ಪ್ರಗತಿವಾಹಿನಿ ಸುದ್ದಿ; ಚಾಮರಾಜನಗರ: ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಮಂಡಿಸಿರುವ ಅವಶ್ವಾಸ ಬಿದ್ದು ಹೋಗಿದ್ದು, ಜನರಿಗೆ ಸರ್ಕಾರದ ಮೇಲಿನ ವಿಶ್ವಾಸ ಹೆಚ್ಚಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಸರ್ಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯ ಮಂಡನೆಯಿಂದ ಸರ್ಕಾರದ ಮೇಲಿನ ವಿಶ್ವಾಸ ಹೆಚ್ಚಾಗಿದೆ. ಯಡಿಯೂರಪ್ಪನವರೆ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಹೇಳಿದರು.
ನಾಳಿನ ಕರ್ನಾಟಕ ಬಂದ್ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪ್ರತಿಭಟನೆ, ಹೋರಾಟ ಎಲ್ಲರ ಹಕ್ಕು ಆದರೆ ಪ್ರತಿಭಟನೆ, ಬಂದ್ ಗಳಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ, ಆಸ್ತಿ-ಪಾಸ್ತಿ ನಷ್ಟವಾಗದಂತೆ ಪ್ರತಿಭಟಿಸಲಿ ಎಂದರು.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ಅಂಶಗಳನ್ನು ಸ್ವತ: ಕಾಂಗ್ರೆಸ್ ನಾಯಕರಾದ ಆರ್.ವಿ ದೇಶಪಾಂಡೆ ಒಪ್ಪಿಕೊಂಡಿದ್ದಾರೆ. ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಆಶಯವೂ ಅದೇ ಆಗಿತ್ತು. ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಈಗಾಗಲೇ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ. 2022ರ ಒಳಗೆ ರೈತರ ಪ್ರಗತಿ ಹಾಗೂ ಅವರ ಆದಾಯ ದ್ವಿಗುಣಗೊಳಿಸುವುದು ಮಸೂದೆ ತಿದ್ದುಪಡಿಯ ಉದ್ದೇಶ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ