ಸುರೇಶ್ ಅಂಗಡಿ ಮನೆಯೇ ಜಗದೀಶ್ ಶೆಟ್ಟರ್ ಅಡ್ರೆಸ್ – ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸುರೇಶ ಅಂಗಡಿ ಅವರ ಮನೆಯೇ ಜಗದೀಶ್ ಶೆಟ್ಟರ್ ಅವರ ಅಡ್ರೆಸ್ ಎಂದು ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಬೆಳಗಾವಿ ಅಡ್ರೆಸ್ ಎಲ್ಲಿದೆ ಎನ್ನುವ ಪ್ರಶ್ನೆಯನ್ನು ವಿರೋಧ ಪಕ್ಷದವರು ಕೇಳುತ್ತಿದ್ದಾರೆ ಎಂದು ಕೇಳಿದಾಗ, ಸುರೇಶ ಅಂಗಡಿ ಅವರ ಮನೆಯೇ ಜಗದೀಶ್ ಶೆಟ್ಟರ್ ಅಡ್ರೆಸ್ ಎಂದರು.
ಜಗದೀಶ ಶೆಟ್ಟರ್ ಅವರನ್ನು ಅಂಡರ್ ಎಸ್ಟಿಮೇಟ್ ಮಾಡಬಾರದು. ಅವರು ಗೆದ್ದು ಮಂತ್ರಿಯಾದರೆ ಎಲ್ಲರೂ ಅವರ ಮನೆ ಅಡ್ರೆಸ್ ಹುಡುಕಿಕೊಂಡು ಹೋಗುತ್ತಾರೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಚಿಕ್ಕೋಡಿಗೆ ಪ್ರಚಾರಕ್ಕೆ ಹೋಗುತ್ತೀರಾ?
ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗುತ್ತೀರಾ ಎನ್ನುವ ಪ್ರಶ್ನೆಗೆ, ನಮ್ಮದು ಬೆಳಗಾವಿ ಲೋಕಸಭಾ ಕ್ಷೇತ್ರ. ಇಲ್ಲೇ ಪ್ರಚಾರ ಮಾಡುತ್ತೇವೆ ಎನ್ನುತ್ತ ಕೈ ಮುಗಿದರು. ನಾನು, ರಮೇಶ್ ಜಾರಕಿಹೊಳಿ ಬೆಳಗಾವಿ ಕ್ಷೇತ್ರದಲ್ಲೇ ಹೆಚ್ಚು ಕೆಲಸ ಮಾಡುತ್ತೇವೆ, ಪಕ್ಷ ಹೇಳಿದರೆ ರಮೇಸ್ ಚಿಕ್ಕೋಡಿಗೆ ಹೋಗಬಹುದು ಎಂದರು.
ಜಗದೀಶ್ ಶೆಟ್ಟರ್ ನಿನ್ನೆ ಗೋಕಾಕ ಮತ್ತು ಅರಬಾವಿ ಕ್ಷೇತ್ರದಲ್ಲಿ ಅಡ್ಡಾಡಿದ್ದಾರೆ. ಏಪ್ರಿಲ್ 7ರಂದು ಗೋಕಾಕ ಮತ್ತು ಅರಬಾವಿಯಲ್ಲಿ ದೊಡ್ಡ ಕಾರ್ಯಕ್ರಮ ಮಾಡಲಿದ್ದೇವೆ. ಶೆಟ್ಟರ್ ಅವರು ಸವದತ್ತಿ, ಬೈಲಹೊಂಗಲ, ರಾಮದುರ್ಗದಲ್ಲೂ ಪ್ರಚಾರ ಮಾಡಲಿದ್ದಾರೆ. ಎಲ್ಲರೂ ಭಿನ್ನಾಭಿಪ್ರಾಯ ಮರೆತು ಸರಿಯಾಗಿ ಕೆಲಸ ಮಾಡಿದರೆ ಬಿಜೆಪಿಗೆ ಹೆಚ್ಚಿನ ಅವಕಾಶವಿದೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಗೋಕಾಕ, ಅರಬಾವಿಯಲ್ಲಿ ಕಾಂಗ್ರೆಸ್ ಗೆ ಲೀಡ್ ಆಗಲಿದೆ ಎನ್ನುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಹೇಳಿಕೆ ಕುರಿತು ಪ್ರಶ್ನಿಸಿದಾಗ, ಅವರೂ ಗೆಲ್ಲಲು ಪ್ರಯತ್ನಿಸುತ್ತಾರೆ, ನಾವೂ ಪ್ರಯತ್ನಿಸುತ್ತೇವೆ. ಕಾಂಗ್ರೆಸ್ ದೇಶದಲ್ಲಿ 45ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ನಮ್ಮ ಕ್ಷೇತ್ರದಿಂದ ಆಯ್ಕೆಯಾದವರು ಆಡಳಿತ ಪಕ್ಷದಲ್ಲಿ ಕುಳಿತರೆ ಒಳ್ಳೆಯದಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ ಎಂದು ಬಾಲಚಂದ್ರ ಹೇಳಿದರು.
ನಾಗನೂರು ಬಸಗೌಡ ಪಾಟೀಲ ಅವರ ಮನೆಗೆ ಹೋಗಿ ಕಾಂಗ್ರೆಸ್ ನಾಯಕರು ಮಾತನಾಡಿರುವ ಕುರಿತು ಪ್ರಶ್ನಿಸಿದಾಗ, ಅವರು ಬಹಳ ಹಿರಿಯರು. ಅವರು ವಯಸ್ಸಾಗಿರುವುದರಿಂದ ಹೆಚ್ಚಾಗಿ ಮನೆಯಲ್ಲೇ ಇರುತ್ತಾರೆ. ಅವರ ಮನೆಗೆ ಎಲ್ಲ ಪಕ್ಷದವರೂ ಹೋಗುವುದು ಸಹಜ. ಅದರಲ್ಲೇನೂ ವಿಶೇಷವಿಲ್ಲ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಜಾತಿ ಸ್ವಲ್ಪ ನಡೆಯುತ್ತದೆ. ಆದರೆ ಲೋಕಸಭಾ ಚುನಾವಣೆ ದೇಶದ ಚುನಾವಣೆ, ನರೇಂದ್ರ ಮೋದಿ ಚುನಾವಣೆ. ಇಲ್ಲಿ ಜಾತಿ ಹೆಚ್ಚು ವರ್ಕೌಟ್ ಆಗುವುದಿಲ್ಲ ಎಂದರು.
ಸತೀಶ್ ಜಾರಕಿಹೊಳಿ ಅವರಿಗೆ ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಗೆಲ್ಲಿಸುವುದು ಎಷ್ಟು ಮುಖ್ಯವೋ ಬೆಳಗಾವಿಯಲ್ಲಿ ಮೃಣಾಲ ಹೆಬ್ಬಾಳಕರ್ ಗೆಲ್ಲಿಸುವುದೂ ಅಷ್ಟೇ ಮುಖ್ಯ. ಅವರಿಗೆ ಗೋಕಾಕದಲ್ಲೂ ಸಾಕಷ್ಟು ಪ್ರಭಾವವಿದೆ, ಹಾಗಾಗಿ ಗೋಕಾಕದಲ್ಲಿ ಕಾಂಗ್ರೆಸ್ ಗೆ ಲೀಡ್ ಆಗಬಹುದೇ ಎನ್ನುವ ಪ್ರಶ್ನೆಗೆ, ಅವರೂ ಗೆಲ್ಲಲು ಪ್ರಯತ್ನಿಸುತ್ತಾರೆ. ನಮ್ಮ ಅಭ್ಯರ್ಥಿ ಗೆಲ್ಲಿಸಲು ನಾವು ಪ್ರಯತ್ನಿಸುತ್ತೇವೆ ಎಂದರು.
ಕೈಗೆ ಸಿಗಬೇಡಿ ಎಂದಿದ್ದೇನೆ!
ಮಾಧ್ಯಮದವರ ಕೈಗೆ ಸಿಗಬೇಡಿ ಎಂದು ರಮೇಶ ಜಾರಕಿಹೊಳಿಗೆ ಹೇಳಿದ್ದೇನೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಅವರು ಮಾತನಾಡಿದರೆ ಟಿಆರ್ ಪಿ ಜಾಸ್ತಿ ಆಗುತ್ತದೆ, ಯಾರು ಗೆಲ್ಲುತ್ತಾರೆ ಎನ್ನುವುದೇ ತಿಳಿಯುವುದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ