ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಬ್ಬರು ಮಕ್ಕಳೊಂದಿಗೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಉತ್ತರ ತಾಲೂಕು ಪ್ರಕೃತಿ ಬಡಾವಣೆಯಲ್ಲಿ ನಡೆದಿದೆ.
40 ವರ್ಷದ ಮಹಿಳೆ ವಸಂತ, ಮಕ್ಕಳಾದ 13 ವರ್ಷದ ಯಶ್ವಂತ್ ಹಾಗೂ 6 ವರ್ಷದ ನಿಶ್ಚಿತಾ ಆತ್ಮಹತ್ಯೆ ಮಾಡಿಕೊಂಡವರು. ರೂಮಿನ ಫ್ಯಾನಿಗೆ ಇಬ್ಬರು ನೇಣು ಬಿಗಿದುಕೊಂಡಿದ್ದು, ಮತ್ತೊಂದು ರೂಮಿನಲ್ಲಿ ಮಗು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಒಂದು ವರ್ಷದ ಹಿಂದೆ ವಸಂತಾ ಪತಿ ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ವರ್ಷದಿಂದ ವಸಂತಾ ಹಾಗೂ ಇಬ್ಬರು ಪುಟ್ಟ ಮಕ್ಕಳೊಂದಿಗೆ ಪ್ರಕೃತಿ ಲೇಔಟ್ ನ ಮನೆಯಲ್ಲಿ ವಾಸವಿದ್ದರು. ಪತಿಯನ್ನು ಕಳೆದುಕೊಂಡು ಮಾನಸಿಕವಾಗಿ ನೊಂದಿದ್ದ ವಸಂತಾ ಇಬ್ಬರು ಮಕ್ಕಳನ್ನು ಸಾಕುವುದು, ಜೊತೆಗೆ ಸಂಬಂಧಿಕರ ಚುಚ್ಚು ಮಾತಿನಿಂದ ಇನ್ನಷ್ಟು ನೊಂದಿದ್ದರು ಎನ್ನಲಾಗಿದೆ.
3 ಪುಟಗಳ ಸುದೀರ್ಘ ಡೆತ್ ನೋಟ್ ಬರೆದಿಟ್ಟಿರುವ ವಸಂತಾ ಮಕ್ಕಳೊಂದಿಗೆ ನೇಣಿಗೆ ಕೊರಳೊಡ್ಡಿದ್ದಾಳೆ. ’ನನ್ನ ಪತಿಯನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ಅವರು ಮಕ್ಕಳ ಮೇಲೆ ತೋರುತ್ತಿದ್ದ ಪ್ರೀತಿ, ವಿಶ್ವಾಸ ಯಾರೂ ತೋರಲು ಸಾಧ್ಯವಿಲ್ಲ. ನನ್ನ ಪತಿಗೆ ಬರಬೇಕಿದ್ದ ಹಣದ ದಾಖಲೆಗೂ ಇಲ್ಲ. ಪ್ರತಿ ಕ್ಷಣ ಭಯದ ವಾತಾವರಣ, ದಾರಿ ಕಾಣುತ್ತಿಲ್ಲ… ಪ್ರೀತಿ, ಕಾಳಜಿ ಇದ್ದರೆ ಹೇಗೋ ಜೀವನ ಸಾಗಿಸಬಹುದು. ನನಗೆ ಸಂಬಂಧಿಕರು ಇದ್ದರೂ ಇಲ್ಲದಂತೆ, ಮೇಲ್ನೋಟಕ್ಕೆ ಕಾಳಜಿ ತೋರಿ ಒಳಗೊಳಗೆ ಮೋಸ ಮಾಡುತ್ತಿದರು. ನಮಗೆ ಬರಬೇಕಾದ ಹಣ ಸರಿಯಾದ ಸಮಯಕ್ಕೆ ಬಂದಿಲ್ಲ. ಇಂತ ಕೆಟ್ಟ ಪ್ರಪಂಚದಲ್ಲಿ ನಮಗೆ ಬದುಕಲು ಸಾಧ್ಯವಾಗುತ್ತಿಲ್ಲ. ಉಪಕಾರವಾದರೆ ಮಾತ್ರ ಕೆಲಸ, ಇಲ್ಲವಾದರೆ ಚುಚ್ಚು ಮಾತುಗಳು. ನಾನು ಯಾರನ್ನೂ ದೂಷಿಸಲ್ಲ, ನನ್ನ ಹಣೆಬರಹ ಸರಿಯಿಲ್ಲ. ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲ… ’ಎಂದು ಸುದೀರ್ಘ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ