರ ಸಾಹಿತ್ಯ ಪರಿಷತ್ತಿನ ಬೆಳಗಾವಿ ಅಧ್ಯಕ್ಷ  ಡಾ. ರವೀಂದ್ರ ತೋಟಿಗೇರ, ಉಪಾಧ್ಯಕ್ಷರಾದ ಕುಮಾರ ಸರವದೆ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಹಿತರಕ್ಷಣಾ ಮಂಡಳಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಪ್ರಕಾಶ ಐಹೊಳ್ಳಿ ಹಾಗೂ ಬೆಳಗಾವಿ ಜಿಲ್ಲಾ ಪ್ರಾಧಾನ ಕಾರ್ಯದರ್ಶಿ ಅನುಪಕುಮಾರ ಹೂಲಿಕಟ್ಟಿ ಉಪಸ್ಥಿತರಿದ್ದರು.

-ಡಾ. ರವೀಂದ್ರ ತೋಟಿಗೇರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button