ಇಬ್ಬರು ಮಕ್ಕಳಿಗೆ ಯಶಸ್ವಿಯಾಗಿ ಪ್ರೀ ಎಮ್ಟಿವ್ ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುಕ್ಕೇರಿ ತಾಲೂಕಿನ 17 ವರ್ಷದ ಬಾಲಕಿ ಮತ್ತು ಹಳಿಯಾಳದ 9 ವರ್ಷದ ಬಾಲಕನಿಗೆ ಬೆಳಗಾವಿಯ ಕೆಎಲ್ಇಎಸ್ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಯಶಸ್ವಿಯಾಗಿ ಪ್ರೀ ಎಮ್ಟಿವ್ (Pre-emptive) ಕಿಡ್ನಿ ಟ್ರಾನ್ಸ್ ಪ್ಲಾಂಟೇಶನ್ ಮಾಡಲಾಯಿತು.
17 ವರ್ಷದ ಹುಡುಗಿ ತನ್ನ ತಾಯಿಯಿಂದ ಮತ್ತು 9 ವರ್ಷದ ಹುಡುಗ ತನ್ನ ಅಜ್ಜಿಯಿಂದ ಕಿಡ್ನಿ ಪಡೆದಿದ್ದಾರೆ. ಇಬ್ಬರೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಅವರನ್ನು ಉಳಿಸಿಕೊಳ್ಳಲು ಡಯಾಲಿಸಿಸ್ ಅಥವಾ ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್‌ಗೆ ಅನಿವಾರ್ಯವಾಗಿತ್ತು.
ಪೀಡಿಯಾಟ್ರಿಕ್ ನೆಪ್ರಾಲಜಿಸ್ಟ್ ಡಾ.ಮಹಾಂತೇಶ ವಿ ಪಾಟೀಲ್ ಅವರ ಟೀಮ್ ಯಶಸ್ವಿಯಾಗಿ ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್ ನಡೆಸಿತು. ಬೆಂಗಳೂರು ಬಿಟ್ಟರೆ ರಾಜ್ಯದಲ್ಲಿ ಬೇರೆಲ್ಲೂ ಇಂತಹ ಚಿಕಿತ್ಸೆ ಲಭ್ಯವಿಲ್ಲ.
ಮಕ್ಕಳು ಡಯಾಲಿಸಿಸ್‌ಗೆ ಒಳಗಾಗುವುದು ಬಹಳ ಕಷ್ಟ. ಮತ್ತು ಡಯಾಲಿಸಿಸ್ ಸಮಯದಲ್ಲಿ ಪೋಷಕರು ಮತ್ತು ಮಕ್ಕಳು ಇಬ್ಬರೂ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಾರೆ. ಮಕ್ಕಳು ವಿದ್ಯಾಭ್ಯಾಸ ವಂಚಿತರಾದರೆ, ಪಾಲಕರು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಡಯಾಲಿಸಿಸ್ ಗಿಂತ ಕಿಡ್ನಿ ಕಸಿ ಮಾಡುವುದು ಮಕ್ಕಳಿಗೆ ಉತ್ತಮ ಚಿಕಿತ್ಸೆಯಾಗಿದೆ. ಕಿಡ್ನಿ ಕಸಿ ನಂತರ ಇಬ್ಬರೂ ರೋಗಿಗಳು ಉತ್ತಮವಾಗಿ ಚೇತರಿಸಿಕೊಂಡಿದ್ದಾರೆ ಎಂದು ಕಿಡ್ನಿ ಟ್ರಾನ್ಸ್ ಪ್ಲಾಂಟೇಶನ್ ನೇತೃತ್ವ ವಹಿಸಿದ್ದ ಖ್ಯಾತ ಮಕ್ಕಳ ತಜ್ಞ ಡಾ.ಮಹಾಂತೇಶ ಪಾಟೀಲ ತಿಳಿಸಿದ್ದಾರೆ.
ಜೆ.ಎನ್.ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಎಸ್.ಮಹಾಂತಶೆಟ್ಟಿ ಅವರ ಸಹಕಾರದಲ್ಲಿ ಮೂತ್ರಶಾಸ್ತ್ರಜ್ಞರಾದ ಡಾ ಆರ್ ಬಿ ನೇರ್ಲಿ, ಡಾ ವಿಕ್ರಮ್ ಪ್ರಭಾ, ನಾಳೀಯ ಶಸ್ತ್ರಚಿಕಿತ್ಸಕ ಡಾ ರಿಚರ್ಡ್ ಸಲ್ಡಾನ್ಹಾ, ಅರಿವಳಿಕೆ ತಜ್ಞ ಡಾ ಮಾನೆ ಮತ್ತು ಡಾ ವಿನಾಯಕ ಜನ್ನು ಸಹಕಾರ ನೀಡಿದರು.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮತ್ತು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ದಯಾನಂದ ಅವರು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರ ತಂಡವನ್ನು ಅಭಿನಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ