Latest

ರಾಜಕಾರಣವೂ ಜನಮತವೂ – ಒಂದು ವಿಚಾರ.

 

ರವಿ ಕರಣಂ

ನಿಮಗೆ ದೈನಂದಿನ ರಾಜಕೀಯ ಘಟನಾವಳಿಗಳನ್ನು ಗಮನಿಸಿದಾಗ, ನಮ್ಮ ದೇಶದ ಇಂದಿನ ರಾಜಕಾರಣಿಗಳು ಎಷ್ಟು ಅಪ್ರಬುದ್ದರೆಂದು ಅನಿಸುವುದಿಲ್ಲವೇ ?  100 ರಲ್ಲಿ %90 ಕ್ಕೂ ಅಧಿಕ ಭ್ರಷ್ಟರು ! ಅಂತಹ ರಾಜಕಾರಣಿಗಳ ತಾಳಕ್ಕೆ ಕುಣಿವವರು ಇನ್ನೂ ಭ್ರಷ್ಟರು ! ಹೀಗೆಂದ ಕೂಡಲೇ ನಿಮಗೆ ಕೋಪ ಉಕ್ಕಿ ಬರಬಹುದು. ಅಥವಾ ಆ ಭ್ರಷ್ಟರ ಗುಂಪಿನಿಂದ ನಾನು ಹೊರತಾಗಿದ್ದೇನೆ ಎಂದು ನಿಮ್ಮ ಆತ್ಮ ಹೇಳಲೂಬಹುದು. ಆದರೆ ಅದು ಮುಖ್ಯವಲ್ಲ. ನಮ್ಮ ಭವಿಷ್ಯದ ನಾಲೆಯನ್ನು ನಾವೇ ಮುಚ್ಚಿಕೊಳ್ಳುತ್ತಿದ್ದೇವೆ ಎಂಬುದರ ಅರಿವಾಗದೇ ಹೋದರೆ, ಜೀವನದ ಅಭಿವೃದ್ಧಿ ಪಥ ಹಳ್ಳ ಹಿಡಿಯುತ್ತದೆ.

ವಿಷಯಕ್ಕೆ ಬರೋಣ. ಇಂದಿನ ರಾಜಕಾರಣಿಗಳ ಮನೋಸ್ಥಿತಿಯನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕು. ನಿಮಗೂ ಗೊತ್ತಿಲ್ಲದೇ ಮನೋವಿಜ್ಞಾನದ ಅರಿವು ಇರುತ್ತದೆ. ಸ್ವಲ್ಪ ಯೋಚಿಸಿ. ನಿಮ್ಮ ನಿಮ್ಮ ಕ್ಷೇತ್ರಗಳ ರಾಜಕಾರಣಿಗಳ, ನಿಶ್ಚಿತ ಉದ್ದೇಶಗಳು, ಉದ್ದೇಶ ಈಡೇರಿಕೆಗೆ ರೂಪಿಸಿದ ಕಾರ್ಯ ಯೋಜನೆಗಳು, ಒಟ್ಟು ಸಮುದಾಯದ ಉನ್ನತೀಕರಣಕ್ಕೆ ಕೈಗೊಂಡ ನಿರ್ಧಾರಗಳು, ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಹಾಕಿದ ಶ್ರಮ, ಅಭಿವೃದ್ಧಿಗೆ ಮೀಸಲಿಟ್ಟ ಸಮಯದ ಮಿತಿ, ಎಲ್ಲ ದೃಷ್ಟಿಕೋನಗಳಿಂದಲೂ ಅಳೆದು ತೂಗಿ ನೋಡಿ. ನಾವು ಇಪ್ಪತ್ತೊಂದನೆಯ ಶತಮಾನದ ¼ ಭಾಗವನ್ನು ಮುಗಿಸುತ್ತಾ ಬಂದಿದ್ದರೂ, ಕ್ಷೇತ್ರಗಳ ಪರಿಸ್ಥಿತಿ, ಐವತ್ತು ವರ್ಷಗಳಷ್ಟು ಹಿಂದೆ ಉಳಿದಿದೆ ಎಂದರೆ ನಂಬುತ್ತೀರಾ ? ಇದು ಕಲ್ಪನೆಯ ವಿವರವಲ್ಲ. ಕರ್ಣಾಟಕದ ಎಲ್ಲ ಜಿಲ್ಲೆಗಳಲ್ಲೂ ಸಂಚರಿಸಿ, ತೀವ್ರ ಗಮನ ಹರಿಸಿ ಪಡೆದ ಅನುಭವ.

Home add -Advt

ಬೀದರ್ ನಿಂದ ಚಾಮರಾಜನಗರ ದವರೆಗೂ, ಕಾರವಾರದಿಂದ ಬಳ್ಳಾರಿ ಯವರೆಗೂ ಈ ಇಪ್ಪತ್ತು ವರ್ಷಗಳಲ್ಲಿ ಸತತವಾಗಿ ಓಡಾಡಿ ನೋಡಲಾಗಿ, ಅಭಿವೃದ್ಧಿ ಕೇವಲ ಮೂವತ್ತರಷ್ಟು ! ಇನ್ನೂ ಎಪ್ಪತ್ತರಷ್ಟು ದಾಖಲೆಗಳಲ್ಲಿ, ಜಾಹಿರಾತುಗಳಲ್ಲಿ ಮಾತ್ರ. ಸಾವಿರಾರು ಕಿ ಮೀ ರಸ್ತೆ ಮಾಡಿಸಿದ ಸರ್ಕಾರಗಳು ತಿರುಗಿ ಹೋಗಿ ನೋಡಿದರೆ, ಗುಂಡಿಗಳಾಗಿ ರಸ್ತೆಯೇ ಹಾಳಾಗಿರುತ್ತವೆ. ಅಂದರೆ ಗುಣಮಟ್ಟದ ಕೊರತೆ ಎದ್ದು ಕಾಣುತ್ತದೆ.

ಗುಣಮಟ್ಟದ ರಸ್ತೆಗಳಾದರೆ ಬಹಳ ವರ್ಷಗಳ ಕಾಲ ಸುಸ್ಥಿತಿಯಲ್ಲಿರುತ್ತವೆ. ಆಗ ಇವರಿಗೆ ಅಂದರೆ ಕಾಂಟ್ರ್ಯಾಕ್ಟ್ ದಾರರಿಗೆ, ಕ್ಷೇತ್ರದ ಜನ ಪ್ರತಿನಿಧಿಗಳಿಗೆ ಹಣ ದೋಚಲು ದಾರಿಯಿರದು. ಸ್ಥಳೀಯ ಮತ್ತು ರಾಜ್ಯ ಸರ್ಕಾರಗಳು, ಪದೇ ಪದೇ ದುರಸ್ತಿಯ ಹೆಸರಲ್ಲಿ, ಒಂದಕ್ಕೆ ನಾಲ್ಕು ಪಟ್ಟು ಖರ್ಚು ತೋರಿಸಿ, ಹಣ ದೋಚುವ ದಂಧೆಯಾಗಿದೆ ಎಂಬುದು ಪ್ರಜ್ಞಾವಂತ ಜನ ದನಿಯಾಗಿದೆ. ಇದು ಕೇವಲ ಒಂದು ಉದಾಹರಣೆ ಅಷ್ಟೇ.

ದೇಶದ ಅಭಿವೃದ್ಧಿ ಹೇಗೆ ಕಾಣುತ್ತದೆ? ಎಂದರೆ, ಆ ದೇಶದ ಜನರು ಯಾವುದೇ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸಬಾರದು. ಮೂಲಭೂತ ಸೌಕರ್ಯಗಳೆಂದರೆ, ಆಹಾರ, ನೀರು, ವಸತಿ, ಆರೋಗ್ಯ, ಶಿಕ್ಷಣ, ಸಾರಿಗೆ ಸಂಪರ್ಕ, ಕೃಷಿ ಉತ್ಪನ್ನ, ಬೆಳಕಿನ ವ್ಯವಸ್ಥೆ ಹೀಗೆ ಜೀವನೋಪಾಯಕ್ಕೆ ತಳಹದಿಯಾಗುವ ಅಂಶಗಳು. ನಿಮ್ಮ ನಿಮ್ಮ ಕ್ಷೇತ್ರಗಳ ಪರಿಸ್ಥಿತಿ ನೋಡಿಕೊಳ್ಳಿ. ಅರಿವಾದರೆ ಸಾಕು. ಮುಂದಿನ ತೀರ್ಮಾನವನ್ನು ಕೆಲವೇ ತಿಂಗಳಲ್ಲಿ ಬರುವ ವಿಧಾನಸಭೆ ಚುನಾವಣೆಯಲ್ಲಿ ಕೈಗೊಳ್ಳಬಹುದು. ನಿಮ್ಮ ಕೈಯಲ್ಲಿನ ಮೊಬೈಲ್ ಫೀಚ ಗಳು 4 G ಯಿಂದ 5 G ಗೆ ಅಪ್ ಡೇಟ್ ಆದರೂ, ದೇಶದ ಕಾಳಜಿಯ ವಿಷಯದಲ್ಲಿ ಅಪ್ ಡೇಟ್ ಆಗದಿರುವುದರ ಬಗ್ಗೆ ವಿಷಾದವಿದೆ.

ಅಭಿವೃದ್ಧಿ ಶೂನ್ಯ ಪ್ರದೇಶಗಳು ಎಲ್ಲಿವೆ ? ಎಂದರೆ ಅವು ಗ್ರಾಮೀಣ ಪ್ರದೇಶಗಳು. ಇವತ್ತಿಗೂ ಅಸಮರ್ಪಕ ರಸ್ತೆಗಳು, ಶಿಕ್ಷಣ ಸೌಕರ್ಯಗಳ ಕೊರತೆ, ವಿದ್ಯುತ್ ನಿಲುಗಡೆ, ವೈದ್ಯಕೀಯ ಸೌಲಭ್ಯಗಳ ಕೊರತೆ, ಕುಡಿಯುವ ನೀರು , ನಿರುದ್ಯೋಗ, ಸಾರಿಗೆ ಸಂಪರ್ಕ , ರೈತರಿಗೆ ನೆರವಾಗದಿರುವುದು, ಕಳಪೆ ಆಹಾರ ಅಸಮರ್ಪಕ ಪೂರೈಕೆ, ಬಸ್ ನಿಲ್ದಾಣ ಮತ್ತು ಸರಕಾರಿ ಕಟ್ಟಡಗಳ ದುಸ್ಥಿತಿ ಹೀಗೆ ಹಲವಾರು ಕುಂದು ಕೊರತೆಗಳಿವೆ. ಅವುಗಳ ಕಡೆಗೆ ನಿಗಾವಹಿಸಿದ್ದರೆ ಬಡತನದ ಪ್ರಮಾಣ ಕಡಿಮೆಯಾಗುತ್ತಿತ್ತು.

ದಿನ ನಿತ್ಯದ ರಾಜಕೀಯ ಸುದ್ದಿಗಳು ಪತ್ರಿಕೆಗಳಲ್ಲಿ ಮುದ್ರಿತವಾಗುತ್ತಿವೆ. ದೂರದರ್ಶನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುತ್ತಿವೆ. ನಿಮಗೆ ರಾಜಕಾರಣಿಗಳ ನಡೆ-ನುಡಿ ಸಹ್ಯವೆನಿಸುತ್ತದೆಯೇ ? ಈ ಕಾಲದಲ್ಲಿ ಒಬ್ಬ ಅವಿದ್ಯಾವಂತನೂ ಕೂಡಾ ಆ ರೀತಿಯಲ್ಲಿ ಮಾತಾಡಲಾರ. ಅಷ್ಟು ಕೆಳಮಟ್ಟಕ್ಕಿಳಿದು ಮಾತಾಡುವ ಪರಿ, ಅವರ ಯೋಚನಾ ಲಹರಿ ಎಂಥದು ? ಎಂಬುದನ್ನು ತೋರಿಸುತ್ತದೆ. ಪರಸ್ಪರ ವೈಯಕ್ತಿಕ ವಿಷಯಗಳನ್ನು ಬಹಿರಂಗವಾಗಿ ಚರ್ಚಿಸುವುದು. ನಿಂದಿಸುವುದು,ಅಸಂಸದೀಯ ಪದಗಳ ಬಳಕೆ, ತೊಡೆ ತಟ್ಟುವುದು, ತೋಳೇರಿಸುವುದು ಇವೆಲ್ಲವೂ ಅಸಂಬದ್ಧವೆನಿಸುವುದಿಲ್ಲವೇ ? ಇದು ಜನಪರ ಕಾಳಜಿಯೇ ? ಆ ಕ್ಷಣಕ್ಕೆ ಸಿಗುವ ಚಪ್ಪಾಳೆ ಮತವಾಗಿ ಪರಿವರ್ತನೆಯಾಗುತ್ತವೆ ಎಂಬ ಭ್ರಮೆ ಅವರದು ! ಇವು ಸಾರ್ವಜನಿಕ ಜೀವನಕ್ಕೆ ಅವಶ್ಯವಲ್ಲ.

ಇಂದು ಬಹುತೇಕ ರಾಜಕಾರಣಿಗಳೆಲ್ಲ ಹೇಗೆ ಬಂದರು? ಅವರ ಹಿನ್ನೆಲೆ ಹೇಗಿತ್ತು? ಅವರ ಆಸ್ತಿ ಪಾಸ್ತಿ ಎಲ್ಲಿಂದ ಬಂತು? ಅವರೆಲ್ಲ ಉದ್ಯಮಗಳನ್ನೆಲ್ಲ ಹೇಗೆ ಆರಂಭಿಸಿಕೊಂಡರು? ಅವರ ಆದಾಯದ ಮೂಲ ಎಲ್ಲಿಂದ ಶುರುವಾಯಿತು? ಎಲ್ಲವನ್ನೂ ಕೆದಕುತ್ತಾ ಹೋದರೆ ಕರಾಳ ಭ್ರಷ್ಟಾಚಾರವೇ ಹೊರತು, ಒಬ್ಬ ಪ್ರಾಮಾಣಿಕ ನೂರು,ಸಾವಿರ ಕೋಟಿ ಮಾಡುವುದು ಅತೀ ಕಠಿಣ. ಹಾಗೆಂದು ಈ ಮಾತು ದೇಶ ಕಟ್ಟಲು ಕೈಗಾರಿಕೋದ್ಯಮ ಮಾಡಿ ಮೇಲೆ ಬಂದ ಮಹನೀಯರಿಗೆ ಅನ್ವಯವಾಗುವುದಿಲ್ಲ.

ಮಿತಿ ಮೀರಿದ ಭ್ರಷ್ಟಾಚಾರ ಇತ್ತೀಚೆಗಿನ ಬೆಳವಣಿಗೆ. ಅದಕ್ಕೆ ಪುರಾವೆಗಳೆಂಬಂತೆ ಸಾಲು ಸಾಲು ಹಗರಣಗಳು ಬಯಲಾಗಿವೆ. ಇಂದು ರಾಜಕಾರಣಿಗಳು “ಎಲ್ಲರೂ ಹೇಗೆ ಹಣ ಮಾಡಿದ್ದಾರೋ ನಾನೂ ಹಾಗೇ ಮಾಡಿದ್ದೇನೆ” ಎಂದು ಘಂಟಾಘೋಷವಾಗಿ ಹೇಳುತ್ತಾರೆ. ಇದು ದುರಂತ !

ಶ್ರೇಷ್ಠ ಚಿಂತನೆಯ,ಪ್ರಬಲ ವ್ಯಕ್ತಿತ್ವದ ನಾಯಕರ ಕೊರತೆಯನ್ನು ದೇಶ ಎದುರಿಸುತ್ತಿದೆ. ಹಾಗೆಂದು ಅನಿಸಿದ್ದೇ ಆದರೆ ನೀವು ಭವ್ಯ ಭಾರತ ದೇಶದ ಹಿತಚಿಂತಕರು. ಅಭಿವೃದ್ಧಿ ಮಾತಿನಲ್ಲಲ್ಲ ಕೃತಿಯಲ್ಲಿರಬೇಕು ಎಂದು ಬಯಸುವವರೇ ಆಗಿದ್ದರೆ, ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾಗಿದೆ. ಅಲ್ಲಿ ಪಕ್ಷ, ಜಾತಿ, ಹಣ ಆಮಿಷಗಳಿಂದ ದೂರವಿದ್ದು, ನಮ್ಮ ವಿಚಾರಕ್ಕೆ ತಕ್ಕಂತಹ ವ್ಯಕ್ತಿಯನ್ನು ಆರಿಸಿಕೊಳ್ಳಬೇಕಾಗಿದೆ. ಈ ಬಾರಿ ವ್ಯಕ್ತಿ ಆಧಾರಿತ ಚುನಾವಣೆಯಾಗದೇ ತತ್ವ ಆಧಾರಿತ ಚುನಾವಣೆಯಾಗಲಿ ಎಂದು ಬಯಸೋಣ.

 

ಸವದತ್ತಿಯ ಸ್ವಾದಿಮಠದ ಶ್ರೀಗಳು ಬೆಳಗಾವಿಯಲ್ಲಿ ಲಿಂಗೈಕ್ಯ

Related Articles

Back to top button