
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ ಆತ್ಮಹತ್ಯೆ ಯತ್ನ ಮಾಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರು ಕಳೆದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎನ್ನಲಾಗಿದ್ದು, ಶುಕ್ರವಾರ ರಾತ್ರಿ 7.30ರ ಹೊತ್ತಿಗೆ ನಿದ್ರೆ ಮಾತ್ರೆಗಳನ್ನು ಸೇವಿಸಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಆಸ್ಪತ್ರೆಗೆ ಧಾವಿಸಿದ್ದು, ಆರೋಗ್ಯ ವಿಚಾರಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತೋಷ್, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ತಮ್ಮ 22ನೇ ವಯಸ್ಸಿನಲ್ಲೇ ಯಡಿಯೂರಪ್ಪ ಸಹಾಯಕರಾಗಿ ಸೇರಿಕೊಂಡಿರುವ ಸಂತೋಷ್, 32ನೇ ವಯಸ್ಸಿನಲ್ಲಿ, ಅಂದರೆ ಕಳೆದ ಮೇ 28ರಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.
ಮೂಲತಃ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆಯ ಎನ್.ಆರ್. ಸಂತೋಷ್ ಅವರು ಕೃಷಿಕ ಕುಟುಂಬದಿಂದ ಬಂದವರು. ಬೆಂಗಳೂರು ಹೊರವಲಯದ ಚನ್ನೇನಹಳ್ಳಿಯಲ್ಲಿ ಪದವಿವರೆಗೆ ಶಿಕ್ಷಣ ಪಡೆದಿದ್ದಾರೆ. 2006 ರಿಂದ 2012ರ ವರೆಗೆ ಎಪಿವಿಪಿ ಸಕ್ರೀಯ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ. ನಂತರ ಯಡಿಯೂರಪ್ಪ ಅವರಿಗೆ ಆಪ್ತ ಕಾರ್ಯದರ್ಶಿಯಾಗಿ ತಮ್ಮ 22ನೇ ವಯಸ್ಸಿನಲ್ಲೇ ಕೆಲಸ ಆರಂಭಿಸಿದ್ದಾರೆ.
ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಶಾಸಕ ನಾಗಬೇಕು ಎಂಬ ಆಸೆಯನ್ನು ಹೊತ್ತಿದ್ದ ಸಂತೋಷ್ ಮೂರ್ನಾಲ್ಕು ತಿಂಗಳಿನಿಂದ ಅರಸೀಕೆರೆ ಕ್ಷೇತ್ರದ ಸಾಮಾಜಿಕ ಚಟುವಟಿಕೆಗಳಲ್ಲಿ ಮತ್ತು ರಾಜಕೀಯವಾಗಿ ಮುಂಚೂಣಿಯಲ್ಲಿದ್ದರು.