Kannada NewsKarnataka News

ತಿಂಗಳು ಪೂರೈಸಿದ ಫಾಸ್ಟ್ ಟ್ರೇನ್ ; ಬೆಳಗಾವಿಗರ ದಿಲ್ ಖುಷ್

ತಿಂಗಳು ಪೂರೈಸಿದ ಫಾಸ್ಟ್ ಟ್ರೇನ್ ; ಬೆಳಗಾವಿಗರ ದಿಲ್ ಖುಷ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಬಹುಕಾಲದ ಬೆಳಗಾವಿ ಜನರ ಬೇಡಿಕೆಯಾಗಿದ್ದ ಬೆಳಗಾವಿ–ಬೆಂಗಳೂರು ಸುಪರ್ ಫಾಸ್ಟ್ ಎಕ್ಸಪ್ರೆಸ್ ಟ್ರೇನ್ ಆರಂಭವಾಗಿ ಒಂದು ತಿಂಗಳಾಗಿದೆ. ಜೂನ್ 29ರಂದು ರೈಲ್ವೆಗೆ ಹಸಿರು ನಿಶಾನೆ ತೋರಿಸಲಾಗಿದೆ.

ಸುರೇಶ ಅಂಗಡಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ತಿಂಗಳಲ್ಲೇ ನೂತನ ರೈಲು ಆರಂಭಿಸಿದ್ದಾರೆ. ಆರಂಭದ ದಿನದಿಂದಲೂ ಬೆಳಗಾವಿ-ಬೆಂಗಳೂರು ಮತ್ತು ಬೆಂಗಳೂರು -ಬೆಳಗಾವಿ ರೈಲುಗಳು ತುಂಬಿಕೊಂಡೇ ಓಡಾಡುತ್ತಿವೆ. 860 ಪ್ರಯಾಣಿಕರ ಸಾಮರ್ಥ್ಯ ಹೊಂದಿರುವ ರೈಲಿನಲ್ಲಿ ಈವರೆಗೆ ಸುಮಾರ 48 ಸಾವಿರ ಪ್ರಯಣಿಕರು ಸಂಚರಿಸಿದ್ದಾರೆ.

ರಾಣಿ ಚನ್ನಮ್ಮ ಎಕ್ಸಪ್ರೆಸ್ ಟ್ರೇನ್ ಬೆಳಗಾವಿಗರಿಗೆ ಪ್ರಯೋಜನವಾಗಿರಲಿಲ್ಲ. ತೀರಾ ತಡವಾಗಿ ಬರುವುದರ ಜೊತೆಗೆ ಬುಕ್ಕಿಂಗ್ ಕೂಡ ಸಿಗುತ್ತಿರಲಿಲ್ಲ. ಇದರಿಂದ ಬೆಳಗಾವಿ-ಬೆಂಗಳೂರು ಪ್ರಯಾಣ ತೀರಾ ದುಬಾರಿ ಮತ್ತು ಪ್ರಯಾಸದಾಯಕವಾಗಿತ್ತು. ಸಿಕ್ಕಿದ ಬಸ್ ನಲ್ಲಿ ಜನರು ಪ್ರಯಾಣಿಸಬೇಕಿತ್ತು. ಖಾಸಗಿ ಬಸ್ ಗಳ ದುಬಾರಿ ಟಿಕೆಟ್ ಜನರ ಕಿಸೆಗೆ ಕತ್ತರಿಯಾಗಿತ್ತು.

ಸಮಯ, ಹಣ ಎರಡೂ ಉಳಿತಾಯ

ಶ್ರೀಮಂತರು, ರಾಜಕಾರಣಿಗಳು ಹುಬ್ಬಳ್ಳಿವರೆಗೆ ರಸ್ತೆ ಮಾರ್ಗದಲ್ಲಿ ಹೋಗಿ ಚನ್ನಮ್ಮ ಎಕ್ಸಪ್ರೆಸ್ ಟ್ರೇನ್ ಏರುತ್ತಿದ್ದರು. ಬರುವಾಗಲೂ ಹುಬ್ಬಳ್ಳಿಯಲ್ಲಿ ಇಳಿದು ಕಾರಿನಲ್ಲಿ ಬರುತ್ತಿದ್ದರು. ಇಲ್ಲವಾದಲ್ಲಿ ಬೆಳಗಾವಿ ಅಥವಾ ಹುಬ್ಬಳ್ಳಿಯಿಂದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಬೆಂಗಳೂರು ವಿಮಾನ ನಿಲ್ದಾಣದಿಂದ ನಗರಕ್ಕೆ ಬರುವುದೂ ಅಷ್ಟೇ ಸಮಯ ಮತ್ತು ಹಣ ವ್ಯಯಕ್ಕೆ ಕಾರಣವಾಗಿತ್ತು.

ಈಗ ಬೆಳಗಾವಿ -ಬೆಂಗಳೂರು ಮತ್ತು ಬೆಂಗಳೂರು-ಬೆಳಗಾವಿ ಸುಪರ್ ಫಾಸ್ಟ್ ಟ್ರೇನ್ ನಲ್ಲಿ ರಾತ್ರಿ ಊಟ ಮಾಡಿ 9 ಗಂಟೆಗೆ ಕುಳಿತರೆ ಬೆಳಗ್ಗೆ 7 ಗಂಟೆಗೆ ಬೆಂಗಳೂರಿನಲ್ಲಿರಬಹುದು. ರಾತ್ರಿ ನಿದ್ರೆ ಮಾಡುವ ಸಮಯದಲ್ಲಿ ಬೆಂಗಳೂರಿನಲ್ಲಿರಬಹುದು.

ಇದರಿಂದಾಗಿ ಖಾಸಗಿ ಬಸ್ ಗಳು, ವಿಶೇಷವಾಗಿ ಹಬ್ಬದಂತಹ ಸೀಸನ್ ಗಳಲ್ಲಿ ವಿಧಿಸುತ್ತಿದ್ದ ದುಬಾರಿ ಟಿಕೆಟ್ ದರದಿಂದ ಜನ ಬಚಾವ್ ಆಗಿದ್ದಾರೆ. ಪ್ರಯಾಣವೂ ಸುಖಕರವಾಗಿದೆ.

ತತ್ಕಾಲ್ ದರ

ಸಧ್ಯಕ್ಕೆ ಈ ಟ್ರೇಮನ್ ಅಕ್ಟೋಬರ್ ವರೆಗೆ ಎಂದು ನಿಗದಿಪಡಿಸಲಾಗಿದೆ. ಆದರೆ ಪ್ರಯಾಣಿಕರ ದಟ್ಟಣೆ ಇರುವುದರಿಂದ ಇದನ್ನು ರದ್ಧು ಪಡಿಸಲು ಸಾಧ್ಯವಿಲ್ಲ. ಇದು ಶಾಶ್ವತವಾಗಿ ಮುಂದುವರಿಯಲಿದೆ. ಹೆಚ್ಚಿನ ಬೋಗಿ ಅಳವಡಿಕೆಯೂ ಅನಿವಾರ್ಯವಾಗಲಿದೆ.

ಸುಪರ್ ಫಾಸ್ಟ್ ಎಕ್ಸಪ್ರೆಸ್ ಟ್ರೇನ್ ದರ ತತ್ಕಾಲ್ ದರವಾಗಿರುವುದರಿಂದ ಬೇರೆ ರೈಲ್ವೆ ದರಕ್ಕಿಂತ ಸ್ವಲ್ಪ ದುಬಾರಿಯಾಗಿದೆ. ಸುಮಾರ 2 ಗಂಟೆ ಪ್ರಯಾಣದ ಸಮಯ ಉಳಿಸುವುದರಿಂದ ಹೆಚ್ಚು ಹಣ ವ್ಯಯಿಸುವುದು ಅನಿವಾರ್ಯವಾಗಿದೆ. ಪರ್ಸ್ಟ ಎಸಿ 2730 ರೂ., ಸೆಕೆಂಡ್ ಎಸಿ 1755 ರೂ., ಥರ್ಡ್ ಎಸಿ 1235 ರೂ. ಹಾಗೂ ಸ್ಲೀಪರ್ ಕೋಚ್ 465 ರೂ. ಇದೆ.

ಪ್ರಯಾಣ ದರವನ್ನು ಸಾಮಾನ್ಯ ರೈಲಿನ ದರಕ್ಕೆ ತರಲು ಮತ್ತು ಇನ್ನೂ ಹೆಚ್ಚಿನ ಕೋಚ್ ಅಳವಡಿಸಲು ಸುರೇಶ ಅಂಗಡಿ ತಮ್ಮ ಅಧಿಕಾರ ಬಳಸಿದರೆ ಬೆಳಗಾವಿ ಜನರಿಗೆ ಇನ್ನಷ್ಟು ಸಹಾಯವಾಗಲಿದೆ.

ಇದನ್ನೂ ಓದಿ –

ಬೆಳಗಾವಿ-ಬೆಂಗಳೂರು ತತ್ಕಾಲ್: ಸುರೇಶ ಅಂಗಡಿ ಟ್ವೀಟ್

ಹೊಸ ರೈಲು ಸಂಖ್ಯೆ 06526 ನಾಳೆ ಆರಂಭ

ಬಜೆಟ್ ಗೆ ಮುನ್ನವೇ ಬೆಳಗಾವಿಗೆ ಸುರೇಶ ಅಂಗಡಿ ಭರ್ಜರಿ ಘೋಷಣೆ

ಸುರೇಶ ಅಂಗಡಿಗೆ ರೈಲ್ವೆ ರಾಜ್ಯ ಖಾತೆ

ರೈಲ್ವೆ ಕಾಮಗಾರಿಗಳಿಗೆ ವೇಗ -ಸಚಿವ ಸುರೇಶ ಅಂಗಡಿ ಭರವಸೆ

ಹಠಾತ್ ರೈಲ್ವೆ ನಿಲ್ದಾಣ ಪರಿಶೀಲಿಸಿದ ಸಚಿವ ಸುರೇಶ ಅಂಗಡಿ

ವಾಣಿಜ್ಯೋದ್ಯಮಿಗಳ ಅಹವಾಲು ಆಲಿಸಿದ ಸುರೇಶ ಅಂಗಡಿ

ಬೆಳಗಾವಿ-ಬೆಂಗಳೂರು ತತ್ಕಾಲ್ ಎಕ್ಸಪ್ರೆಸ್: 29ರಂದು ಅಂಗಡಿಯಿಂದ ಹಸಿರು ನಿಶಾನೆ

 

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button