Latest

ಹಠಾತ್ ರೈಲ್ವೆ ನಿಲ್ದಾಣ ಪರಿಶೀಲಿಸಿದ ಸಚಿವ ಸುರೇಶ ಅಂಗಡಿ

ಪ್ರಗತಿವಾಹಿನಿ ಸುದ್ದಿ, ನವದೆಹಲಿ:
ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ  ನಡೆಸಿದರು.

ಸಚಿವರು ಪ್ಲಾಟ್‌ಫಾರ್ಮ್ ಸಂಖ್ಯೆ ಒಂದರಲ್ಲಿ ನಿಜಾಮುದ್ದೀನ್‌ನಿಂದ ಜಬಲ್‌ಪುರಕ್ಕೆ ಹೊರಡಲು ಸಿದ್ಧವಾಗಿ ನಿಂತಿದ್ದ ರೈಲಿನ ಸ್ಲೀಪರ್ ಹಾಗೂ ಸಾಮಾನ್ಯ ದರ್ಜೆಯ ಬೋಗಿಗಳ ಪರಿಶೀಲನೆ ನಡೆಸಿದರು ಮತ್ತು ಬೋಗಿಗಳ ಸ್ವಚ್ಛತೆ, ಸಮಯಪಾಲನೆ ಮತ್ತಿತರ ಅಂಶಗಳ ಕುರಿತು ಪ್ರಯಾಣಿಕರೊಂದಿಗೆ ಚರ್ಚೆ ನಡೆಸಿದರು.

ಪ್ರಯಾಣಿಕರಿಗೆ ಬೋಗಿಗಳ ಸ್ವಚ್ಛತೆಯನ್ನು ಕಾಪಾಡಲು ಸಹಕರಿಸುವಂತೆ ಅಂಗಡಿ ಮನವಿ ಮಾಡಿದರು ಹಾಗೂ ಪ್ರಯಾಣಿಕರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿಯನ್ನು ಉಂಟುಮಾಡಬೇಕೆಂದು ಈ ಸಂದರ್ಭದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಪ್ಲಾಟ್‌ಫಾರ್ಮ್‌ಗಳಲ್ಲಿನ ಕುಡಿಯುವ ನೀರಿನ ಸೌಲಭ್ಯವನ್ನು ಪರಿಶೀಲಿಸಿದ ಅವರು, ನಲ್ಲಿಗಳು ಮತ್ತು ಇತರ ನೀರಿನ ವ್ಯವಸ್ಥೆಗಳ ಸುತ್ತಮುತ್ತ ಸ್ವಚ್ಛತೆಗೆ ಮತ್ತಷ್ಟು ಗಮನಹರಿಸುವಂತೆ ಸೂಚಿಸಿದರು.
ಸಚಿವರು ಪ್ರಯಾಣಿಕರು ಮತ್ತು ರೈಲ್ವೆ ಆವರಣದ ಭದ್ರತಾ ವ್ಯವಸ್ಥೆಯನ್ನು ಸಹಾ ಪರಿಶೀಲಿಸಿದ ಅವರು, ರೈಲ್ವೆ ರಕ್ಷಣಾ ದಳದ ಭದ್ರತಾ ಕೊಠಡಿ ಮತ್ತು ಸಿಸಿಟಿವಿ ಕೊಠಡಿಗಳಿಗೆ ಭೇಟಿ ನೀಡಿದರು.

ಅನಧಿಕೃತ ವ್ಯಕ್ತಿಗಳು ಪ್ರವೇಶಿಸದಂತೆ ತಡೆಯುವುದು, ವಾರಸುದಾರರಿಲ್ಲದ ವಸ್ತುಗಳ ಮೇಲೆ ನಿಗಾವಹಿಸುವುದು ಮತ್ತಿತರ ಭದ್ರತಾ ವಿಷಯಗಳಿಗೆ ಸಂಬಂಧಿಸಿದಂತೆ ನಿಲ್ದಾಣದಲ್ಲಿ ಮಾಡಲಾಗಿರುವ ಭದ್ರತಾ ವ್ಯವಸ್ಥೆ ಮತ್ತು ಕಾರ್ಯತಂತ್ರಗಳ ಬಗ್ಗೆ ಆರ್.ಪಿ.ಎಫ್. ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು.

ಹೆಚ್ಚಿನ ಸಾಮರ್ಥ್ಯವಿರುವ ಮತ್ತಷ್ಟು ಸಿ.ಸಿ.ಟಿ.ವಿ.ಗಳನ್ನು ಅಳವಡಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸಲಹೆಯನ್ನು ನೀಡಿದರು.
ಪ್ರಯಾಣಿಕ ಸ್ನೇಹಿ, ಸ್ವಚ್ಛತೆ ಮತ್ತು ಆರೋಗ್ಯದ ದೃಷ್ಟಿಯಿಂದ ನಿರೀಕ್ಷಣಾ ಕೊಠಡಿಗಳು, ರೈಲ್ವೆ ಹಳಿಗಳು, ಸೂಚನಾಫಲಕಗಳು, ಎಸ್ಕಲೇಟರ್‌ಗಳ ಪರಿಶೀಲನೆ ನಡೆಸಿದರು ಮತ್ತು ಯಾವಾಗಲೂ ಅವು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮುಂದೆಯೂ ಸಹಾ ವಿವಿಧ ರೈಲು ನಿಲ್ದಾಣಗಳಲ್ಲಿ ಈ ರೀತಿಯ ಅನಿರೀಕ್ಷಿತ ತಪಾಸಣೆಗಳನ್ನು ನಡೆಸಲಾಗುವುದು ಎಂದು ತಿಳಿಸಿದ ಅವರು ಭಾರತದ ರೈಲು ನಿಲ್ದಾಣಗಳನ್ನು ಅಂತರರಾಷ್ಟ್ರೀಯ ದರ್ಜೆಯ ನಿಲ್ದಾಣಗಳಿಗೆ ಸರಿಸಮಾನವಾಗುವಂತೆ ಮಾಡಲು ಅಧಿಕಾರಿಗಳು ಸಿದ್ಧರಾಗಬೇಕೆಂದು ಕರೆ ನೀಡಿದರು.

ಈಶಾನ್ಯ ದೆಹಲಿಯ  ಸಂಸದ  ಮನೋಜ ತಿವಾರಿಯವರೂ ಜೊತೆಯಲ್ಲಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button