
ಪ್ರಗತಿವಾಹಿನಿ ಸುದ್ದಿ: ಭೂಮಾಪನ ಇಲಾಖೆಯು ಕೈಗೊಳ್ಳುತ್ತಿರುವ ದೈನಂದಿನ ಸಾಂಪ್ರದಾಯಿಕ ಸರ್ವೆ ಕಾರ್ಯಗಳನ್ನು ಸಂಪೂರ್ಣವಾಗಿ ಆಧುನಿಕ ತಂತ್ರಜ್ಞಾನ ಬಳಸಿ ಡಿಜಿಟಲೀಕರಿಸಿ ಸಾರ್ವಜನಿಕರಿಗೆ ತ್ವರಿತ ಹಾಗೂ ಪಾರದರ್ಶಕ ಸೇವೆಯನ್ನು ಒದಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ʻನಕ್ಷಾʼ ಯೋಜನೆಯಡಿಯಲ್ಲಿ ಪ್ರಾರಂಭಿಕವಾಗಿ ರಾಜ್ಯದ 10 ನಗರಸಭೆ / ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳನ್ನು ಡ್ರೋನ್ (Drone) ಬಳಸಿ ಸರ್ವೆ ಮಾಡುವ ಮೂಲಕ ಡಿಜಿಟಲೀಕರಿಸಲಾಗುವುದು.
ಸಾಮಾಜಿಕ ಭದ್ರತಾ ಪಿಂಚಣಿ ಮಂಜೂರಾತಿ ಸೇವೆಯನ್ನು ನೀಡಲು ಸಕಾಲ ಕಾಯ್ದೆಯಡಿ ಪ್ರಸ್ತುತ ಇರುವ ಕಾಲಮಿತಿಯನ್ನು 45 ದಿನಗಳಿಂದ 21 ದಿನಗಳಿಗೆ ಇಳಿಸಲಾಗುವುದು.
ಕರ್ನಾಟಕ ಜಲ ಭದ್ರತೆ ಮತ್ತು ವಿಪತ್ತು ತಡೆಯುವಿಕೆ ಕಾರ್ಯಕ್ರಮದಡಿ, 3,500 ಕೋಟಿ ರೂ. ವಿಶ್ವಬ್ಯಾಂಕ್ ಸಾಲ ಹಾಗೂ ರಾಜ್ಯ ಸರ್ಕಾರದ 1,500 ಕೋಟಿ ರೂ. ಸೇರಿ ಒಟ್ಟು 5,000 ಕೋಟಿ ರೂ. ವೆಚ್ಚದಲ್ಲಿ 2025-2031ರ ಅವಧಿಯಲ್ಲಿ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗುವುದು:
i) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 2,000 ಕೋಟಿ ರೂ. ವೆಚ್ಚದಲ್ಲಿ ಪ್ರವಾಹ ನಿರ್ವಹಣಾ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು.
ii) ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ 1,070 ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಹಾಗೂ ಒಳಚರಂಡಿ ಪಂಪಿಂಗ್ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು.
iii) ವಿಪತ್ತು ನಿರ್ವಹಣೆಯ ಸಾಂಸ್ಥಿಕ ಸುಧಾರಣೆ ಕ್ರಮಗಳಿಗೆ 1,680 ಕೋಟಿ ರೂ. ಒದಗಿಸಲಾಗುವುದು. ಇದರಡಿಯಲ್ಲಿ ಶಾಸನ ರಚನೆ, ಅಂತಾರಾಷ್ಟ್ರೀಯ ಉತ್ಕಷ್ಟೃತಾ ಕೇಂದ್ರ, ವಿಪತ್ತು ಅನುಭವ ಕಲಿಕಾ ಕೇಂದ್ರ ಸ್ಥಾಪನೆ, ವಿಪತ್ತು ಮುನ್ನೆಚ್ಚರಿಕೆ ನೀಡಲು Karnataka Multi Risk Hazard Information System, 1950 ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳ ಸ್ಥಾಪನೆ ಹಾಗೂ ಭೂ ಕುಸಿತ ಉಪಶಮನ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು.
iv) ವಿಪತ್ತು ಉಪಶಮನ ಕಾರ್ಯಕ್ರಮದಡಿ ಸಣ್ಣ ನೀರಾವರಿ ಇಲಾಖೆಯು 250 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 41 ಕೆರೆ ತುಂಬಿಸುವ ಕಾಮಗಾರಿಯನ್ನು ಅನುಷ್ಠಾನಗೊಳಿಸಲಿದೆ.
ರಾಜ್ಯ ವಿಪತ್ತು ಉಪಶಮನ ನಿಧಿ ಹಾಗೂ ರಾಷ್ಟ್ರೀಯ ವಿಪತ್ತು ಉಪಶಮನ ನಿಧಿ ಅನುದಾನದಡಿ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗುವುದು;
i) ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಭೂ ಕುಸಿತ ತಡೆಯುವುದು.
ii) ಬೆಂಗಳೂರು ನಗರದಲ್ಲಿ 239 ಕೋಟಿ ರೂ. ವೆಚ್ಚದಲ್ಲಿ ಮಳೆ ನೀರು ಚರಂಡಿಗಳ ಪುನರ್ ನಿರ್ಮಾಣ ಮತ್ತು ಕೆರೆಗಳ ಪುನಃಶ್ಚೇತನಗೊಳಿಸುವುದು
.
iii) ಬರ ಉಪಶಮನಕ್ಕಾಗಿ 100 ಕೋಟಿ ರೂ. ವೆಚ್ಚದಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸುವುದು.
iv) ಕರಾವಳಿ ಜಿಲ್ಲೆಗಳಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಸಮುದ್ರ ಕೊರೆತ ತಗ್ಗಿಸುವುದು.
v) ನವಲಗುಂದ ತಾಲ್ಲೂಕಿನ ಬೆಣ್ಣೆಹಳ್ಳದಲ್ಲಿ ಪ್ರವಾಹ ನಿಯಂತ್ರಿಸಲು ಉಪಶಮನ ಕ್ರಮಗಳನ್ನು 200 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ ನೀಡಿರುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವುದು.
vi) ರೋಣ ತಾಲ್ಲೂಕಿನ ಕೋಟುಮಚಗಿ ಗ್ರಾಮದಿಂದ ಕೊಪ್ಪಳ ಜಿಲ್ಲೆಯ ವೀರಾಪುರ ಗ್ರಾಮದವರೆಗೆ ಹಿರೇಹಳ್ಳದಲ್ಲಿ ಹೂಳೆತ್ತುವ ಮೂಲಕ 60 ಕೋಟಿ ರೂ. ವೆಚ್ಚದಲ್ಲಿ
ಪ್ರವಾಹ ನಿಯಂತ್ರಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು.
ಕಾವೇರಿ-2.೦ ತಂತ್ರಾಂಶದ ಮೂಲಕ ಸರ್ಕಾರದ ಇ-ಸ್ಟ್ಯಾಂಪಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಇದರಿಂದ ನಾಗರಿಕರಿಗೆ ಸುಲಭ ಮತ್ತು ಸರಳವಾದ ರೀತಿಯಲ್ಲಿ ದಸ್ತಾವೇಜುಗಳನ್ನು ತಯಾರಿಸಲು ಹಾಗೂ ಮುದ್ರಾಂಕ ಶುಲ್ಕವು ನೇರವಾಗಿ ಯಾವುದೇ ಮಧ್ಯವರ್ತಿಗಳಿಲ್ಲದೆ ಸರ್ಕಾರಕ್ಕೆ ಜಮೆ ಮಾಡಲು ನೆರವಾಗಲಿದೆ.
ನೋಂದಣಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಕಾವೇರಿ-2.೦ ತಂತ್ರಾಂಶವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಡಿಯಲ್ಲಿಯೇ ನಿರ್ವಹಿಸಲು ಕ್ರಮವಹಿಸಲಾಗುವುದು.
ರಾಜ್ಯದ ಒಟ್ಟಾರೆ ನೋಂದಣಿಯಲ್ಲಿ ಶೇ.75 ರಷ್ಟು ನೋಂದಣಿಗಳು ನಡೆಯುವ ಬೆಂಗಳೂರಿನ 36 ನೋಂದಣಿ ಕಛೇರಿಗಳನ್ನು ಆಧುನೀಕರಣಗೊಳಿಸಿ, ಮೂಲಭೂತ ಸೌಲಭ್ಯ ಹಾಗೂ ಉತ್ಕೃಷ್ಟ ಸೇವೆಯನ್ನು 76 ಕೋಟಿ ರೂ. ವೆಚ್ಚದಲ್ಲಿ ಕಲ್ಪಿಸಲಾಗುವುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ