Karnataka NewsLatestPolitics

*ಜನರಿಗೆ ನೆರವಾಗಲು ಪ್ರಜಾಸೇವೆ ಕಾರ್ಯಕ್ರಮದಲ್ಲಿ ಕಾನೂನು ನೆರವು ಕೇಂದ್ರ ಆರಂಭ: ಸಿಎಂ ಡಿ.ಕೆ ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಪ್ರಜಾಸೇವೆ ಇಲಾಖೆಯ ಮೂಲಕ ಜನರ ಸಮಸ್ಯೆ ಆಲಿಸಿ ಪರಿಹಾರ ಒದಗಿಸಲು ಇಡೀ ಸರ್ಕಾರ ನಿಮ್ಮ ಮುಂದಿದೆ. ನ್ಯಾಯಾಲಯಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಉಚಿತ ಸೇವೆ ಒದಗಿಸಲು ಪ್ರಜಾಸೇವೆ ಅಭಿಯಾನದಲ್ಲಿ ಪ್ರತ್ಯೇಕ ಕಾನೂನು ಕೇಂದ್ರ ಆರಂಭಿಸಲಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

ಪಿರಿಯಾಪಟ್ಟಣದಲ್ಲಿ ಶನಿವಾರ ನಡೆದ ಪ್ರಜಾಸೇವೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಿವಕುಮಾರ್ ಅವರು ಮಾತನಾಡಿದರು.

“ಪ್ರಜಾಸೇವೆ ಇಲಾಖೆ ಆರಂಭಿಸಿ ರಾಜ್ಯದ ಹಿರಿಯ ಪ್ರಮಾಣಿಕ ಅಧಿಕಾರಿಗೆ ಜವಾಬ್ದಾರಿ ವಹಿಸಿದ್ದೇವೆ. ಜನರ ಸೇವೆಗಾಗಿ ಜನರ ಸಮಸ್ಯೆಗೆ ಸ್ಪಂದಿಸಲು ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಈ ಹೊಸ ಇಲಾಖೆ ಆರಂಭಿಸಿದ್ದೇನೆ. ನಾನು ಶಾಸಕನಾದ ಬಳಿಕ ಪ್ರತಿ ವರ್ಷ ಪ್ರತಿ ಹಳ್ಳಿಗೆ ತೆರಳಿ ಅನುಭವ ಪಡೆದಿದ್ದೇನೆ. ಜನರ ಸಮಸ್ಯೆಗಳಿಗೆ ಮುಕ್ತಿ ನೀಡಿ, ಅವರ ಆಶಯಗಳಿಗೆ ಧ್ವನಿಯಾಗಿ, ನ್ಯಾಯ ಒದಗಿಸಲು, ಮಂತ್ರಿಗಳು ಹಾಗೂ ಸ್ಥಳೀಯ ಶಾಸಕರು ಸೇರಿದಂತೆ ಸರ್ಕಾರವು ಅಧಿಕಾರಿಗಳ ಸಮೇತ ಜನರ ಮನೆ ಬಾಗಿಲಿಗೆ ಹೋಗಲು ಈ ಇಲಾಖೆ ಆರಂಭಿಸಲಾಗಿದೆ” ಎಂದರು.

620 ಕಡೆ ಪ್ರಜಾಸೇವೆ ಅಭಿಯಾನ

“ಸೆ.05ರಂದು ಈ ಇಲಾಖೆ ಆರಂಭಿಸಲಾಗಿದೆ. ಈಗಾಗಲೇ 620 ಕಡೆ ಪ್ರಜಾಸೇವೆ ಅಭಿಯಾನ ಆಯೋಜಿಸಲಾಗಿದೆ. 1 ಲಕ್ಷಕ್ಕೂ ಹೆಚ್ಚು ಜನ ಅರ್ಜಿ ಸಲ್ಲಿಸಿದ್ದು, ಕಂದಾಯ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚು ಅರ್ಜಿಗಳು ಬರುತ್ತಿವೆ. ಪ್ರತಿ ತಾಲ್ಲೂಕಿನಲ್ಲಿ ನ್ಯಾಯಾಲಯದಲ್ಲಿ ಕಾನೂನು ನೆರವು ನೀಡುವ ವಿಭಾಗವಿದ್ದು, ಅವರನ್ನು ಕರೆಸಿ ಈ ಕಾರ್ಯಕ್ರಮದಲ್ಲಿ ಒಂದು ಕೇಂದ್ರ ಆರಂಭಿಸಲಾಗಿದೆ. ಜನರಿಗೆ ಕಾನೂನಿನಲ್ಲಿ ತೊಡಕು ಇದ್ದರೆ ಉಚಿತವಾಗಿ ಸಹಾಯ ಮಾಡಲಾಗುವುದು. ಪ್ರಜಾಸೇವೆ ಇಲಾಖೆ ನಡೆಯುವಾಗ ಈ ವಿಭಾಗದವರು ಅಧಿಕಾರಿಗಳೊಂದಿಗೆ ಕೂತಿರುತ್ತಾರೆ. ಇಡೀ ದೇಶದಲ್ಲೇ ಬೇರೆ ಯಾವುದೇ ರಾಜ್ಯಗಳು ಮಾಡದ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ” ಎಂದರು.

ಜನರ ನೋವು ಬಗೆಹರಿದರೆ ನಮಗೆ ಆತ್ಮತೃಪ್ತಿ

“ರಸ್ತೆ, ಪೋಡಿ, ಪಿಂಚಣಿ, ಕುಡಿಯುವ ನೀರು, ವಿದ್ಯುತ್ ಸಮಸ್ಯೆ, ಅರಣ್ಯ, ಆರೋಗ್ಯ, ಪೊಲೀಸ್, ಕಾರ್ಮಿಕ, ಕೃಷಿ, ತೋಟಗಾರಿಕೆ ಸೇರಿದಂತೆ ಇಲಾಖೆವಾರು ಅಹವಾಲುಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ಆಲಿಸಿ ಪರಿಹಾರ ಒದಗಿಸಲು ಪ್ರಜಾ ಸೇವಕನಾಗಿ ಇಡೀ ಸರ್ಕಾರ ನಿಮ್ಮ ಮುಂದೆ ಇದೆ. ನೀವು ಚೆನ್ನಾಗಿದ್ದರೆ, ನಾವು ಚೆನ್ನಾಗಿದ್ದಂತೆ. ನಿಮ್ಮ ನೋವುಗಳನ್ನು ಬಗೆಹರಿಸಿದರೆ, ನಮಗೆ ಆತ್ಮತೃಪ್ತಿ ಸಿಗುತ್ತದೆ. ಪ್ರತಿ ತಿಂಗಳು ವಾರಕ್ಕೆ 2 ದಿನ, ಮೊದಲ ಹಾಗೂ ಮೂರನೇ ಶನಿವಾರ ಜಿಲ್ಲಾ ಮಂತ್ರಿಗಳು ಹಾಗೂ ಶಾಸಕರು, ತಾಲ್ಲೂಕು ಮಟ್ಟದಲ್ಲಿ ಈ ಸಭೆ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಮುಗಿದ ಬಳಿಕ ಪಂಚಾಯ್ತಿ ಮಟ್ಟದಲ್ಲಿ ಈ ಕಾರ್ಯಕ್ರಮ ಮಾಡಬೇಕು. ಶಾಸಕರು ಹೋಗಿದ್ದರೆ, ಅಧಿಕಾರಿಗಳೇ ಹೋಗಿ ಜನರ ಸಮಸ್ಯೆ ಆಲಿಸಬೇಕು” ಎಂದರು.

12 ಲಕ್ಷ ಪಿಂಚಣಿದಾರರಿಗೆ ಪ್ರಯೋಜನ

“ಯಾರು ಯಾವ ಅರ್ಜಿ ಕೊಟ್ಟಿದ್ದಾರೆ ಅವರಿಗೆ ನನ್ನ ಪರವಾಗಿ ಉತ್ತರ ಬರುತ್ತದೆ. ಪ್ರತಿ ಇಲಾಖೆ ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ. ಪ್ರತಿ ಇಲಾಖೆಯಲ್ಲಿ ಎಷ್ಟು ಅರ್ಜಿ ವಿಲೇವಾರಿ ಆಗಿದೆ ಎಂದು ನಾನು ಪರಿಶೀಲನೆ ಮಾಡುತ್ತೇನೆ. ಒಂದು ವೇಳೆ ಅರ್ಜಿ ವಿಲೇವಾರಿ ಆಗದೇ ಇದ್ದರೆ, ಯಾಕೆ ಆಗಲಿಲ್ಲ ಎಂದು ವಿವರಣೆ ನೀಡಿ, ಅದಕ್ಕೆ ಪರಿಹಾರ ತಿಳಿಸಲಾಗುವುದು. ನನಗೆ ಆರಂಭದಲ್ಲಿ ಪಿಂಚಣಿ ವಿಚಾರವಾಗಿ ಹೆಚ್ಚಿನ ಅರ್ಜಿಗಳು ಬರುತ್ತಿದ್ದವು. 32,000 ಆದಾಯ ಮಿತಿಯನ್ನು ನಿಗದಿ ಮಾಡಿದ್ದು, ಪಿಂಚಣಿ ನಿಂತಿದೆ ಎಂದಾಗ, ಅದಕ್ಕೆ 1.20 ಲಕ್ಷದವರೆಗೆ ಆದಾಯ ಮಿತಿಯನ್ನು ನಿಗದಿ ಮಾಡಿ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಸರ್ಕಾರದ ಒಂದು ತೀರ್ಮಾನದಿಂದ 12 ಲಕ್ಷ ಜನರಿಗೆ ಪ್ರಯೋಜನವಾಗಿದೆ” ಎಂದರು.

ಮೊದಲ ಹಂತದಲ್ಲಿ 5 ಲಕ್ಷ ಬಡವರಿಗೆ ನಿವೇಶನ ನೀಡಲು ತೀರ್ಮಾನ

“ನಿವೇಶನರಹಿತರು ಅರ್ಜಿಗಳನ್ನು ನೀಡುತ್ತಿದ್ದು, ಜಿಲ್ಲಾಧಿಕಾರಿಗಳು ಸರ್ಕಾರಿ ಜಮೀನುಗಳನ್ನು ಗುರುತಿಸಬೇಕು. ಅದಿಲ್ಲದಿದ್ದರೆ ಖಾಸಗಿ ಜಮೀನು ಅಥವಾ ಹೊಸ ಬಡಾವಣೆಗಳನ್ನು ನಿರ್ಮಾಣ ಮಾಡಿ ಎಂದು ಸೂಚಿಸಲಾಗಿದೆ. ಮೊದಲ ಹಂತದಲ್ಲಿ ಸೂರು ಕೊಡಬೇಕೆಂದು 5 ಲಕ್ಷ ಬಡವರಿಗೆ ನಿವೇಶನ ನೀಡಲು ತೀರ್ಮಾನ ಮಾಡಲಾಗಿದೆ” ಎಂದರು.

ಬರಗಾಲ ಎದುರಿಸಲು ಸಿದ್ಧ

“ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, 217 ತಾಲ್ಲೂಕುಗಳು ಬರಗಾಲ ಪೀಡಿತವಾಗಿವೆ. ಟ್ರ್ಯಾಕ್ಟರ್ ಗಳಿಗೆ ಸಹಾಯಧನ, ನೇಗಿಲಯೋಗಿ ಯೋಜನೆಗೆ 2 ತಾಲ್ಲೂಕು ಆಯ್ಕೆ ಮಾಡಿ ಹೊಲ ಉಳುಮೆ ಮಾಡಿಕೊಡಲು ಕೃಷಿ ಸಚಿವ ನರೇಂದ್ರಸ್ವಾಮಿಯವರಿಗೆ ಸೂಚನೆ ನೀಡಿರುವುದಾಗಿ” ತಿಳಿಸಿದರು.

ಪ್ರತಿಭೆಗೆ ಪ್ರೋತ್ಸಾಹ

“ನಮ್ಮ ದೇಶದ ಯುವಕರು ಸಹಬಾಳ್ವೆಯಿಂದಿರಲು ಭಾರತ್ ಜೋಡೋ ಯುವಕ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ಯುವಕರಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಪ್ರತಿ ಸಂಘಕ್ಕೆ ವಾರ್ಷಿಕ 10 ಲಕ್ಷ ಅನುದಾನ ನೀಡಲಾಗುತ್ತಿದೆ. 16-35 ವರ್ಷದೊಳಗಿನ ಯುವಕರು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ. ಇವರಿಗೆ ಒಬ್ಬ ಮಾರ್ಗದರ್ಶಕರೊಬ್ಬರನ್ನು ನೇಮಿಸಲಾಗುವುದು.
ಇಂದು ಬೆಳಿಗ್ಗೆಯಷ್ಟೇ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಪೂವಮ್ಮ ಅವರನ್ನು ಅಭಿನಂದಿಸಿದ್ದೇನೆ. ರಾಜ್ಯದ ಪ್ರತಿಭೆಗಳನ್ನು ಪ್ರೋತ್ಸಾಹಿಸಲಾಗುವುದು” ಎಂದರು

“ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳು ದುರುಪಯೋಗವಾಗುತ್ತಿರುವ ಬಗ್ಗೆ ವರದಿಗಳು ಬಂದ ಹಿನ್ನೆಲೆಯಲ್ಲಿ ಮರುಪರಿಶೀಲನೆ ಕೈಗೊಳ್ಳಲಾಯಿತು ಎಂದರು.

ಪ್ರತಿಯೊಬ್ಬರ ಮತದಾನದ ಹಕ್ಕನ್ನು ರಕ್ಷಿಸಲಾಗಿದೆ

“ಮತದಾನದ ಹಕ್ಕು ಕಿತ್ತುಕೊಳ್ಳಲು ಬಿಜೆಪಿ ನಾಯಕರು ಹಾಗೂ ಮುಖಂಡರು ಬಡವರನ್ನು ಪಟ್ಟಿಯಿಂದ ಕಿತ್ತುಹಾಕಲು ಅರ್ಜಿಗಳನ್ನು ಕೊಟ್ಟಿದ್ದರು. ಈ ದೇಶದಲ್ಲಿ ದೊಡ್ಡ ಕ್ರಾಂತಿಕಾರಿ ಹೋರಾಟ ಮಾಡಿ ಸರಿಯಾದ ದಾಖಲೆಗಳಿಲ್ಲದೆ ಕಿತ್ತುಹಾಕಬಾರದೆಂಬ ಸೂಚನೆಯನ್ನು ಚುನಾವಣಾ ಆಯೋಗದಿಂದ ಹೊರಡಿಸಿ ಪ್ರತಿಯೊಬ್ಬರ ಮತದಾನದ ಹಕ್ಕನ್ನು ರಕ್ಷಿಸುವ ಕೆಲಸವನ್ನು ಮಾಡಲಾಗಿದೆ” ಎಂದರು

ಚುನಾವಣೆ ಗೆಲ್ಲಲು ಕುತಂತ್ರ: ದೇಶಕ್ಕೆ ಹಾಗೂ ಪ್ರಧಾನಿಗಳಿಗೆ ಮಾಡಿರುವ ಅವಮಾನ

“ಬಿಜೆಪಿ ಜೆಡಿಎಸ್ ನವರು ಯಾರನ್ನೂ ಬಂಧಿಸಬಾರದೆಂದು ಕೇಳಿಕೊಂಡಿದ್ದಾರೆ. ಚುನಾವಣೆಯಲ್ಲಿ ಜನರ ಹೃದಯವನ್ನು ಗೆಲ್ಲಬೇಕು. ಅದು ಬಿಟ್ಟು ಮೋಸ, ಕುತಂತ್ರದಿಂದ ಚುನಾವಣೆ ಗೆಲ್ಲಲು ತಂತ್ರ ಹೂಡಿರುವುದು ದೇಶಕ್ಕೆ ಹಾಗೂ ಪ್ರಧಾನಿಗಳಿಗೆ ಅವಮಾನ ಮಾಡಲು ಹೊರಟಿದ್ದಾರೆ. ಸಂವಿಧಾನ ವಿರೋಧಿ ನೀತಿಯಲ್ಲಿ ತೊಡಗಿದ್ದಾರೆ. ಮತದಾನದ ಹಕ್ಕು ನಿಮ್ಮ ಬದುಕಿನ ಹಕ್ಕು” ಎಂದರು.

ಸ್ಮಶಾನಗಳ ಅಭಿವೃದ್ಧಿಗೆ ಮುಕ್ತಿ ಧಾಮ

“ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರಿಗೆ ನೆರವಾಗಲು ಹೊರಟಿದ್ದೇವೆ. ಗ್ರಾಮಗಳಲ್ಲಿ ಮುಕ್ತಿಧಾಮ ಎಂಬ ಯೋಜನೆಯಡಿ ಸ್ಮಶಾನಗಳ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ” ಎಂದರು

ಜನಸೇವೆಯೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿ

“ಸಾಮಾಜಿಕ ನ್ಯಾಯ, ಸಮಾನತೆ ಸ್ಥಾಪಿಸಲು ನೊಂದ ಜನರಿಗೆ ನೆರವು ಒದಗಿಸಲಾಗುತ್ತಿದೆ. ಪ್ರತಿ ಪಂಚಾಯತಿಯ ಎಲ್ಲಾ ಜನರ ಅಹವಾಲುಗಳನ್ನು ನೇರವಾಗಿ ಸ್ವೀಕರಿಸಿ ಇಲ್ಲೇ ಸಾಧ್ಯವಿದ್ದಷ್ಟು ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು. ಜನ ನನಗೂ ಅರ್ಜಿ ಕೊಡಬಹುದು. ಜನರಧ್ವನಿ, ಪ್ರಜಾಪ್ರಭುತ್ವದ ಶಕ್ತಿ. ನಿಮ್ಮೆಲ್ಲರಲ್ಲಿ ವಿಶ್ವಾಸ ಮೂಡಿಸಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯಲ್ಲಿ ಶಕ್ತಿ ತುಂಬಬೇಕು ಎಂದು ಇಲಾಖೆ ಕೆಲಸ ಮಾಡುತ್ತಿದೆ” ಎಂದರು

ಜನರ ಮನೆ ಬಾಗಿಲಿಗೆ ಶಾಸಕರು, ಅಧಿಕಾರಿಗಳು

“ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 50 ಸಾವಿರ ಕೋಟಿಗೂ ಹೆಚ್ಚು ಅನುದಾನ ವೆಚ್ಚ ಮಾಡಲಾಗುತ್ತಿದೆ. ಬೆಲೆಗಳು ಗಗನಕ್ಕೇರುತ್ತಿದ್ದರೆ, ಆದಾಯ ಪಾತಾಳಕ್ಕೆ ಹೋಗುತ್ತಿದೆ. ಜನರ ಮನೆ ಬಾಗಿಲಿಗೆ ಶಾಸಕರು ಅಧಿಕಾರಿಗಳು ಬರುವಂತೆ ಸರ್ಕಾರ ಮಾಡಿದೆ. ಇಡೀ ದೇಶ ಇಲಾಖೆಯ ಕಾರ್ಯವೈಖರಿ ಗಮನಿಸುತ್ತಿದೆ” ಎಂದರು.

ಪ್ರಜಾಸೇವೆಯಿಂದ ಸಂತೃಪ್ತಿ

“ಸೇವೆ ಎಂದರೆ ಭಕ್ತಿ ಮತ್ತು ಶಕ್ತಿ. ಪ್ರಜಾಸೇವೆಯಿಂದ ಸಂತೃಪ್ತಿ ದೊರೆತಿದೆ. ದೀಪ ಬೆಳಗಿಸಿ ಕತ್ತಲೆ ಹೋಗಲಾಡಿಸಿದ್ದೇವೆ. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ದೊರೆಯಬೇಕೆಂದು ಈ ನಿರ್ಧಾರ ಮಾಡಿದ್ದೇವೆ ನಾನು ಮುಖ್ಯಮಂತ್ರಿಯಲ್ಲ. ಪ್ರಜಾಸೇವಕ. ಸರ್ಕಾರಿ ಯಂತ್ರ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ನನಗೆ ಅಧಿಕಾರವಿರುವುದು ನಾಡಿನ ಜನಸೇವೆ ಮಾಡಲು. ನೀವು ಯಾರೂ ಕಚೇರಿಗಳಿಗೆ ತಿರುಗಿ ಲಂಚ ಕೊಡಬಾರದು. ಪ್ರತಿ ತಿಂಗಳ 2 ಶನಿವಾರ ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ಭೇಟಿ ಮಾಡಿ ಈ ಕಾರ್ಯಕ್ರಮ ನಡೆಸಲಾಗುವುದು”ಎಂದರು.

ಜನರಿಗೆ ಶಕ್ತಿ ತುಂಬಲು ಸರ್ಕಾರ ಅವಕಾಶಗಳನ್ನು ಕಲ್ಪಿಸಿದೆ

“ಆರನೇ ಗ್ಯಾರಂಟಿಯಾದ ಭೂಮಿ ಗ್ಯಾರಂಟಿಯಡಿ ಇ ಸ್ವತ್ತು, ಪೋಡಿ ಮುಂತಾದ ದಾಖಲೆಗಳನ್ನು ಕೊಡಲು ವ್ಯವಸ್ಥೆ ಮಾಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಹಿಂದೆ ಇದ್ದ ಕೇಂದ್ರ ಸರ್ಕಾರ 90% ಹಾಗೂ ರಾಜ್ಯ ಸರ್ಕಾರ 10% ಅನುದಾನದ ಪಾಲು ಹಂಚಿಕೆಯನ್ನು 60:40 ಮಾಡಿದ್ದಾರೆ. ಆದರೂ ಜನರಿಗೆ ಶಕ್ತಿ ತುಂಬಲು ಸರ್ಕಾರ ಅವಕಾಶಗಳನ್ನು ಕಲ್ಪಿಸಿದೆ” ಎಂದು ತಿಳಿಸಿದರು.

ಯುವ ಕರ್ನಾಟಕದ ಮೂಲಕ ಭಾರತದ ಅಭಿವೃದ್ಧಿಗೆ ಶಕ್ತಿ

“ಯುವಕರ್ನಾಟಕ ಭಾರತದ ಅಭಿವೃದ್ಧಿಗೆ ಶಕ್ತಿ ತುಂಬುತ್ತಿದೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಅತಿ ಹೆಚ್ಚು ಯೋಜನೆಗಳನ್ನು ನೀಡಿ ದಾಖಲೆ ನಿರ್ಮಾಣ ಮಾಡಲಾಗಿದೆ. ನಾನು ಮತ್ತು ಅವರು ಸೇರಿದಂತೆ ಸಹೋದ್ಯೋಗಿಗಳು ಒಟ್ಟಾಗಿ ಸೇರಿ ಶ್ರಮಿಸಿದ್ದೇವೆ” ಎಂದರು.

ದಾನಧರ್ಮ ಮಾಡುವ ಸರ್ಕಾರ

“ಎಲ್ಲರಿಗೂ ಅವಕಾಶ ದೊರಕಬೇಕೆಂದು ಕೆಲವರು ಅಧಿಕಾರ ತ್ಯಾಗ ಮಾಡಬೇಕಾಯಿತು. ನನಗಿಂತ ಹಿರಿಯ ಶಾಸಕರು ಕೂಡ ನನಗೆ ಶಕ್ತಿ ಕೊಟ್ಟಿದ್ದಾರೆ. ನಮ್ಮ ಸರ್ಕಾರ ದಾನ ಧರ್ಮವನ್ನು ಮಾಡಿಕೊಂಡು ಬರುತ್ತಿದ್ದು, ಬಿಜೆಪಿ, ಜೆಡಿಎಸ್ ನವರಿಗೂ ಪ್ರಜಾಸೇವೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೇಳಿದ್ದೇವೆ” ಎಂದರು.

ದಾನಧರ್ಮ ಮಾಡುವ ಕೈ ಅಧಿಕಾರದಲ್ಲಿರಬೇಕು

“ದಾನಧರ್ಮ ಮಾಡುವ ಕೈ ಅಧಿಕಾರಕ್ಕೆ ಬಂದಾಗ ಇಂಥ ಕೆಲಸಗಳು ಆಗುತ್ತವೆ ಎಂದ ಸಿಎಂ, ಪ್ರಜಾಸೇವೆ ಇಲಾಖೆಯಲ್ಲಿ ಕಂದಾಯ, ವಸತಿ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ಸಾರಿಗೆ, ಇಂಧನ, ನೀರಾವರಿ, ಸಮಾಜ ಕಲ್ಯಾಣ, ಆರೋಗ್ಯ ಸೇರಿದಂತೆ ಎಲ್ಲಾ ಇಲಾಖೆಗಳ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ” ಎಂದು ವಿವರಿಸಿದರು

ಕಾನೂನುಬದ್ಧ ಅರ್ಜಿಗಳ ವಿಲೇವಾರಿಗೆ ಮಾರ್ಗದರ್ಶನ

“ಅರಣ್ಯ ಇಲಾಖೆಯ ಸಮಸ್ಯೆಗಳು ಹೆಚ್ಚಿವೆ ಎಂದು ತಿಳಿಸಿದ್ದು, ಜನರು ಒತ್ತುವರಿ ಮಾಡಬಾರದು. ಪರವಾನಗಿ ಇಲ್ಲದ ಬಂದೂಕುಗಳನ್ನು ನವೆಂಬರ್ ಒಂದರೊಳಗೆ ವಶಕ್ಕೆ ನೀಡಬೇಕು. ಕಾನೂನಿನ ಪ್ರಕಾರ ಅರ್ಜಿ ಸಲ್ಲಿಸಿ ಅದನ್ನು ಪಡೆಯಬೇಕು. ಬಗರ್ ಹುಕುಂ ಮುಂತಾದ ಕಾನೂನುಬದ್ಧ ಅರ್ಜಿಗಳ ವಿಲೇವಾರಿಗೆ ಮಾರ್ಗದರ್ಶನ ಮಾಡಲಾಗುವುದು. ಯಾರನ್ನೂ ಒಕ್ಕಲೆಬ್ಬಿಸದಂತೆ ಸೂಚನೆ ನೀಡಲಾಗುವುದು” ಎಂದರು.

ಜನರ ಸಮಸ್ಯೆಗಳಿಗೆ ಸ್ಪಂದನೆ

“ಪೋಲೀಸ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಕಾರ್ಯಕರ್ತರಿಂದ ತೊಂದರೆಯಾದರೂ ಅರ್ಜಿ ಕೊಡಬಹುದು. ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ಅದಕ್ಕಾಗಿಯೇ ನಾವೆಲ್ಲರೂ ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇವೆ. ಎಷ್ಟು ಹೊತ್ತಾದರೂ ಅರ್ಜಿ ಸ್ವೀಕರಿಸಿ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು” ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button