Politics

*ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಬಿಎಂಎಟಿ ಘಟಕ ಸ್ಥಾಪನೆ: ಡಾ. ಶರಣ್‌ ಪ್ರಕಾಶ್‌ ಪಾಟೀಲ್*

ವಿಧಾನ ಪರಿಷತ್ತಿನಲ್ಲಿ ಸದಸ್ಯೆ ಉಮಾಶ್ರೀ ಪ್ರಶ್ನೆಗೆ ಸಚಿವರು ಉತ್ತರ

ಪ್ರಗತಿವಾಹಿನಿ ಸುದ್ದಿ: ಮಕ್ಕಳಲ್ಲಿ ವರ್ಷದಿಂದ ವರ್ಷಕ್ಕೆ ವ್ಯಾಪಕವಾಗಿ ಹೆಚ್ಚಾಗುತ್ತಿರುವ ಬೋನ್ ಮ್ಯಾರೊ ಆಸ್ಪಿರೇಟ್ ಅಂಡ್ ಟ್ರಿಪೈನ್ ಬಯಾಪ್ಸಿ (ಬಿಎಂಎಟಿ) ಸಂಸ್ಥೆಗಳನ್ನು ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಪ್ರಾರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಸೋಮವಾರ ಸದಸ್ಯೆ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ರಾಜ್ಯದ ಎಲ್ಲಾ ಹೋಬಳಿಗಳಲ್ಲೂ ಈ ಕೇಂದ್ರಗಳನ್ನು ಸ್ಥಾಪಿಸಬೇಕೆಂಬ ಉದ್ದೇಶವಿದೆ. ಪ್ರಾರಂಭಿಕ ಹಂತದಲ್ಲಿ ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದರು.

Home add -Advt

ಈಗಾಗಲೇ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ತಪಾಸಣಾ ಘಟಕ ಕಾರ್ಯ ನಿರ್ವಹಿಸುತ್ತಿದೆ. ಇದೇ ರೀತಿ ಕಲಬುರಗಿಯಲ್ಲೂ ಕೇಂದ್ರವನ್ನು ಪ್ರಾರಂಭ ಮಾಡಿದ್ದೇವೆ. ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲೂ ಇದನ್ನು ತೆರೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಮಕ್ಕಳಲ್ಲಿ ಕ್ಯಾನ್ಸರ್‌ ಆತಂಕಕಾರಿ
ಮಕ್ಕಳಲ್ಲಿ ಇತ್ತೀಚೆಗೆ ಕ್ಯಾನ್ಸರ್ ಕಂಡುಬರುತ್ತಿರುವುದು ಅತ್ಯಂತ ಆತಂಕಕಾರಿ ವಿಷಯ. ಇದರ ಬಗ್ಗೆ ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲೂ ಸಾರ್ವಜನಿಕರಿಗೆ ಶಿಬಿರಗಳನ್ನು ಆಯೋಜಿಸುವ ಮೂಲಕ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ. ಸರ್ಕಾರದ ಮಟ್ಟದಲ್ಲೂ ಪ್ರತಿ ವರ್ಷ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ಆದರೂ ಕ್ಯಾನ್ಸರ್ ಹೆಚ್ಚಳವಾಗುತ್ತಿರುವುದು ಆತಂಕ ಸೃಷ್ಟಿಸಿದೆ ಎಂದು ಸಚಿವರು ವಿಷಾದಿಸಿದರು.

ಪ್ರತಿ ವರ್ಷ 1533 ಕ್ಯಾನ್ಸರ್ ಪ್ರಕರಣಗಳು 14 ವರ್ಷದೊಳಗಿನ ಮಕ್ಕಳಲ್ಲಿ ಕಂಡುಬರುತ್ತಿದೆ 876 ಗಂಡು ಮಕ್ಕಳು, 657 ಹೆಣ್ಣು ಮಕ್ಕಳು ಇದರಲ್ಲಿ ಸೇರ್ಪಡೆಯಾಗಿದೆ. ಮಕ್ಕಳಲ್ಲಿ ಪ್ರಾರಂಭಿಕ ಹಂತದಲ್ಲೇ ಅರಿವು ಮೂಡಿಸುವ ಕೆಲಸವಾಗಬೇಕು. ಕೇವಲ ಸರ್ಕಾರದಿಂದ ಮಾತ್ರವಲ್ಲದೆ ಸಂಘಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸುವ ಮೂಲಕ ತಡೆಗಟ್ಟಬಹುದೆಂದು ಸಚಿವ ಶರಣಪ್ರಕಾಶ್ ಪಾಟೀಲ್ ಸಲಹೆ ಮಾಡಿದರು.

Related Articles

Back to top button