
ಪ್ರವಾಹ ಪೀಡಿತ ಕಬ್ಬಿನ ನಿರ್ವಹಣೆ ಹೇಗೆ?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-
ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿಯು ಕರ್ನಾಟಕದ ಸಕ್ಕರೆ ಕಾರ್ಖಾನೆಗಳ ಕಬ್ಬು ವಿಭಾಗದ ಅಧಿಕಾರಿ/ಸಿಬ್ಬಂದಿಗೆ ಪ್ರವಾಹ ಪೀಡಿತ ಕಬ್ಬಿನ ಬೆಳೆ ನಿರ್ವಹಣೆ ಕುರಿತು ವಿಚಾರ ಸಂಕಿರಣವನ್ನು ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಿತ್ತು.
ಸಂಸ್ಥೆಯ ನಿರ್ದೇಶಕ ಡಾ. ಆರ್. ಬಿ. ಖಾಂಡಗಾವೆ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ, ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಕೃಷಿ ವಿಭಾಗದ ಮುಖ್ಯಸ್ಥ ಎನ್. ಆರ್. ಯಕ್ಕೇಲಿ ಹಾಗೂ ವಿವಿಧ ಸಕ್ಕರೆ ಕಾರ್ಖಾನೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಫೋಟೋ ಕೃಪೆ -ಸಂಗಮೇಶ ಬಡಿಗೇರ
ಖಾಂಡಗಾವೆ ಮಾತನಾಡುತ್ತ, ರಾಜ್ಯದಲ್ಲಿ ಕಬ್ಬು ಬೆಳೆಯುವ ನೆರೆ ಹಾವಳಿಯ ಪ್ರದೇಶವು ಅತೀ ಹೆಚ್ಚಾಗಿರುವುದರಿಂದ ಕಬ್ಬಿನ ಬೆಳವಣಿಗೆ ಮತ್ತು ಬದುಕುವಿಕೆಯ ಮೇಲೆ ಹೆಚ್ಚಿನ ಪರಿಣಾಮ ಬೀರಿ ಕಬ್ಬಿನ ಇಳುವರಿಯಲ್ಲಿ ಶೇ.೧೫-೪೫ ರವರೆಗೆ ಕಡಿಮೆಯಾಗುವ ಸಾಧ್ಯತೆ ಇದೆ. ಕಬ್ಬಿನ ಇಳುವರಿ ಪ್ರಮಾಣವು ಕಬ್ಬು ಬೆಳೆಯುವ ತಳಿ, ವಾತಾವರಣದ ಸ್ಥಿತಿ, ಬೆಳೆಯ ವಯಸ್ಸು/ಹಂತ, ನೀರು ತಂಗುವ ಅವಧಿ ಇತ್ಯಾದಿಗಳ ಮೇಲೆ ಅವಲಂಭಿತವಾಗಿದೆ.
ನೆರೆ ಹಾವಳಿಯು ಕಡಿಮೆಯಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಕಾರ್ಖಾನೆಯ ಸಿಬ್ಬಂದಿಯು ರೈತರಿಗೆ ಕಬ್ಬಿನ ಕ್ಷೇತ್ರಗಳಲ್ಲಿ ಹೆಚ್ಚಿನ ನೀರು ಹೊರಹಾಕಲು ಬಸಿಗಾಲುವೆ ಮಾಡುವುದು, ಕೀಟ ಮತ್ತು ರೋಗ ನಿಯಂತ್ರಣ ಕೈಗೊಳ್ಳಲು ತಂತ್ರಜ್ಞಾನ ಪಸರಿಸುವುದು ಅತೀ ಅವಶ್ಯವಿದ್ದು, ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ರೈತರಿಗೆ ನೇರವಾಗಲು ಕಾರ್ಯಪ್ರವರ್ತರಾಗಬೇಕೆಂದು ಹೇಳಿದರು.
ಇಳುವರಿ ಕುಂಠಿತ
ಎನ್. ಆರ್. ಯಕ್ಕೇಲಿ ಉಪನ್ಯಾಸ ನೀಡುತ್ತಾ, ನೆರೆ ಹಾವಳಿಯ ಒಂದು ಅಧ್ಯಯನದ ಪ್ರಕಾರ ಕಬ್ಬಿನ ರಚನಾತ್ಮಕ ಬೆಳೆಯುವ ಹಂತದಲ್ಲಿ ನೆರೆ ಹಾವಳಿ ಉಂಟಾದಾಗ ಕಬ್ಬಿನ ಎತ್ತರ ಶೇ.೧೩ ರಷ್ಟು, ಮರಿ ಉತ್ಪಾದನೆಯಲ್ಲಿ ಶೇ.೨೨ ರಷ್ಟು, ಎಲೆಯ ವಿಸ್ತೀರ್ಣದಲ್ಲಿ ಶೇ.೨೭ ಮತ್ತು ಜೈವಿಕ ದ್ರವ್ಯರಾಶಿಯಲ್ಲಿ ಶೇ.೪೩ ರಷ್ಟು ಕಡಿಮೆಯಾಗುವುದು ಕಂಡು ಬಂದಿದೆ.
ಇನ್ನೊಂದು ಅಧ್ಯಯನದ ಪ್ರಕಾರ ಐದು ದಿನಗಳ ನಂತರ ನೀರಿನಲ್ಲಿ ನಿಂತ ಕಬ್ಬಿನ ಇಳುವರಿ ಶೇ.೧೫-೨೦, ೧೦ ದಿನಗಳ ನಂತರ ಶೇ.೩೦-೬೦ ಹಾಗೂ ೧೫ ದಿನಗಳ ನಂತರ ಶೇ.೩೭-೧೦೦ ರವರೆಗೆ ಕಬ್ಬಿನ ಇಳುವರಿಯು ಕಡಿಮೆಯಾಗುವುದು ಕಂಡು ಬಂದಿದೆ.
ಹೆಚ್ಚಿನ ಅವಧಿಗೆ ನೀರಿನಲ್ಲಿ ಸಾಮಾನ್ಯವಾಗಿ ಕಬ್ಬಿನ ತುದಿಯಲ್ಲಿ ನಾಲ್ಕು ದಿನಗಳಿಗಿಂತ ಹೆಚ್ಚಿನ ಅವಧಿಗೆ ಮುಳುಗಿದಾಗ ಬೆಳವಣಿಗೆಯ ತುದಿಯು ನಾಶವಾಗುವುದು. ಒಂದು ವೇಳೆ ಬೆಳವಣಿಗೆಯ ತುದಿಯು ಕಂದು ಬಣ್ಣಕ್ಕೆ ತಿರುಗದೆ ಹಾಗೆಯೆ ಉಳಿದರೆ ಪುನಃ ಕಬ್ಬು ಬೆಳೆಯುವ ಸಾಧ್ಯತೆ ಇರುತ್ತದೆ ಹಾಗೂ ಬೆಳವಣಿಗೆಯ ತುದಿ ನಾಶವಾದಾಗ ಕಬ್ಬಿನ ಬೆಳವಣಿಗೆಯು ಮಗ್ಗಲಿನ ಕಣ್ಣುಗಳು ಮೊಳಕೆಯೊಡೆಯುವ ರೂಪ ಪಡೆಯುತ್ತದೆ.
ಗುಣಮಟ್ಟ, ತೂಕ ಕಡಿಮೆ
೧. ನೀರು ನಿಂತ ಜಮೀನಿನಲ್ಲಿ ಮಣ್ಣಿನ ಆಮ್ಲಜನಕದ ಪ್ರಮಾಣವು ಕಡಿಮೆಯಾಗಿ, ಬೇರಿನ ಉಸಿರಾಟ ಹೆಚ್ಚಾಗಿ ಇಂಗಾಲದ ಡೈಆಕ್ಸೈಡ್, ಮಿಥೇನ್ ಮತ್ತು ಸಾರಜನಕ ಅನಿಲಗಳ ಪ್ರಮಾಣ ಹೆಚ್ಚಾಗುವುದರಿಂದ ಬೇರಿನ ಕ್ಷಮತೆ ಕಡಿಮೆಯಾಗುವುದಲ್ಲದೆ, ಬೇರಿನ ವ್ಯೂಹದಲ್ಲಿ ಜೈವಿಕ ಕ್ರಿಯೆಯು ಗಣನೀಯವಾಗಿ ಕಡಿಮೆಯಾಗುವುದು.
೨. ಪ್ರವಾಹದಿಂದಾಗಿ ಸಂಪೂರ್ಣವಾಗಿ ಮುಳುಗಿದ ಕಬ್ಬಿನ ಬೆಳೆಯಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆಯು ಸ್ಥಗಿತಗೊಳ್ಳುತ್ತದೆ. ಕಾರಣ ಕಬ್ಬಿನ ಎಲೆಗಳು ಕ್ರಮೇಣವಾಗಿ ನಿಶ್ಯಕ್ರಿಯವಾಗುವವು. ಇದರಿಂದ ಕಬ್ಬಿನ ಕಾಂಡಿನ ಕಣ್ಣುಗಳು ಮೊಳಕೆಯೊಡೆದು ಕಬ್ಬಿನ ಗುಣಮಟ್ಟ ಮತ್ತು ತೂಕವನ್ನು ಕಡಿಮೆಗೊಳಿಸುತ್ತದೆ.
೩. ಪ್ರವಾಹದಲ್ಲಿ ಭಾಗಶಃ ಮುಳಗಿದ ಕಬ್ಬಿನ ಬೆಳೆಯಲ್ಲಿ ಕೆಳ ಹಂತದ ಕಬ್ಬಿನ ಗಣಿಕೆಯ ತೊಗಟೆಯ ಭಾಗದಲ್ಲಿ ಬಿಳಿ ಬೇರುಗಳು ಚಿಗುರುವವು. ಇಂತಹ ಬೆಳೆಯಲ್ಲಿ ಸೈನಿಕ ಹುಳುವಿನ ಬಾಧೆಯು ಹೆಚ್ಚಾಗಿ ಕಂಡುಬರುವ ಸಾಧ್ಯತೆ ಇದೆ.
೪. ಕಬ್ಬು ಸುಮಾರು ೪-೬ ತಿಂಗಳ ವಯಸ್ಸಿನವರೆಗೆ ಇದ್ದಾಗ ಕಬ್ಬು ಪ್ರವಾಹಕ್ಕೆ ಒಳಗಾಗಿ ಸಂಪೂರ್ಣ ಮುಳುಗಿದರೆ ಅಂತಹ ಕಬ್ಬು ಶೇ.೧೦೦ ರಷ್ಟು ಹಾನಿಯಾಗುವ ಸಾಧ್ಯತೆ ಇದೆ. ಕಬ್ಬಿನ ವಯಸ್ಸು ೭ ತಿಂಗಳುಗಿಂತ ಹೆಚ್ಚಿನ ವಯಸ್ಸು ಹೊಂದಿ ಉತ್ತಮ ಬೆಳವಣಿಗೆಯಾದಲ್ಲಿ ಕಬ್ಬಿನ ಬೆಳೆಯು ಪ್ರವಾಹಕ್ಕೆ ಸಂಪೂರ್ಣವಾಗಿ ಮುಳುಗಿದರೆ ಅಂತಹ ಕಬ್ಬಿನ ಇಳುವರಿ ಹಾನಿಯಾಗುವ ಪ್ರಮಾಣ ಕಡಿಮೆ ಇರುತ್ತದೆ. ಈ ಕಬ್ಬಿನಲ್ಲಿ ನೀರು ನಿಲ್ಲುವಿಕೆ ಕಡಿಮೆ ಅವಧಿ ಇದ್ದಾಗ ಕೂಡಾ ಹಾನಿಯಾಗುವ ಪ್ರಮಾಣ ಕಡಿಮೆ.
ಪರಿಹಾರಗಳು:

ಫೋಟೋ ಕೃಪೆ -ಸಂಗಮೇಶ ಬಡಿಗೇರ
೧. ಪ್ರವಾಹ ಮಟ್ಟ ಕಡಿಮೆಯಾದ ನಂತರ ಜಮೀನುಗಳಲ್ಲಿ ಬಸಿಗಾಲುವೆಗಳನ್ನು ನಿರ್ಮಿಸಿ ಹೊಲದಿಂದ ಆದಷ್ಟುಬೇಗ ನೀರು ಬಸಿದು ಹೋಗುವ ವ್ಯವಸ್ಥೆ ಕಲ್ಪಿಸಬೇಕು.
೨. ಕಬ್ಬಿನ ಹಾನಿಯನ್ನು ಪರಿಶೀಲಿಸಿ ಹಾನಿಯಾದ ಕಬ್ಬಿನ ವಿಸ್ತರಣೆಯನ್ನು ಗಣನೆಗೆ ತೆಗೆದುಕೊಂಡು ಕಬ್ಬಿನ (ನಾಟಿ/ಕುಳೆ) ಬೆಳೆಯ ನಿರ್ವಹಣೆಗೆ ಬಗ್ಗೆ ತೀರ್ಮಾನಿಸಬೇಕು. ಒಂದು ವೇಳೆ ಸದರಿ ಬೆಳೆಯು ಹೆಚ್ಚಿನ ಹಾನಿ ಎಂದು ಕಂಡು ಬಂದಲ್ಲಿ ಕಬ್ಬನ್ನು ಕಟಾವು ಮಾಡಿ ಪುನಃ ಕುಳೆ ಕಬ್ಬನ್ನಾಗಿ ಬೆಳೆಯಬಹುದಾಗಿದೆ.
೩. ಒಂದು ವೇಳೆ ಕಬ್ಬಿನ ಬೆಳೆಯನ್ನು ಮುಂದುವರೆಸುವ ತೀರ್ಮಾನವಾದಾಗ ಪ್ರವಾಹಕ್ಕೆ ಒಳಗಾದ ಕಬ್ಬಿನ ಬೆಳೆಗೆ ಶೇ. ೨ ರಷ್ಟು ನೀರಿನಲ್ಲಿ ಕರಗುವ ೧೯:೧೯:೧೯ ರಸಾಯನಿಕ ಗೊಬ್ಬರವನ್ನು ಸಿಂಪರಣೆ ಮಾಡುವಾಗ ಅಂಟು ದ್ರಾವಣವನ್ನು ಉಪಯೋಗಿಸಿದರೆ ಹೆಚ್ಚಿನ ಪ್ರಯೋಜನವಾಗುವುದು.
೪. ಪ್ರವಾಹ ಮಟ್ಟ ಕಡಿಮೆ ಆದ ನಂತರ ಕಬ್ಬಿನ ಬೆಳೆಗೆ ಆದಷ್ಟು ರಂಜಕ ಗೊಬ್ಬರವನ್ನು ಒದಗಿಸಬೇಕು. ಇದರಿಂದ ಕಬ್ಬಿನ ಬೆಳೆಯಲ್ಲಿ ಹೊಸ ಬೇರುಗಳ ಬೆಳವಣಿಗೆಗೆ ಸಹಾಯವಾಗುವುದು.
೫. ಕಬ್ಬಿನ ಬೆಳೆಗೆ ಸೈನಿಕ ಹುಳು ಬಾಧೆ ಕಂಡು ಬಂದಲ್ಲಿ ಇತರ ಯಾವುದೆ ಸಂಪರ್ಕ ಗುಣಧರ್ಮ ಹೊಂದಿದ ಕೀಟನಾಶಕಗಳ ದ್ರಾವಣವನ್ನು ಬಳಕೆ ಮಾಡಬೇಕು ಅಥವಾ ಶೇ. ೫ ರಷ್ಟು ಬೇವಿನ ಆಧಾರಿತ ಕೀಟನಾಶಕಗಳನ್ನು ಸಿಂಪರಣೆ ಮಾಡಬೇಕು.
ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಆರ್. ಬಿ. ಸುತಗುಂಡಿ ಅವರು ನೀರು ನಿಲ್ಲುವ ಪ್ರದೇಶಗಳಲ್ಲಿ ಉಪಯೋಗವಾಗುವ ವಿವಿಧ ಕಬ್ಬಿನ ತಳಿಗಳ ಬಗ್ಗೆ ಮತ್ತು ಬೇಸಾಯ ಕ್ರಮಗಳ ಬಗ್ಗೆ ಮಾತನಾಡಿದರು.
ಈ ವಿಚಾರ ಸಂಕಿರಣದಲ್ಲಿ ಕರ್ನಾಟಕದ ಸಕ್ಕರೆ ಕಾರ್ಖಾನೆಗಳ ೬೦ ಕ್ಕೂ ಹೆಚ್ಚು ಕಬ್ಬು ವಿಭಾಗದ ಅಧಿಕಾರಿ/ಸಿಬ್ಬಂದಿ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ