
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕನ್ನಡ ಶಾಲೆಗಳು ಉಳಿದರೆ ಮಾತ್ರ ನಾಡಿನಲ್ಲಿ ಕನ್ನಡ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು “ಕನ್ನಡ ಶಾಲೆಗಳನ್ನು ಉಳಿಸಿ- ಕನ್ನಡವನ್ನು ಬೆಳೆಸಿ” ಎನ್ನುವ ಧ್ಯೇಯದೊಂದಿಗೆ ಕನ್ನಡಶಾಲೆಗಳನ್ನು ಉಳಿಸಿಕೊಳ್ಳುವುದಕ್ಕೆ ಹೋರಾಟ ನಡೆಸುತ್ತಿದೆ. ಈ ಮಧ್ಯೆ ಸರಕಾರ ಮಾದರಿ ಶಾಲೆಗಳ ಹೆಸರಿನಲ್ಲಿ ಇದ್ದ ಕನ್ನಡ ಮಾಧ್ಯಮ ಶಾಲೆಗಳ ವಿಲೀನಿಕರಣಕ್ಕೆ ಮುಂದಾದರೆ ಇದು ಕನ್ನಡಕ್ಕೆ ಮಾಡುವ ಘೋರ ಅನ್ಯಾಯ ಹಾಗೂ ಕನ್ನಡದ ಅಸ್ಮಿತೆಗೆ ಧಕ್ಕೆ ತರುವ ಕಾರ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಕಳವಳ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು “ಕನ್ನಡ ಶಾಲೆ ಉಳಿಸಿ- ಕನ್ನಡ ಬೆಳೆಸಿ” ಎನ್ನುವ ಧ್ಯೇಯವಾಕ್ಯದೊಂದಿಗೆ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವುದಕ್ಕಾಗಿ ಹಿರಿಯ ಸಾಹಿತಿ ನಾಡೋಜ ಡಾ. ಎಸ್.ಎಲ್. ಭೈರಪ್ಪ ಅವರ ಅಧ್ಯಕ್ಷತೆಯಲ್ಲಿ ದುಂಡುಮೇಜಿನ ಸಭೆ ಇತ್ತೀಚೆಗೆ ಆಯೋಜಿಸಲಾಗಿತ್ತು. ಆ ಸಭೆಗೆ ಸ್ವತಃ ರಾಜ್ಯದ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಸೇರಿದಂತೆ ಮಠಾಧೀಶರು, ನಾಡಿನ ಪ್ರಮುಖ ಶಿಕ್ಷಣ ತಜ್ಞರು, ಹಿರಿಯ ಸಾಹಿತಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಯಾವುದೇ ಕನ್ನಡ ಶಾಲೆಯನ್ನು ಮುಚ್ಚಬಾರದು ಹಾಗೂ ವಿಲೀನಿಕರಣ ಮಾಡಬಾರದು ಎನ್ನುವ ಸ್ಪಷ್ಟ ನಿರ್ಧಾರವನ್ನು ಕನ್ನಡ ಸಾಹಿತ್ಯ ಪರಿಷತ್ತು ಕೈಗೊಂಡಿತ್ತು. ರಾಜ್ಯದಲ್ಲಿ ಕನ್ನಡ ಉಳಿಸಿಕೊಳ್ಳುವ ಕಾರ್ಯ ಆಗಬೇಕಿದೆ ಮತ್ತು ಕಡ್ಡಾಯವಾಗಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಬೇಕಿದೆ. ಕನ್ನಡ ಶಾಲೆಗಳಿಗೆ ಹೆಚ್ಚಿನ ಮಕ್ಕಳು ಸೇರ್ಪಡೆಯಾಗುವ ವಾತಾವರಣ ನಿರ್ಮಾಣ ಮಾಡಬೇಕಿದೆ. ಇದರ ಹೊರತಾಗಿ ಕನ್ನಡ ಶಾಲೆಗಳಲ್ಲಿ ಮಕ್ಕಳಿಲ್ಲ ಎನ್ನುವ ಕಾರಣ ನೀಡಿ ಶಾಲೆಗಳ ವಿಲೀನ ಕ್ರಮ ಸರಿಯಲ್ಲ ಎಂದು ನಾಡೋಜ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.
ಪ್ರತಿ ಹೋಬಳಿಗೊಂದು ‘ಮಾದರಿ ಶಾಲೆ’ ರೂಪಿಸಬೇಕೆಂಬ ಸರಕಾರದ ಉದ್ದೇಶ ಸ್ವಾಗತಾರ್ಹವಾದುದೇ. ಆದರೆ, ಅಕ್ಕಪಕ್ಕದಲ್ಲಿ ಇರುವ ಕನ್ನಡಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಎಂಬ ನೆಪ ನೀಡಿ ಕನ್ನಡ ಶಾಲೆಗಳನ್ನು ಮಾದರಿ ಶಾಲೆಗಳಲ್ಲಿ ವಿಲೀನಗೊಳಿಸಲಾಗುತ್ತಿದೆ ಎನ್ನುವ ವರದಿಗಳು ಬಿತ್ತರವಾಗುತ್ತಿವೆ. ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಮೂಲ ಕಾರಣ ಅರಿತು, ಅದಕ್ಕೆ ಪರಿಹಾರ ಕಾಣುವುದರಲ್ಲಿ ಅರ್ಥವಿದೆ.
ರಾಜ್ಯದಲ್ಲಿನ 48 ಸಾವಿರ ಶಾಲೆಗಳ ಪೈಕಿ 13800 ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗಿದೆ ಎನ್ನುವ ಉದ್ದೇಶ ಇಟ್ಟು ಶಾಲೆಗಳನ್ನು ವಿಲೀನ ಮಾಡಬಾರದು. ಕನ್ನಡ ಶಾಲೆಗಳನ್ನು ಶಾಶ್ವತವಾಗಿ ಮುಚ್ಚುವ ಕೆಲಸ ಆಗಬಾರದು. ಅದರ ಬದಲಿಗೆ ಇರುವ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಇನ್ನಷ್ಟು ಹೆಚ್ಚಾಗಿ ಆಕರ್ಷಿಸಬೇಕಾಗಿದೆ. ಕನ್ನಡ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಎಲ್ಲ ಮೂಲ ಸೌಕರ್ಯಗಳನ್ನು ನೀಡುವ ಯೋಜನೆ ಕಾರ್ಯಗತವಾಗಬೇಕಿದೆ. ಪಾಲಕರಲ್ಲಿ ಕನ್ನಡ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡಲಾಗುವುದು ಎನ್ನುವ ಭರವಸೆ ನೀಡುವ ಕೆಲಸಗಳು ಸರಕಾರದ ಮಟ್ಟದಲ್ಲಿ ಆಗಬೇಕಿವೆ. ಅದನ್ನು ಹೊರತುಪಡಿಸಿ ಕನ್ನಡ ಶಾಲೆಗಳ ಬುಡಕ್ಕೆ ಕೊಡಲಿ ಏಟು ನೀಡುವ ಕಾರ್ಯ ನಿಲ್ಲಿಸಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹಿಸುತ್ತದೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ರಾಜ್ಯದಲ್ಲಿ 7 ಸಾವಿರ ಗ್ರಾಮ ಪಂಚಾಯಿತಿಗಳಿವೆ. ಪ್ರತಿ ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆಗಳನ್ನು ನಿರ್ಮಿಸಲು ತಗಲುವ ಆರ್ಥಿಕ ವೆಚ್ಚಕ್ಕಿಂತ, ಈಗಿರುವ ಕನ್ನಡ ಶಾಲೆಗಳನ್ನು ಹಂತ ಹಂತವಾಗಿ ಉನ್ನತೀಕರಣ ಮಾಡುವ ಮೂಲಕ ಕನ್ನಡ ಶಾಲೆಗಳ ಅಭಿವೃದ್ಧಿ ಮಾಡುವ ಕೆಲಸ ಮಾಡಬೇಕಿದೆ. ಬದಲಾಗಿ ಕನ್ನಡ ಶಾಲೆಗಳನ್ನು ಮುಚ್ಚುವ ಕ್ರಮ ಸರಿಯಲ್ಲ.
ಅನಿವಾರ್ಯ ಪರಿಸ್ಥಿತಿ ಬಂದರೆ ಕನ್ನಡ ಶಾಲೆಗಳ ಉಳಿವಿಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಹೋರಾಟದ ಮಾರ್ಗವನ್ನು ಕೈಗೆತ್ತಿಕೊಳ್ಳಲಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಎಚ್ಚರಿಸಿದ್ದಾರೆ.
ಸಿದ್ದರಾಮೋತ್ಸವ ಯಶಸ್ಸಿಗೆ ಪೂರ್ವಭಾವಿ ಸಭೆ: ರಾಜ್ಯ ಘಟಕದ ರಾಜ್ಯಾಧ್ಯಕ್ಷರಾಗಿ ಗಿರೀಶ್ ಗದಿಗೆಪ್ಪಗೌಡರ ಆಯ್ಕೆ