
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಭಾರತ ದೇಶ ಒಗ್ಗಟ್ಟಿನಿಂದ ಬಲಿಷ್ಟವಾಗಿ ಬೆಳೆಯುತ್ತಿರುವಾಗ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಗೆ ಯಾವುದೇ ಅರ್ಥವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು 61ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ 2022 ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಭಾರತ ಜೋಡೋ ಯಾತ್ರೆಯ ಅರ್ಥ ಏನು? ಭಾರತ ಈಗಾಗಲೇ ಒಕ್ಕೂಟವಾಗಿ, ಒಗ್ಗಟ್ಟಾಗಿ ಮುನ್ನಡೆಯುತ್ತಿದೆ. ಇದನ್ನು ಮತ್ತೆ ಜೋಡಿಸುವ ಪ್ರಮೇಯ ಇಲ್ಲ . ಇಡೀ ದೇಶ ಒಗ್ಗಟ್ಟಾಗಿ ಭಾರತ ದೇಶ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆಯನ್ನು ಸಾಧಿಸುತ್ತಿದೆ. ಪ್ರಸ್ತುತ ಇಡೀ ಜಗತ್ತಿನಲ್ಲಿ ಆರ್ಥಿಕ ಹಿಂಜರಿತ ಉಂಟಾಗುತ್ತಿದೆ. ಅಮೆರಿಕಾ ಸೇರಿದಂತೆ ಜಿ 7 ದೇಶಗಳು ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ ಭಾರತ ದೇಶ ಕನಿಷ್ಟ ಶೇ. 7 ಅಭಿವೃದ್ಧಿಯನ್ನು ಕಾಯ್ದುಕೊಂಡು ಬಂದಿದೆ.. ರಾಹುಲ್ ಗಾಂಧಿಯವರು ಮೊದಲ ಮಿಸೈಲ್ ವಿಫಲಗೊಂಡಿದ್ದು, ಈಗ ಮತ್ತೊಮ್ಮೆ ಲಾಂಚ್ ಮಾಡುವ ಪ್ರಯತ್ನದಲ್ಲಿದ್ದಾರೆ. ಅದು ಬಿಟ್ಟರೆ ಇವರ ಜೋಡೋ ಯಾತ್ರೆಗೆ ಯಾವುದೇ ಅರ್ಥವಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಬಳ್ಳಾರಿಯ ಜನಕ್ಕೆ ಮೋಸ ಮಾಡಿದಂತಲ್ಲವೇ ?
ಬಳ್ಳಾರಿಯಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಸಮಾವೇಶಕ್ಕೆ ಯಾವ ಪ್ರಶ್ನೆ ಕೇಳಲು ಬಯಸುತ್ತೀರಿ ಎಂಬುದಕ್ಕೆ ಪ್ರತಿಕ್ರಿಯಿಸಿ, ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿಯವರು ಬಳ್ಳಾರಿಯಲ್ಲಿ ಲೋಕಸಭಾ ಚುನಾವಣೆಗೆ ನಿಂತು, ಈ ಕ್ಷೇತ್ರವನ್ನೇ ಆಯ್ಕೆ ಮಾಡುವುದಾಗಿ ನಿರ್ಣಯಿಸಿ, ನಂತರ ರಾಯಬರೇಲಿ ಎಂದು ಆಯ್ಕೆ ಮಾಡಿಕೊಂಡರು. ಆ ಸಂದರ್ಭದಲ್ಲಿ ಮತ ಹಾಕಿದ ಜನರಿಗೆ ಕೃತಜ್ಞತೆಯನ್ನೂ ಸಲ್ಲಿಸಲಿಲ್ಲ. ಅಂದು 3 ಸಾವಿರ ಕೋಟಿ ಬಜೆಟ್ ನಿಗದಿಪಡಿಸಿ 1 ಪೈಸೆಯನ್ನೂ ಬಿಡುಗಡೆ ಮಾಡಲಿಲ್ಲ. ಈಗ ಯಾವ ಮುಖ ಇಟ್ಟುಕೊಂಡು ಬಳ್ಳಾರಿಯಲ್ಲಿ ಪಾದಯಾತ್ರೆ ಮಾಡುತ್ತಿದ್ದೀರಿ. ಅಲ್ಲಿನ ಜನಕ್ಕೆ ನೀವು ಮೋಸ ಮಾಡಿದಂತಲ್ಲವೇ ಎಂದು ಪ್ರಶ್ನಿಸಿದರು.
2023 ರಲ್ಲಿ 150 ಗುರಿಯನ್ನು ಮುಟ್ಟುವ ವಿಶ್ವಾಸವಿದೆ :
ಸಂಕಲ್ಪ ಯಾತ್ರೆಯನ್ನು 3 ದಿನಗಳ ಕಾಲ 4 ಜಿಲ್ಲೆಯಲ್ಲಿ ಪ್ರಾರಂಭ ಮಾಡಿದ್ದು,ಅಭೂತಪೂರ್ವ ಬೆಂಬಲ ಇದೆ. ಇದರಿಂದ ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಬಂದಿದೆ. ಭಾಜಪದ ಬಗ್ಗೆ ಜನರಲ್ಲಿಯೂ ವಿಶ್ವಾಸ ಹೆಚ್ಚಿದೆ. ಸಂಕಲ್ಪಯಾತ್ರೆ ವಿಜಯಸಂಕಲ್ಪ ಯಾತ್ರೆ ಆಗುವುದರಲ್ಲಿ ಸಂಶಯವಿಲ್ಲ. 2023 ರಲ್ಲಿ 150 ಗುರಿಯನ್ನು ಮುಟ್ಟುವ ವಿಶ್ವಾಸವಿದೆ ಎಂದರು.
ಸಿದ್ಧರಾಮಯ್ಯನವರು 4 ಕಿ.ಮೀ. ನಡೆಯುವ ಸವಾಲಿಗೆ ಪ್ರತಿಕ್ರಿಯೆ ನೀಡಿ, ಅವರು ನನ್ನ ಬಗ್ಗೆ ವೈಯಕ್ತಿಕವಾಗಿ ಟೀಕಿಸಿದ್ದಾರೆ. ಇದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರಿಗೆ ದೇವರು ಒಳ್ಳೆಯ ಆರೋಗ್ಯವನ್ನು ನೀಡಿ ನೂರು ವರ್ಷ ಚೆನ್ನಾಗಿರಲಿ ಎಂದು ತಿಳಿಸಿದರು.
ಕಾನೂನಿನ ಚೌಕಟ್ಟಿನೊಳಗೆ ಕ್ರಮ:
ಮುರುಘಾಮಠಕ್ಕೆ ಹೊಸ ಶ್ರೀಗಳನ್ನು ನೇಮಿಸುವ ಬಗ್ಗೆ ಒತ್ತಡ ಕೇಳಿಬರುತ್ತಿರುವುದಕ್ಕೆ ಪ್ರತಿಕ್ರಯಿಸಿ, ಮಾಜಿ ಸಚಿವ ಏಕಾಂತಯ್ಯ ಅವರ ನೇತೃತ್ವದಲ್ಲಿ ಭಕ್ತಮಂಡಳಿಯ ಸರ್ವರೂ ಬಂದು ಭೇಟಿಯಾಗಿದ್ದಾರೆ. ಅಲ್ಲಿನ ವಿಚಾರಗಳೆಲ್ಲವನ್ನೂ ತಿಳಿಸಿದ್ದಾರೆ. ಮಠದ ಆಡಳಿತಕ್ಕೆ ಆಗುತ್ತಿರುವ ತೊಂದರೆಯ ಬಗ್ಗೆ ವಿವರಿಸಿದ್ದಾರೆ . ಮಠದ ಟ್ರಸ್ಟ್ ಇದ್ದು, ಕಾನೂನಿನ ಚೌಕಟ್ಟಿನೊಳಗೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಕಂಠೀರವ ಸ್ಟೇಡಿಯಂ ಟ್ರ್ಯಾಕ್ ಹಾಳಾಗದಂತೆ ಕ್ರಮವಹಿಸಲು ತಾಕೀತು :
ಕಂಠೀರವ ಸ್ಟೇಡಿಯಂ ನ್ನು ಫುಟ್ಬಾಲ್ ಕ್ರೀಡೆಗೆ ನೀಡುತ್ತಿದ್ದು, ರಾಜ್ಯದ ಕ್ರೀಡಾಪಟುಗಳಿಗೆ ಇದರಿಂದ ತೊಂದರೆಯಾಗುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ಅವರು ಮಾಡುತ್ತಿದ್ದು, ಈ ವಿಚಾರ ಅವರ ಅಧಿಕಾರದ ಮಿತಿಗೆ ಒಳಪಟ್ಟಿದ್ದು, ನಾವು ನಿರ್ಧರಿಸಲು ಆಗುವುದಿಲ್ಲ.ಆದರೆ ಕ್ರೀಡಾಂಗಣದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಟ್ರ್ಯಾಕ್ ನ್ನು ಹಾಳಾಗದಂತೆ ಕಾಪಾಡುವುದು ಅಸೋಸಿಯೇಷನ್ ನವರ ಜವಾಬ್ದಾರಿ. ಇದಕ್ಕೆ ಸಂಬಂಧಪಟ್ಟವರನ್ನು ಕರೆಸಿ ಈ ಬಗ್ಗೆ ತಾಕೀತು ಮಾಡಲಾಗುವುದು ಎಂದು ತಿಳಿಸಿದರು.
ಮುರುಘಾಶ್ರೀಗಳ ಪೀಠತ್ಯಾಗ ವಿಚಾರ; ಸಿಎಂ ಹೇಳಿದ್ದೇನು?
https://pragati.taskdun.com/politics/murughashreepeethatyagacm-basavaraj-bommai-reaction/