Kannada NewsLatest

ಆಲಸ್ಯ ಮುಕ್ತ ಮನಸಿದ್ದರೆ ಜೀವನದಲ್ಲಿ ಯಶಸ್ಸು ನಿಶ್ಚಿತ; ಯಶಸ್ಸಿನ ಗುಟ್ಟೇನು ಎಂಬುದರ ನಿಜ ಉತ್ತರ

ಲೇಖನ :ರವಿ ಕರಣಂ.

ಮನುಷ್ಯನ ಆಲಸ್ಯತನವೆಂಬುದು ವ್ಯಕ್ತಿಯೊಬ್ಬನ ಅದ್ಬುತ ಪ್ರತಿಭೆಯನ್ನು ಮುರುಟಿ ಹಾಕಿ ಬಿಡುತ್ತದೆ ಎಂಬುದು ಬಹುತೇಕ ಮನಸುಗಳಿಗೆ ಗೊತ್ತೇ ಇರುವುದಿಲ್ಲ. ಆದರೆ ತಮ್ಮ ಬಗೆಗಿನ ಕೀಳರಿಮೆಯ ಪ್ರಭಾವದಿಂದಾಗಿ ಯಾವತ್ತೂ ಎದ್ದು ಬರಲಾರದ ಸ್ಥಿತಿಯಲ್ಲಿರುತ್ತಾರೆ. ಈ ನಿಸರ್ಗ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ವಿಶೇಷ ಶಕ್ತಿಯನ್ನು ಅರ್ಥಾತ್ ಪ್ರತಿಭೆಯನ್ನು ವರವಾಗಿ ಕೊಟ್ಟಿರುತ್ತದೆ ಎಂಬುದರಲ್ಲಿ ಅತಿಶಯೋಕ್ತಿಯಿಲ್ಲ. ಅದನ್ನು ಬಳಸಿಕೊಳ್ಳುವ ಇಂಗಿತ ಇರದೇ ಹೋದುದರ ಪರಿಣಾಮ, ಸಾಧನೆ ಗೈಯಬಹುದಾದ ವ್ಯಕ್ತಿಯನ್ನು ಜಗತ್ತು ಕಳೆದುಕೊಂಡು ಬಿಡುತ್ತದೆ ಎಂಬ ಅಳುಕು ಕಾಡುತ್ತದೆ.

ಒಂದು ಮಾತಿದೆ “ನಾಳೆ ಮಾಡುವ ಕೆಲಸ ಇಂದು ಮಾಡು, ಇಂದು ಮಾಡುವ ಕೆಲಸವನ್ನು ಈಗಲೇ ಮಾಡು” ಎಂಬುದರ ಹಿಂದೆ, ಮಹತ್ತರವಾದ ಕಾರ್ಯ, ಯಾರಿಂದ ಯಾವಾಗ ಜರುಗುತ್ತದೆ ಎಂಬುದು ನಿಗೂಢ ! ಅದು ದೊಡ್ಡದಿರಲಿ,ಅಥವಾ ಚಿಕ್ಕದಿರಲಿ ಅಂತೂ ಲೋಕದಲ್ಲಿ ನಾಲ್ಕು ಜನರಿಗೆ ಉಪಕಾರ ಇಲ್ಲ ಸಹಾಯವಾದರೆ ಅಷ್ಟೇ ಸಾಕು. ಅಲ್ಲವೇ ?

ಕೆಲವು ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಇನ್ನೂ ಕೆಲವು ಅವಕಾಶಗಳನ್ನು ನಾವೇ ಹುಡುಕಿಕೊಂಡು ಹೋಗಬೇಕಾಗುತ್ತದೆ ಎಂಬ ಸಾಲಗಳನ್ನೆಲ್ಲೋ ನೀವು ಓದಿರುವುದನ್ನು ನೆನಪಿಸಿಕೊಳ್ಳುತ್ತೀರಿ ಅದು ನಿಜವೇ ಆಗಿರುತ್ತದೆ. ಆದರೆ ಆಲಸ್ಯತನ ತುಂಬಿರುವ ವ್ಯಕ್ತಿಯು ಆ ಅವಕಾಶವನ್ನು ಬಳಸಿಕೊಳ್ಳಲಾರ. ತನ್ನೆಲ್ಲ ಜೀವನ ಮುಗಿಯುತ್ತಾ ಬಂದಾಗ ಕಡೆಗೊಮ್ಮೆ ಅವನು ಅಂದುಕೊಳ್ಳುತ್ತಾನೆ. “ನನಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಿದ್ದರೆ, ಹಾಗಿರುತ್ತಿದ್ದೆ, ಹೀಗಿರುತ್ತಿದ್ದೆ” ಎಂದು. ಅದು ಪಶ್ಚಾತ್ತಾಪದ ನುಡಿಯೋ? ಅಥವಾ ಜ್ಞಾನ ಹೊತ್ತಿದ್ದೋ? ಗೊತ್ತಾಗುವುದಿಲ್ಲ. ಜಾರಿ ಹೋದ ಸಮಯವಂತು ಎಂದೂ ಮರಳಿ ಬಾರದಂತಾಗಿರುತ್ತದೆ ಎಂಬುದಷ್ಟೇ ದಿಟ.

ಇದೇ ಸಂದರ್ಭದಲ್ಲಿ ಎಲ್ಲೋ ಓದಿದ ಒಂದು ಕಥೆ ನೆನಪಾಗುತ್ತಿದೆ. ಅದು ಎಲ್ಲಿ? ಹೇಗೆ ?ಎಂಬುದು ನನಗೆ ಸ್ಪಷ್ಟವಾಗಿಲ್ಲ. ಆದರೆ ಮನಸ್ಸಿನ ಮೇಲೆ ಅತಿಯಾದ ಪರಿಣಾಮವನ್ನು ಬೀರಿದ್ದು ಸುಳ್ಳಲ್ಲ. ಒಬ್ಬ ವ್ಯಕ್ತಿ ಇದ್ದನಂತೆ. ಅವನು ಸದಾ ಕಾಲ ಹಾಸಿಗೆಯಲ್ಲಿ ಮಲಗಿ ನಿದ್ರಿಸುತ್ತಿದ್ದನಂತೆ. ಅದೊಮ್ಮೆ ‘ಸುವರ್ಣ ಅವಕಾಶ’ ಬಾಗಿಲ ಬಳಿ ಬಂದು, ಬಾಗಿಲನ್ನು ಬಡಿಯಿತಂತೆ. ಇವನು ಮುಸುಕನ್ನು ತೆಗೆದವನೇ “ಯಾರದು?” ಎಂದು ಕೇಳಿದ. ಆಗ ಆ ಕಡೆಯಿಂದ ಬಂದ ದನಿ, “ನಾನು ನಿನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಬಂದ ಸುವರ್ಣ ಅವಕಾಶ. ಬಾಗಿಲು ತೆರೆದು ನನ್ನನ್ನು ಅಪ್ಪಿಕೋ” ಎಂದಿತಂತೆ. ಆದರೆ ಇವನು ಹಾಸಿಗೆಯಿಂದ ಏಳದೇ, ಹಾಸಿಗೆಯಲ್ಲೇ ಮಲಗಿ, ” ಬೇಡ ಬೇಡ. ಈಗ ನನ್ನನ್ನು ಮಾತನಾಡಿಸಬೇಡ. ನನ್ನನ್ನು ಅಪ್ಪಿಕೊಳ್ಳುವ ಅವಶ್ಯಕತೆಯೂ ಇಲ್ಲ. ನಾನು ನಿದ್ರೆಯಲ್ಲಿ ಸುಖ ಪಡುತ್ತಿದ್ದೇನೆ. ಹೊರಟು ಹೋಗು” ಎಂದು ಹೇಳಿ, ಮುಸುಕು ಹಾಕಿಕೊಂಡ. ಕೆಲ ಗಂಟೆಗಳ ನಂತರ, ಮತ್ತೆ ಬಾಗಿಲು ಬಡಿದ ಸದ್ದು ಕೇಳಿತು. ಇವನ ನಿದ್ರೆಗೆ ಭಂಗವಾಯಿತು. ಮತ್ತೆ ಮುಸುಕನ್ನು ತೆಗೆದು, “ಯಾರದು?” ಎಂದು ಕೇಳಿದ. ಆಗ ಆಚೆ ಕಡೆಯಿಂದ ಬಂದ ದನಿ “ನಾನು ಸುವರ್ಣ ಅವಕಾಶ. ನಿನ್ನನ್ನು ಅಪ್ಪಿಕೊಳ್ಳಲು ಆತುರದಿಂದ ಬಂದಿದ್ದೇನೆ. ದಯಮಾಡಿ ಬಾಗಿಲನ್ನು ತೆರೆ” ಎಂದಿತು. ಆಗ ಆ ವ್ಯಕ್ತಿಯು “ನೀನು ಖಂಡಿತ ಸುವರ್ಣ ಅವಕಾಶ ಅಲ್ಲ. ಸುಮ್ಮನೇ ನನ್ನನ್ನು ಕೆಣಕಬೇಡಿ. ನನ್ನ ನಿದ್ರೆಯನ್ನು ಭಂಗ ಮಾಡಬೇಡಿ. ಹೊರಟು ಹೋಗಿ” ಎಂದ. “ನಾನು ಸುವರ್ಣ ಅವಕಾಶ ಅಲ್ಲ, ಎಂಬುದನ್ನು ನೀನು ಹೇಗೆ ಹೇಳುತ್ತೀ?” ಎಂದು ಆ ಕಡೆಯಿಂದ ಮತ್ತೆ ದನಿ ತೇಲಿ ಬಂತು. ಅವನು ಹೇಳುತ್ತಾನಂತೆ “ಸುವರ್ಣ ಅವಕಾಶ ಎಂಬುದು ಜೀವನದಲ್ಲಿ ಒಂದೇ ಬಾರಿ ಬರುತ್ತದೆ. ಆದರೆ ನೀನು ಬಂದಿರುವುದು ಎರಡನೇ ಬಾರಿ. ಹಾಗಾಗಿ ನೀನು ಸುವರ್ಣ ಅವಕಾಶ ಅಲ್ಲ” ಎಂದು ಖಡಾ ಖಂಡಿತವಾಗಿ ತಿರಸ್ಕರಿಸಿದ. ಎರೆಡನೇ ಬಾರಿ ಬಂದಿದ್ದು ಸುವರ್ಣ ಅವಕಾಶವೇ. ಆದರೆ ಈ ವ್ಯಕ್ತಿ ಮಾಡಿದ್ದೇನು? ಬಹುತೇಕ ಜನರು ಹೀಗೆಯೇ ಅಂದುಕೊಳ್ಳಬಹುದು !

ನಾಳೆ ನೋಡಿದರಾಯಿತು. ಆಮೇಲೆ ಮಾಡಿದರಾಯಿತು. ಇನ್ನು ಸಾಕಷ್ಟು ಸಮಯವಿದೆ. ಇವತ್ತು ಮಾಡಿದರೂ ನಾಳೆ ಮಾಡಿದರೂ ಪ್ರತಿಫಲವೊಂದೇ ಇದೆ, ಅದಕ್ಕೆ ಅವಸರ ಬೇಕಿಲ್ಲ. ನಾವೆಷ್ಟು ಮಾಡಿದರು ಅಷ್ಟೇ. ಇತ್ಯಾದಿ ನುಡಿಗಳೆಲ್ಲವೂ ಅವರು ಆಲಸಿಗಳೇ ಎಂಬುದನ್ನು ಮತ್ತೆ ಮತ್ತೆ ರುಜುವಾತುಪಡಿಸುತ್ತವೆ. ಮತ್ತೆ ಕೆಲವರದು ಅಂದುಕೊಂಡ ತಕ್ಷಣವೇ ಆ ಕಾರ್ಯ ಜರುಗಿ ಬಿಡಬೇಕು ಎಂಬ ಹಠ. ಆಗದಿದ್ದರೆ ಅದೇಕೆ ಆಗುವುದಿಲ್ಲವೆಂಬ ಹಠ. ಅವರನ್ನು ಜಿದ್ದಿಗಿಳಿಸುತ್ತದೆ. ಕೆಲಸದಲ್ಲಿ ತೊಡಗಿಸುತ್ತದೆ. ಜಯದ ತೀರವನ್ನು ಮುಟ್ಟಿಸುತ್ತದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಕೆಲವರು ಹೇಳುತ್ತಾರೆ, “ಅವಸರವೇ ಅಪಘಾತಕ್ಕೆ ಕಾರಣ” ಎಂದು. ಆದರೆ ಎಲ್ಲಾ ಸಂದರ್ಭಗಳಲ್ಲೂ ಅಪಘಾತಗಳಾಗಲಿಕ್ಕಿಲ್ಲ ಎಂಬುದು ನನ್ನ ಅನಿಸಿಕೆ. ಸಮಯ ಅತ್ಯಂತ ಮಹತ್ವದ್ದು. ಅಲ್ಲದೆ ಕಡಿಮೆ ಇದೆ. ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳುವುದು ಜಾಣತನವಾಗಿರುತ್ತದೆ. ಹಾಗಾಗಿಯೇ “ಮಿಂಚಿಹೋದ ಕಾಲಕ್ಕೆ’ ಚಿಂತಿಸಿ ಫಲವಿಲ್ಲ” ಎಂಬ ನಾಣ್ಣುಡಿಯು ಬಂದಿರಬಹುದು ಎಂದುಕೊಳ್ಳುತ್ತೇನೆ. ಸರಿಯಾದ ಸಮಯದಲ್ಲಿ, ಸರಿಯಾದ ಕಾರ್ಯ ಜರಗುವುದು ಸೂಕ್ತ.

ಕೆಲ ವಿಚಾರಗಳನ್ನು ತೆಗೆದುಕೊಂಡು ನೋಡಿ. ಒಂದು ಕುಟುಂಬದಲ್ಲಿ ನಾಲ್ಕು ಜನ ಗಂಡು ಮಕ್ಕಳಿದ್ದಾರೆ. ಒಬ್ಬ ದುಡಿಯಲು ಶ್ರಮಿಸುತ್ತಿದ್ದಾನೆ, ಮೂರು ಜನ ಆಲಸಿಗಳಾಗಿದ್ದಾರೆ ಎಂದಾಗ, ಆ ಮನೆತನ ಯಾವ ಮಟ್ಟಕ್ಕಿರುತ್ತದೆ ? ಒಬ್ಬನ ಹೆಗಲ ಮೇಲೆ ಇಡೀ ಕುಟುಂಬದ ಭಾರವನ್ನು ಹೋರಿಸುವುದು ತಪ್ಪಾಗುತ್ತದೆ. ಮನೆತನದ ಬೆಳವಣಿಗೆಯು ಕುಂಠಿತಗೊಳ್ಳುತ್ತದೆ. ಅದೇ ನಾಲ್ಕೂ ಜನರು ಒಟ್ಟಾಗಿ ದುಡಿಯಲು ನಿಂತರೆ, ಶೀಘ್ರದಲ್ಲಿಯೇ ಆ ಮನೆ ಭವ್ಯ ಬಂಗಲೆ ಆಗಬಹುದು. ಆದರೆ ದುಡಿಯುವ ಮನಸ್ಸು ಇರಬೇಕು. ಯಾರೋ ತಂದು ಹಾಕಿದ ಅನ್ನದಲ್ಲಿ ಬದುಕುವುದು ನಾಚಿಕೆಗೇಡಿನ ಸಂಗತಿ. ಸರಿಯೇ ?

ವ್ಯತ್ಯಾಸ ಗಮನಿಸಿ. ಆಲಸಿಗಳು ಇದ್ದ ಪ್ರದೇಶದ ಗುಣಮಟ್ಟ ಹೇಗಿರುತ್ತದೆ? ಚುರುಕಿನಿಂದ, ಕಾರ್ಯ ಪ್ರವೃತ್ತಿ ತುಂಬಿದ ಜನರ ಪ್ರದೇಶ ಹೇಗಿರುತ್ತದೆ ? ಅದರಲ್ಲಿ ತೀವ್ರತರವಾದ ವ್ಯತ್ಯಾಸವನ್ನು ನಾವು ಗಮನಿಸಬಹುದು. ಅದಕ್ಕೆ ಕೆಲ ದೇಶಗಳ ಉದಾಹರಣೆಯನ್ನು ಕೊಡುತ್ತೇನೆ. ಇಸ್ರೇಲ್ ಅತ್ಯಂತ ಪುಟ್ಟ ರಾಷ್ಟ್ರ. ಆದರೆ ಅಲ್ಲಿಯ ಜನರು ಪ್ರತಿಯೊಬ್ಬರು ದುಡಿಯಲೇ ಬೇಕು. ಅಲ್ಲಿ ಹೆಣ್ಣು- ಗಂಡು ಎಂಬ ಭೇದ ಭಾವಗಳಿಲ್ಲ. ಸರ್ವರೂ ಸಮಾನರು. ಸರ್ವರೂ ಸರಿಯಾಗಿ ಹಂಚಿಕೆಯಾದ ಕೆಲಸವನ್ನು ಮಾಡಲೇಬೇಕಾದ ಪರಿಸ್ಥಿತಿ ಅಲ್ಲಿದೆ. ಹಾಗಾಗಿ ಅದು ಮುಂಚೂಣಿ ರಾಷ್ಟ್ರವಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಅದನ್ನು ಬಿಡಿ. ಜಪಾನ್ ಎರಡನೇ ವಿಶ್ವ ಮಹಾಯುದ್ಧದಲ್ಲಿ ಭಾರಿ ಹೊಡೆತವನ್ನು ತಿಂದಿದ್ದು, ಅದು ಮುಟ್ಟಿದ ಪರಿಸ್ಥಿತಿ ಯಾರಿಗೂ ಬೇಡವಾದಂಥದ್ದು. ಆದರೆ ಕೆಲವೇ ದಶಕಗಳಲ್ಲಿ ಮತ್ತೆ ತಲೆಯೆತ್ತಿ, ಅಮೆರಿಕಕ್ಕೆ ಸರಿ ಸಮಾನವಾಗಿ ನಿಂತಿದೆ ಎಂದರೆ, ಅಲ್ಲಿಯ ಜನರ ಛಲ, ಹಠ, ಮನೋಸ್ಥಿತಿ, ಕಾರ್ಯ ಪ್ರವೃತ್ತಿ ಇವೆಲ್ಲವೂ ಸಾಮಾನ್ಯ ಸಂಗತಿಯೇ ಅಲ್ಲ.

ವಿಶ್ವದಲ್ಲಿಯೇ ಅತ್ಯಂತ ದುಬಾರಿ ನಗರ ಎನಿಸಿಕೊಂಡಿರುವುದು ಸಿಂಗಾಪುರ್. ಅಲ್ಲಿ ಯಾವುದೇ ಒಂದು ವಸ್ತುವನ್ನು ಕೊಂಡುಕೊಳ್ಳಬೇಕಾದರೂ’ ನಿಮ್ಮ ಜೇಬು ಭರ್ತಿಯಾಗಿರಬೇಕು. ಅಷ್ಟೇ ಗುಣಮಟ್ಟದ ವಸ್ತುಗಳನ್ನು ಅಲ್ಲಿ ಮಾರಾಟ ಮಾಡಲಾಗುತ್ತದೆ. ಆ ನಗರದ ಜನರು, ಆ ಪ್ರದೇಶವನ್ನು ಇಟ್ಟುಕೊಂಡ ರೀತಿಯನ್ನು ನೋಡಿದರೆ ಅಚ್ಚರಿಗೆ ಕಾರಣವಾಗುತ್ತದೆ. ಒಂದು ಸಮಾಜವನ್ನು ಉತ್ಕೃಷ್ಟ ದರ್ಜೆಯ ಸಮಾಜವನ್ನಾಗಿ, ಜಗತ್ತಿನ ಕಣ್ಣಲ್ಲಿ ನಿಲ್ಲಿಸುವ ಹಠ, ಆ ಪ್ರದೇಶದ ಜನರಲ್ಲಿದೆ. ಹಾಗಾಗಿ ಸಿಂಗಾಪುರ ಹೆಸರಿಗೆ ತಕ್ಕಂತೆ ಸಿಂಹಪುರವೇ! ಹಾಗಾಗಿ ಪ್ರತಿಯೊಬ್ಬ ಪ್ರಜೆಯಲ್ಲಿಯೂ ಕೂಡ ಇಂಥದೊಂದು ಛಲ ಅಡಗಿರಬೇಕು. ಅಂದಾಗ ಆ ರಾಷ್ಟ್ರ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾದೀತು.

ಆಲಸ್ಯ ಮನೋಭಾವ ಎಂಬುದು ಪ್ರಕೃತಿದತ್ತವಾಗಿ ಪ್ರತಿಯೊಂದು ಪ್ರಾಣಿಯಲ್ಲಿಯೂ ಕೂಡ ಇರುವಂತಹದ್ದು. ಆದರೆ ಅದನ್ನು ಕಡಿತಗೊಳಿಸುವುದು ನಮ್ಮ ಕೈಯಲ್ಲಿ ಇರುತ್ತದೆ. ಸದ್ಗುಣವೋ, ದುರ್ಗುಣವೋ, ಅದನ್ನು ತಿದ್ದಿ ತೀಡಿ ಒಂದು ಮಾರ್ಗಕ್ಕೆ ತಂದುಕೊಳ್ಳುವ ವ್ಯವಸ್ಥೆ ನಮ್ಮ ಮನಸ್ಸಿನಲ್ಲಿರುತ್ತದೆ. ಅಂತಹ ಮನಸ್ಸು ಜಡತ್ವವನ್ನು ತುಂಬಿಕೊಂಡಿದ್ದರೆ ಅದೋಗತಿಯೇ! ಅವನು ಸಾಧಕನಾಗಲಾರ. ಅವನು ಪ್ರತಿಯೊಬ್ಬರಿಗೂ, ಮಣ್ಣಿಗೂ ಕೂಡ ಹೊರೆಯಾಗಿಬಿಡುತ್ತಾನೆ.

ನಮ್ಮೊಳಗಿನ ಪ್ರತಿಭೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಆತ್ಮ ತೃಪ್ತಿ ದೊರೆಯುತ್ತದೆ. ನಮ್ಮೊಳಗಿನ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಸಣ್ಣ ಸಾಧನೆಯಾದರೂ, ಮನಸ್ಸಿನಲ್ಲಿ ಅದು ಸಾಗರದಷ್ಟು ಕಾಣುತ್ತದೆ. ಅದು ಜೀವನದ ಉತ್ಸಾಹವನ್ನು ಇಮ್ಮಡಿಗೊಳಿಸುತ್ತದೆ. ಆಲಸ್ಯ ಮುಕ್ತ ಮನಸಿದ್ದರೆ ಜೀವನದಲ್ಲಿ ಯಶಸ್ಸು ನಿಶ್ಚಿತ. ಯಾರನ್ನೂ “ನಿಮ್ಮ ಯಶಸ್ಸಿನ ಗುಟ್ಟೇನು ?” ಎಂದು ಕೇಳಲೇ ಬೇಡಿ. ನಿಜ ಉತ್ತರವೆಂದರೆ ಅಲಸ್ಯ ರಹಿತ ಮನಸು. ಅಷ್ಟೇ !

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button