ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಬೆಳಗಾವಿಯ ವಾಣಿಜ್ಯೋದ್ಯಮ ಸಂಘದ ಪದಾಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ಫೌಂಡ್ರಿ ಕ್ಲಸ್ಟರ್ ಸಭಾಭವನದಲ್ಲಿ ನಡೆದ ಸಭೆಯಲ್ಲಿ ವಾಣಿಜ್ಯೋದ್ಯಮಗಳು ಬೆಳಗಾವಿಯ ಹಲವಾರು ಬೇಡಿಕೆಗಳನ್ನು ಸಚಿವರ ಮುಂದಿಟ್ಟರು. ಧಾರವಾಡಿ-ಕಿತ್ತೂರು-ಬೆಳಗಾವಿ-ಕೊಲ್ಲಾಪುರ ರೈಲ್ವೆ ಮಾರ್ಗ, ಗೋವಾ ಮತ್ತು ಪುಣಾಕ್ಕೆ ಇಂಟರ್ ಸಿಟಿ ರೈಲ್ವೆ, ಧಾರವಾಡ -ಬೆಳಗಾವಿ ರೈಲ್ವೆ ವೇಗ ಹೆಚ್ಚಿಸುವುದು, ಬೆಂಗಳೂರು ಮತ್ತು ಮುಂಬೈಗೆ ಹೆಚ್ಚಿನ ರೈಲ್ವೆ ವ್ಯವಸ್ಥೆ ಮತ್ತು ಹೆಚ್ಚಿನ ಬೋಗಿ ಜೋಡಿಸುವುದು, ಬೆಳಗಾವಿಯಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಆರಂಭಿಸಬೇಕು ಎನ್ನುವ ಬೇಡಿಕೆಗಳನ್ನು ಸಚಿವರ ಮುಂದಿಟ್ಟರು.
ನರೇಂದ್ರ ಮೋದಿ ಬಂದ ನಂತರ ಮೇಕ್ ಇನ್ ಇಂಡಿಯಾ ಎನ್ನುತ್ತಿದ್ದಾರೆ. ಆದರೆ ಸ್ಥಳೀಯವಾಗಿ ಉತ್ಪಾದನೆಯಾಗುವ ಉತ್ಪನ್ನಗಳನ್ನು ರೈಲ್ವೆ ಇಲಾಖೆಯವರು ಖರೀದಿಸುತ್ತಿಲ್ಲ. ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿದೆ. ವಿದೇಶದಿಂದ ಆಮದು ಮಾಡಿಕೊಳ್ಳುವುದರಲ್ಲೇ ಅಧಿಕಾರಿಗಳಿಗೆ ಆಸಕ್ತಿ ಜಾಸ್ತಿ. ಮಧ್ಯವರ್ತಿಗಳ ಹಾವಳಿಯೂ ಜಾಸ್ತಿಯಾಗಿದೆ ಎಂದು ಉದ್ಯಮಿಗಳು ದೂರಿದರು.
ಶಾಸಕ ಅಭಯ ಪಾಟೀಲ, ಆದಷ್ಟು ಬೇಗ ಫ್ಲೈಓವರ್ ಗಳನ್ನು ಪೂರ್ಣಗೊಳಿಸುವಂತೆ ಮತ್ತು ಪುಣಾ ಹಾಗೂ ಗೋವಾಕ್ಕೆ ಇಂಟರ್ ಸಿಟಿ ರೈಲ್ವೆ ವ್ಯವಸ್ಥೆ ಮಾಡುವಂತೆ ಕೋರಿದರು.
ಎಲ್ಲವನ್ನೂ ಆಲಿಸಿದ ಅಂಗಡಿ, ತಮ್ಮಿಂದ ಸಾಧ್ಯವಾದಷ್ಟು ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು. ಮೋದಿ ಸರಕಾರದಲ್ಲಿ ಜನರ ನಿರೀಕ್ಷೆ ಹೆಚ್ಚಿದ್ದು, ಹಂತ ಹಂತವಾಗಿ ಎಲ್ಲವನ್ನೂ ಈಡೇರಿಸಲಾಗುವುದು. ಬೆಳಗಾವಿಗೆ ತಮ್ಮ ಅವಧಿಯಲ್ಲಿ ಹೆಚ್ಚಿನ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.
ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಹೇಶ ಬಾಗಿ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಹನ್ ಜುವಳಿ, ಕ್ರೆಡೈ ರಾಜ್ಯ ಉಪಾಧ್ಯಕ್ಷ ಚೈತನ್ಯ ಕುಲಕರ್ಣಿ, ಜಿಲ್ಲಾಧ್ಯಕ್ಷ ರಾಜೇಶ ಹೆಡಾ, ಉದ್ಯಮಿಗಳಾದ ಸಚಿನ್ ಸಬ್ನಿಸ್, ದೀಪಕ್ ದಡೋತಿ, ದಿಲೀಪ್ ಚಿಟ್ನಿಸ್, ದಿಲೀಪ್ ಚಿಂಡಕ್, ವಿಲಾಸ ಬದಾಮಿ, ಬಕುಲ್ ಜೋಶಿ, ಹೇಮಂತ ಲಟ್ಟೆ, ಸತೀಶ್ ಗೌರಗೊಂಡ, ಮಹೇಶ ಹುದಳಿ, ಗೂಳಪ್ಪ ಹೊಸಮನಿ, ರಾಜೇಂದ್ರ ಹರಕುಣಿ, ಸುಧೀರ ದರೇಕರ್, ಬಾಳಣ್ಣ ಕಗ್ಗಣಗಿ, ಜಿಲ್ಲಾ ಕೈಗಾರಿಕೆ ಕೇಂದ್ರದ ದೊಡ್ಡ ಬಸವರಾಜು ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ