ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದ ಎಲ್ಲ 224 ಶಾಸಕರ ಏಕಪತ್ನಿ ವ್ರತದ ಕುರಿತು ತನಿಖೆಯಾಗಲಿ ಎನ್ನುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ ಹೇಳಿಕೆ ರಾಜಕೀಯದಲ್ಲಿ ತೀವ್ರ ಕಿಡಿ ಹೊತ್ತಿಸಿದೆ.
ಆಡಳಿತ ಪಕ್ಷ ಸೇರಿದಂತೆ ಬಹುತೇಕ ಜನಪ್ರತಿನಿಧಿಗಳು ಸುಧಾಕರ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ತೀವ್ರ ಸಂಚಲನ ಮೂಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಒಳ್ಳೆಯ ನುಡಿಮುತ್ತುಗಳನ್ನು ರಾಜ್ಯದ ಜನರಿಗೆ ಕೊಟ್ಟಿದ್ದಾರೆ. ಈ ಕುರಿತು ವಿಧಾನಸಭೆಯಲ್ಲಿ ಚರ್ಚೆಯಾಗಬೇಕು. ನಮ್ಮ ನಾಯಕರೊಂದಿಗೆ ಚರ್ಚಿಸುತ್ತೇನೆ ಎಂದಿದ್ದಾರೆ.
ನನಗಿರುವುದು ಒಂದೇ ಹೆಂಡತಿ, ಒಂದೇ ಸಂಸಾರ ಎಂದೂ ಅವರು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಯಾವುದನ್ನು ಚರ್ಚೆ ಮಾಡಬೇಕೋ ಅದನ್ನು ಬಿಟ್ಟು ಇಂತದ್ದನ್ನೆಲ್ಲ ಮಾತನಾಡುತ್ತಿದ್ದಾರೆ. ಅದಕ್ಕೇ ನಾನು ಅಧಿವೇಶನದಿಂದ ದೂರ ಉಳಿಯುತ್ತಿದ್ದೇನೆ ಎಂದಿದ್ದಾರೆ. ನಾನು ಜೀವನದಲ್ಲಿ ಒಮ್ಮೆ ತಪ್ಪು ಮಾಡಿದ್ದೇನೆ ಎಂದು ಓಪನ್ ಆಗಿಯೇ ಹೇಳಿದ್ದೇನೆ ಎಂದೂ ಅವರು ಹೇಳಿದರು.
ಶಾಸಕ ಶಿವಲಿಂಗೇ ಗೌಡ, ಅವರಿಗೇ ಬೇರೆ ಸಂಬಂಧ ಇರಬೇಕು. ಅವರು ತಾವು ಏಕಪತ್ನಿವೃತಸ್ತ ಎಂದು ಹೇಳಿಕೊಂಡಿಲ್ಲ. ನನಗಿರುವುದು ಒಂದೇ ಸಂಸಾರ, ಒಂದೇ ಹೆಂಡತಿ ಎಂದಿದ್ದಾರೆ.
ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಸುಧಾಕರ ಹೇಳಿಕೆ ಕೇಳಿ ಗಹಗಹಿಸಿ ನಕ್ಕಿದ್ದಾರೆ.
ಸಚಿವ ಬಿ.ಸಿ.ಪಾಟೀಲ, ಎಲ್ಲರೂ ಅವರವರ ಎದೆ ಮುಟ್ಟಿ ನೋಡಿಕೊಂಡರೆ ಸಾಕು, ತನಿಖೆ ಅಗತ್ಯವಿಲ್ಲ ಎಂದಿದ್ದಾರೆ.
ಸಚಿವೆ ಶಶಿಕಲಾ ಜೊಲ್ಲೆ, ನಾನು ಅವರ ಹೇಳಿಕೆಯನ್ನು ಇನ್ನೂ ನೋಡಿಲ್ಲ. ಆ ರೀತಿ ಹೇಳಿಕೆ ಕೊಡುವುದು ತಪ್ಪು. ಎಲ್ಲರ ಕುರಿತು ಆ ರೀತಿ ಹೇಳುವುದು ಸರಿಯಲ್ಲ. ನಾವು ಮಹಿಳಾ ಶಾಸಕರೂ ಇದ್ದೇವೆ. ಎಲ್ಲರ ಕುರಿತು ಆಪಾದನೆ ಮಾಡುವುದು ಸರಿಯಲ್ಲ ಎಂದರು.
ಶಾಸಕಿ ರೂಪಾ ಶಶಿಧರ, ಇಂತಹ ಚರ್ಚೆಗಳನ್ನೆಲ್ಲ ಕೇಳಿ ತುಂಬಾ ಬೇಜಾರಾಗುತ್ತದೆ. ಮೊದಲೇ ನಮಗೆ ಸಮಾಜದಲ್ಲಿ ತಲೆ ಎತ್ತಿ ಓಡಾಡದಂತಾಗಿದೆ. ಹಾಗಾಗಿ ನಾನು ಏನನ್ನೂ ಮಾತನಾಡಬಾರದೆನಿಸುತ್ತಿದೆ ಎಂದಿದ್ದಾರೆ.
ಶಾಸಕ ಸತೀಶ್ ಜಾರಕಿಹೊಳಿ, ನೂರಕ್ಕೆ ನೂರರಷ್ಟು ತನಿಖೆಯಾಗಲಿ. ಸುಧಾಕರ ಜವಾಬ್ದಾರಿ ಸ್ಥಾನದಲ್ಲಿದ್ದು ಮಾತನಾಡಿದ್ದಾರೆ. ಅವರು ತನಿಖೆ ಮಾಡಿಸಲಿ ಎಂದಿದ್ದಾರೆ.
ಅನೇಕ ಶಾಸಕರು ಯಾವುದೇ ಪ್ರತಿಕ್ರಿಯೆ ನೀಡದೆ ಮಾಧ್ಯಮದವರಿಂದ ತಪ್ಪಿಸಿಕೊಂಡು ಹೋಗುತ್ತಿದ್ದಾರೆ.
ಏಕಪತ್ನಿ ವ್ರತ ಹೇಳಿಕೆ; ಸದನದಲ್ಲೇ ಚರ್ಚೆ ಮಾಡ್ತೀವಿ ಎಂದ ಡಿಕೆಶಿ
224 ಶಾಸಕರ ಏಕಪತ್ನಿ ವ್ರತ ತನಿಖೆಯಾಗಲಿ: ಸುಧಾಕರ ಓಪನ್ ಚಾಲೇಂಜ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ