Kannada NewsKarnataka NewsLatest

ಮಹಾರಾಷ್ಟ್ರದಲ್ಲಿ ಬಿಜೆಪಿಗೆ, ಮೋದಿಗೆ ಕಪಾಳ ಮೋಕ್ಷ -ದಿನೇಶ ಗುಂಡೂರಾವ್

ಪ್ರಗತಿವಾಹಿನಿ ಸುದ್ದಿ,  ಅಥಣಿ : ಬಿಜೆಪಿ ಆಪರೇಷನ್ ಕಮಲದ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಇದು ದೇಶಕ್ಕೆ ಮಾರಕವಾಗಿದೆ. ಈ ಮೂಲಕ ದೇಶದ ಸ್ವಾಸ್ಥ್ಯಕ್ಕೆ ಹಾನಿಯನ್ನುಂಟುಮಾಡುತ್ತಿದೆ ಎಂದು ಎಐಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
 ಇಂದು ಅಥಣಿಯ ಶಿವಣಗಿ ಕಲ್ಯಾಣ   ಮಂಟಪದಲ್ಲಿ ಜರುಗಿದ ಪ್ರಚಾರ – ಸಭೆಯಲ್ಲಿ ಭಾಷಣ ಮಾಡಿದ ಅವರು, ಬಿಜೆಪಿ ರಾಷ್ಟ್ರಪ್ರೇಮದ ಬಗ್ಗೆ ದೇಶಭಕ್ತಿಯ ಬಗ್ಗೆ ಬಹಳಷ್ಟು ಮಾತನಾಡುತ್ತದೆ. ಇವರಷ್ಟೇ ದೇಶಭಕ್ತರು ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಬಿಜೆಪಿ ಇಲ್ಲದಿದ್ದರೆ ಹಿಂದೂಗಳೇ ಅಲ್ಲ,    ದೇಶದ ವಿರೋಧಿಗಳು, ಬಿಜೆಪಿಯ ಸಿದ್ದಾಂತ  ಒಪ್ಪಿಕೊಳ್ಳದಿದ್ದರೆ ನೀವು ಭಾರತೀಯರಲ್ಲ ಎನ್ನುವಂತೆ ಬಿಜೆಪಿ ನಡೆದುಕೊಳ್ಳುತ್ತಿದೆ.
ಮಹಾರಾಷ್ಟ್ರದಲ್ಲಿ ಅಷ್ಟು ತುರ್ತಾಗಿ ರಾತ್ರೋರಾತ್ರಿ ರಾಷ್ಟ್ರಪತಿ ಆಳ್ವಿಕೆಯನ್ನು ತೆಗೆದು ನಸುಕಿನ 5 ಗಂಟೆಗೆ ರಾಷ್ಟ್ರಪತಿಯವರನ್ನು ಎಬ್ಬಿಸಿ ಸಹಿ ಮಾಡಿಸಿ 8ಗಂಟೆಗೆ ಪ್ರಮಾಣವಚನ ಸ್ವೀಕರಿಸುವ ಅಗತ್ಯವಾದರೂ ಏನಿತ್ತು. ಮಹಾರಾಷ್ಟ್ರಕ್ಕೆ ಸುಪ್ರಿಂಕೋರ್ಟ್ ನೀಡಿದ ಆದೇಶ ಬಿಜೆಪಿಗೆ, ನರೇಂದ್ರ ಮೋದಿಯವರಿಗೆ ಕಪಾಳಮೋಕ್ಷ ಮಾಡಿದ ಆದೇಶ ಎಂದು ಬಣ್ಣಿಸಿದರು

 

ಹಣ ತಗೊಳ್ಳಿ

ಮಾಜಿ ಸಚಿವ ಹಾಗೂ ಅಥಣಿ ಕ್ಷೇತ್ರದ ಚುನಾವಣಾ ಉಸ್ತುವಾರಿ ಎಂ . ಬಿ . ಪಾಟೀಲ ಅವರು ಮಾತನಾಡುತ್ತ ಭೀಕರ ಪ್ರವಾಹ ಬಂದ ವೇಳೆ ಸಂತ್ರಸ್ತರು ಗಂಜಿ ಕುಡಿಯುತ್ತಿದ್ರೆ , ಅನರ್ಹ ಕುಮಟಳ್ಳಿ ಮುಂಬೈ ಹೊಟೇಲ್ ನಲ್ಲಿ 2 ಸಾವಿರ ರೂ . ಟೀ ಕುಡಿಯುತ್ತಿದ್ದರು , ಕುಮಟಳ್ಳಿ ಹಣ ಕೊಡಲು ಬಂದ್ರೆ ತಗೊಳ್ಳಿ , ಬಿಡಬೇಡಿ, ಅದು ನಿಮ್ಮ ಹಣವಾಗಿದೆ. ಕುಮಟಳ್ಳಿಯಿಂದ ಹಣ ಪಡೆದು ಕಾಂಗ್ರೆಸ್ ಗೆ ಓಟು ಹಾಕಿ ಎಂದು  ಸಲಹೆ ನೀಡಿದ್ದಾರೆ
 ಅನರ್ಹರೆಲ್ಲ ನಾಲಾಯಕರು , ಅಯೋಗ್ಯರಾಗಿದ್ದಾರೆ .  ಈ ನಾಲಾಯಕರನ್ನ ಲಾಯಕ್ ಮಾಡಬೇಡಿ , ಮಹೇಶ್ ಕುಮಟಳ್ಳಿಯನ್ನ ಶಾಶ್ವತವಾಗಿ ಅನರ್ಹರನ್ನಾಗಿ ಮಾಡಿ , ಅವರನ್ನ ಪರ್ಮನೆಂಟ್ ಆಗಿ ಮುಂಬೈಗೆ ಕಳುಹಿಸಿ. ಸಾಲಸೋಲ ಮಾಡಿ ಕಾರ್ಯಕರ್ತರು ತಮ್ಮ ವೈಯಕ್ತಿಕ ಪ್ರತಿಷ್ಠೆ ಪಣಕ್ಕಿಟ್ಟು ಮಹೇಶ್ ಕುಮಟಳ್ಳಿ ಯನ್ನು ಆರಿಸಿ ಕಳುಹಿಸಿದರು. ಅಲ್ಲಿ ತಮ್ಮ ಹಿತಾಸಕ್ತಿಗಾಗಿ ಮುಂಬೈನಲ್ಲಿ ಕಾಲಕಳೆದರು.
 ಪ್ರವಾಹ ಸಂಕಷ್ಟದ ಸಮಯದಲ್ಲಿ ಅವರ ಮನೆಯ ಒಬ್ಬ ಸದಸ್ಯರೂ ನಿರಾಶ್ರಿತರಾದ ಜನರಿಗೆ ಭೇಟಿಯಾಗಲಿಲ್ಲ. ಇಂದು ಮನೆ ಮನೆಗೆ ತಿರುಗಿ ಅವರ ಸಹೋದರ, ಅವರ ಪತ್ನಿ, ಅವರ ಮನೆಯ ಮಕ್ಕಳು, ಮತ ಕೇಳುತ್ತಿದ್ದಾರೆ. ಇಂತಹ ವ್ಯಕ್ತಿಯನ್ನು ಶಾಶ್ವತವಾಗಿ ಮನೆಗೆ ಕಳುಹಿಸಿ. ಸುಪ್ರೀಂಕೋರ್ಟ್ ಅನರ್ಹತೆ ಮಾಡಿತ್ತು. ಇಂದು ಜನತೆಯ ಕೋರ್ಟಿನಲ್ಲಿ  5ನೇ ತಾರೀಖಿಗೆ ಶಾಶ್ವತವಾಗಿ ಅನರ್ಹತೆಯ ಪಟ್ಟ ಕಟ್ಟುವ ಮೂಲಕ ಸೋಲಿಸಿ ಮನೆಗೆ ಕಳುಹಿಸಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.
ಗೋಕಾಕ್ – ಬಿಜಾಪುರ ಕಂಟ್ರೋಲ್ ನಲ್ಲಿ ಇರಬೇಡಿ , ಜನರ ಕಂಟ್ರೋಲ್ ನಲ್ಲಿ ಇರಿ. ನೀನು ಕೂಡ ಕುಮಟಳ್ಳಿಯಂತೆ ಮೋಸ ಮಾಡಬೇಡ ಎಂದು ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಅವರಿಗೆ ಸಲಹೆ ನೀಡಿದ್ದಾರೆ .
ಚುನಾವಣಾ ಮತಪತ್ರದಲ್ಲಿ ಮಹೇಶ್ ಕುಮಟಳ್ಳಿಗೆ ಎರಡು  [ 2 ] ನಂಬರ್ , ಗಜಾನನ ನಂ 1 ಸ್ಥಾನ ಸಿಕ್ಕಿದೆ . ಚುನಾವಣಾ ಆಯೋಗ ಸರಿಯಾದ ನಂಬರ್‌ ಕೊಟ್ಟಿದೆ . ಈ ನಂಬರ್ ಕೊಟ್ಟ ಹಾಗೆ ಗಜಾನನ ಮಂಗಸೂಳಿ ಅವರು ಒಂದನೇ ನಂಬರಿನಲ್ಲಿ ಉಪಚುನಾವಣೆಯಲ್ಲಿ ಭರ್ಜರಿ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು  ಹೇಳಿದ್ದಾರೆ .
 ಕಾರ್ಯಕ್ರಮದಲ್ಲಿ ಶಾಸಕ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ , ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಆರಂಭದಿಂದಲೂ ಬಂಡಾಯ ಮಾಡುತ್ತಾ ಮಂತ್ರಿ ಸ್ಥಾನಕ್ಕಾಗಿ ಹೋರಾಟ ಮಾಡಿದ್ದಾರೆ. ಇವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಮೂಲಕ ಇವರನ್ನು ಸೋಲಿಸಬೇಕು ಪಾಠ ಕಲಿಸಬೇಕು. ಗಜಾನನ ಮಂಗಸೂಳಿ ಅವರನ್ನು ಗೆಲ್ಲಿಸಬೇಕು  ಎಂದು ಹೇಳಿದರು .
ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ, ನಾನು ತಮ್ಮೆಲ್ಲರ ಸೇವಾಕಾಂಕ್ಷಿಯಾಗಿದ್ದೇನೆ. ನಮಗೆ, ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಮತಕ್ಷೇತ್ರದ ಜನತೆಗೆ ದ್ರೋಹ ಬಗೆದು ಮುಂಬೈ ಸೇರಿದ ಮಹೇಶ್ ಕುಮಟಳ್ಳಿ ಗೆ ಶಾಶ್ವತವಾಗಿ ಅನರ್ಹತೆಯ ಪಟ್ಟ ಕಟ್ಟಿ ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಜಯ ನೀಡಿ ಎಂದು ವಿನಂತಿಸಿದರು
ಈ ಸಂದರ್ಭದಲ್ಲಿ ಮಾಜಿ ಶಾಸಕ ಅಥಣಿ ಉಸ್ತುವಾರಿ ನಂಜಯ್ಯನಮಠ, ಮಾಜಿ ಶಾಸಕರಾದ ಜಿ ಟಿ ಪಾಟೀಲ್, ರಾಜು ಆಲಗೂರ, ಮಾಜಿ ಸಚಿವ ಶರಣ ಪ್ರಕಾಶ ಪಾಟೀಲ, ಸುಶೀಲ್ ಕುಮಾರ್ ಬೆಳಗಲಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಸುನಿಲ ಸಂಕ, ಸದಾಶಿವ ಬೂಟಾಳೆ, ಸುರೇಶ ಪಾಟೀಲ್ , ಎಐಸಿಸಿ ಸದಸ್ಯ ಕಾಂತಾ ರಾಥೋಡ, ಅಥಣಿ ಬ್ಲಾಕ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ತೆಲಸಂಗ ಬ್ಲಾಕ್ ಅಧ್ಯಕ್ಷ ಎಸ್ ಜಿ ಪೂಜಾರಿ, ತಾಲೂಕ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಆಶಾ ಪಾಟೀಲ್ , ಮಾಜಿ ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಸನದಿ, ಮಾಜಿ ಶಾಸಕ ಷಹಜಹಾನ್ ಡೊಂಗರಗಾವ  ಹಾಗೂ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ವಿವಿಧ ಪದಾಧಿಕಾರಿಗಳು ಅಭಿಮಾನಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು .

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button