*25 ವರ್ಷಗಳ ಬೃಹತ್ ಇನ್ಸಿಷನಲ್ ಹರ್ನಿಯಾಕ್ಕೆ KLE ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ*

ಯಳ್ಳೂರ ರಸ್ತೆಯ ಕೆ.ಎಲ್.ಇ. ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ 25 ವರ್ಷಗಳ ಬೃಹತ್ ಇನ್ಸಿಷನಲ್ ಹೆರ್ನಿಯಾಕ್ಕೆ ( Huge Incisional Hernia ) ಯಶಸ್ವಿ ಶಸ್ತ್ರಚಿಕಿತ್ಸೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಯಳ್ಳೂರ ರಸ್ತೆಯ ಕೆ.ಎಲ್.ಇ. ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕರ ತಂಡವು 25 ವರ್ಷಗಳಿಂದ ಬೃಹತ್ ಇನ್ಸಿಷನಲ್ ಹೆರ್ನಿಯಾದಿಂದ ಬಳಲುತ್ತಿದ್ದ 51 ವರ್ಷದ ಮಹಿಳೆಯೊಬ್ಬರಿಗೆ ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿ ಹೊಸ ಬದುಕಿನ ಆಶಾಕಿರಣ ಮೂಡಿಸಿದೆ.
ರೋಗಿಯು ಅಧಿಕ ರಕ್ತದೊತ್ತಡ, ಮಧುಮೇಹ, ಹೈಪೋಥೈರಾಯ್ಡಿಸಮ್, ಸ್ಥೂಲಕಾಯ, ಗರ್ಭಾಶಯದ ಬಹು ಫೈಬ್ರಾಯ್ಡ್ಸ್ (Multiple Fibroids) ಹಾಗೂ ರಕ್ತಹೀನತೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಈ ಹಿಂದೆ ಅವರಿಗೆ ಮೂರು ಬಾರಿ ಸಿಸೇರಿಯನ್ (LSCS) ಶಸ್ತ್ರಚಿಕಿತ್ಸೆ ನಡೆದಿತ್ತು. ಕಳೆದ 25 ವರ್ಷಗಳಲ್ಲಿ ಉಂಟಾಗಿದ್ದ ಬೃಹತ್ ಇನ್ಸಿಷನಲ್ ಹೆರ್ನಿಯಾದ ಪರಿಣಾಮವಾಗಿ ಸಣ್ಣ ಕರುಳಿನ ಬಹುತೇಕ ಭಾಗವು ಹೆರ್ನಿಯಾ ಚೀಲದೊಳಗೆ ಜಾರಿದ್ದು, ಹೊಟ್ಟೆಯ ಭಾಗವು ಅಸಹಜವಾಗಿ ಉಬ್ಬಿ ಕೆಳಗೆ ತೂಗುವ ಸ್ಥಿತಿಗೆ ತಲುಪಿತ್ತು.
ಈ ಸಂಕೀರ್ಣ ಸಮಸ್ಯೆಗೆ ಪರಿಹಾರಕ್ಕಾಗಿ ರೋಗಿಯು ಬೆಳಗಾವಿಯ ಹಲವಾರು ಆಸ್ಪತ್ರೆಗಳು ಹಾಗೂ ತಜ್ಞ ಶಸ್ತ್ರಚಿಕಿತ್ಸಕರನ್ನು ಸಂಪರ್ಕಿಸಿದ್ದರೂ, ಸಹ-ರೋಗಗಳು ಹಾಗೂ ಶಸ್ತ್ರಚಿಕಿತ್ಸೆಯ ಸಂಕೀರ್ಣತೆಯನ್ನು ಪರಿಗಣಿಸಿ ಅನೇಕರು ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದರು.
ನಂತರ ರೋಗಿಯು ಕೆ.ಎಲ್.ಇ. ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಮೆಡಿಸಿನ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀನಿವಾಸ್ ಅವರ ಬಳಿ ಬಂದರು. ರೋಗಿ ಮತ್ತು ಕುಟುಂಬ ಸದಸ್ಯರಿಗೆ ಶಸ್ತ್ರಚಿಕಿತ್ಸೆಯ ಅಪಾಯಗಳು ಹಾಗೂ ಚಿಕಿತ್ಸೆಯ ಸಂಪೂರ್ಣ ಮಾಹಿತಿಯನ್ನು ವಿವರಿಸಿ ಸಮಾಲೋಚನೆ ನಡೆಸಿದ ಬಳಿಕ ಈ ಸವಾಲಿನ ಶಸ್ತ್ರಚಿಕಿತ್ಸೆಯನ್ನು ಕೈಗೆತ್ತಿಕೊಳ್ಳಲಾಯಿತು.
ಡಾ. ಸಾಬು ಸಾತಿಹಾಳ, ಡಾ. ಸ್ಟಾಲಿನ್ ಹೆಗರೆ ಹಾಗೂ ಡಾ. ಶ್ರೀನಿವಾಸ್ ಅವರ ನೇತೃತ್ವದ ಶಸ್ತ್ರಚಿಕಿತ್ಸಕರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿತು.
ಶಸ್ತ್ರಚಿಕಿತ್ಸೆಯ ವೇಳೆ ಬೃಹತ್ ಇನ್ಸಿಷನಲ್ ಹೆರ್ನಿಯಾ ( Huge Incisional Hernia ), ಸಣ್ಣ ಕರುಳಿನ ಬಹುತೇಕ ಭಾಗವು ಹೆರ್ನಿಯಾ ಚೀಲದೊಳಗಿರುವುದು, ಕರುಳಿನ ನಡುವೆ ದಟ್ಟವಾದ ಅಂಟಿಕೆಗಳು (Dense Inter-loop Adhesions) ಹಾಗೂ ರೆಕ್ಟಸ್ ಅಬ್ಡೊಮಿನಿಸ್ ಸ್ನಾಯುಗಳ ತೀವ್ರ ದುರ್ಬಲತೆ ಕಂಡುಬಂದಿತು.
ಶಸ್ತ್ರಚಿಕಿತ್ಸೆಯಲ್ಲಿ ಅತ್ಯಂತ ಎಚ್ಚರಿಕೆಯಿಂದ Adhesiolysis ನಡೆಸಿ, Abdominal Wall Reconstruction ಮಾಡಲಾಯಿತು. ಹೊಟ್ಟೆಯ ಗೋಡೆಯನ್ನು ಬಲಪಡಿಸಲು 15 × 15 ಸೆಂ.ಮೀ. ಗಾತ್ರದ ಮೂರು Onlay Mesh ಅಳವಡಿಸಿ, Parietoplasty ಮೂಲಕ Rectus Sheath ಅನ್ನು ಬಲಪಡಿಸಲಾಯಿತು.
ಶಸ್ತ್ರಚಿಕಿತ್ಸೆಯ ಬಳಿಕ ರೋಗಿಗೆ 15 ದಿನಗಳ ಕಾಲ ಐಸಿಯು ಹಾಗೂ ವಾರ್ಡ್ನಲ್ಲಿ ತಜ್ಞ ವೈದ್ಯರ ನಿರಂತರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆಗೆ ಉತ್ತಮ ಸ್ಪಂದನೆ ದೊರೆತು, ರೋಗಿಯು ಸಂಪೂರ್ಣ ಚೇತರಿಸಿಕೊಂಡು ಆರೋಗ್ಯದಿಂದ ಮನೆಗೆ ಮರಳಿದ್ದಾರೆ.
ಈ ಯಶಸ್ಸಿಗೆ ಶಸ್ತ್ರಚಿಕಿತ್ಸಕರ ತಂಡದ ಪರಿಣಿತಿ, ಸಮರ್ಪಣೆ, ಸೂಕ್ತ ಯೋಜನೆ ಹಾಗೂ ಆಸ್ಪತ್ರೆಯ ಸಿಬ್ಬಂದಿಯ ಸಮನ್ವಯ ಕಾರಣವಾಗಿದೆ.
ಈ ಸಂದರ್ಭದಲ್ಲಿ ಯು.ಎಸ್.ಎಂ. ಕೆ.ಎಲ್.ಇ. ನಿರ್ದೇಶಕರಾದ ಡಾ. ಎಚ್. ಬಿ. ರಾಜಶೇಖರ, ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಎನ್. ಹಾಗೂ ವೈದ್ಯಕೀಯ ಅಧೀಕ್ಷಕರಾದ ಡಾ. ಸಂಜಯ ಕಂಬಾರ ಅವರು ವೈದ್ಯಕೀಯ ತಂಡವನ್ನು ಅಭಿನಂದಿಸಿ, ಮುಂದೆಯೂ ಇಂತಹ ಸಂಕೀರ್ಣ ಶಸ್ತ್ರಚಿಕಿತ್ಸೆಗಳ ಮೂಲಕ ಜನಸಾಮಾನ್ಯರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಬದ್ಧತೆಯನ್ನು ವ್ಯಕ್ತಪಡಿಸಿದರು.


