ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಅತ್ಯಾಚಾರಕ್ಕೊಳಗಾಗಿದ್ದ 14 ವರ್ಷದ ಬಾಲಿಕಿ ಇತ್ತೀಚೆಗೆ ಮಗುವನ್ನು ಹಡೆದಿದ್ದು, ಇದೀಗ ಬಾಲಕಿಯ ಈ ಅವಸ್ಥೆಗೆ 84 ವರ್ಷದ ವೃದ್ಧ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಪಶ್ಚಿಮ ಬಂಗಾಳದ 84 ವರ್ಷದ ವೃದ್ಧನ ಮನೆಯಲ್ಲಿ ಬಾಲಕಿ ಹಾಗೂ ಆಕೆಯ ಕುಟುಂಬಸ್ಥರು ಬಾಡಿಗೆಗೆ ಇದ್ದರು. ಬಾಲಕಿಯ ಮೇಲೆ ವೃದ್ಧ ಅತ್ಯಾಚಾರವೆಸಗಿದ್ದು, ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿ ಜುಲೈ 5ರಂದು ಹೆರಿಗೆಯಾಗಿದೆ. ಪ್ರಕರಣ ಸಂಬಂಧ ವೃದ್ಧನನ್ನು ಬಂಧಿಸಲಾಗಿದ್ದು, ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ವೃದ್ಧನ ಪರ ಖ್ಯಾತ ವಕೀಲ ಕಪಿಲ್ ಸಿಬಲ್ ವಾದ ಮಂಡಿಸುತ್ತಿದ್ದಾರೆ.
ಆರೋಪಿ ಪರ ವಾದ ಮಂಡಿಸಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ವಾದ ಮಂಡಿಸಿದ್ದು, ಈ ಇಳಿವಯಸ್ಸಿನಲ್ಲಿ ತನ್ನ ಕಕ್ಷಿದಾರ ಲೈಂಗಿಕ ಸಂಭೋಗ ಮಾಡಲು ಅಸಮರ್ಥನಾಗಿದ್ದಾರೆ. ಅಲ್ಲದೇ ವಯಸ್ಸಿನ ಜೊತೆಗೆ ಹಲವು ಅನಾರೋಗ್ಯಗಳಿದ್ದು, ಲೈಂಗಿಕ ಚಟುವಟಿಕೆ ನಡೆಸಲು ಸಾಧ್ಯವಿಲ್ಲ ಎಂದು ವಾದಿಸಿದ್ಧಾರೆ.
ಬಾಡಿಗೆ ವಿಚಾರದಲ್ಲಿ ಆದ ಜಗಳದಿಂದಾಗಿ ವೃದ್ಧನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದ್ದು, ಡಿಎನ್ಎ ಪರೀಕ್ಷೆಗೂ ಆರೋಪಿ ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಮೇ 12ರಿಂದಲೂ ಆರೋಪಿ ಜೈಲಿನಲ್ಲಿದ್ದು, ಅವರ ಆರೋಗ್ಯಸ್ಥಿತಿ ಹದಗೆಡುತ್ತಲೇ ಇದೆ ಹೀಗಾಗಿ ಅವರಿಗೆ ಚಿಕಿತ್ಸೆಗಾಗಿ ಜಾಮೀನು ನೀಡುವಂತೆ ಮನವಿ ಮಾಡಿದ್ದಾರೆ.
ವಾದ ಆಲಿಸಿದ ಸುಪ್ರೀಂ ಕೋರ್ಟ್, ಆರೋಪಿ ವೃದ್ಧನ ಡಿಎನ್ಎ ಮತ್ತು ಪ್ಯಾಟರ್ನಿಟಿ ಪರೀಕ್ಷೆಗಳನ್ನ ನಡೆಸುವಂತೆ ನಿರ್ದೇಶನ ನೀಡಿದ್ದು, ಮೂರು ವಾರಗಳ ಬಳಿಕ ಮತ್ತೆ ಕೋರ್ಟ್ ಗೆ ಹಾಜರಾಗುವಂತೆ ತಿಳಿಸಿ, ವಿಚಾರಣೆ ಮುಂದೂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ