Kannada News

2 ರೂ. ಹೆಚ್ಚಳದಲ್ಲಿ 1 ರೂ. ನೇರವಾಗಿ ರೈತರಿಗೆ -ಬಾಲಚಂದ್ರ ಜಾರಕಿಹೊಳಿ

 ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :  2 ರೂ. ಏರಿಸಲಿರುವ ಹಾಲಿನ ದರದಲ್ಲಿ 1 ರೂ.ನ್ನು ನೇರವಾಗಿ ರೈತರಿಗೆ ನೀಡಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಮೂರು ವರ್ಷಗಳಿಂದ  ನಂದಿನಿ ಹಾಲು ಹಾಗೂ ಮೊಸರಿನ ಬೆಲೆ ಏರಿಕೆ ಮಾಡಿಲ್ಲ. ರಾಜ್ಯದ ಎಲ್ಲ ಒಕ್ಕೂಟಗಳಿಂದ ಬಂದ ಒಕ್ಕೋರಲಿನ ಬೇಡಿಕೆಯನ್ವಯ ಈ ದರಗಳಲ್ಲಿ ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ನಮ್ಮ ಒಕ್ಕೂಟಗಳಿಗೆ ಹಾಲು ಪೂರೈಕೆ ಮಾಡುವ ರೈತರ ಸುಮಾರು 12 ಲಕ್ಷ ಹಸುಗಳಿಗೆ ವಿಮೆ ಮಾಡುವ ಸಲುವಾಗಿ 40 ಪೈಸೆ ತೆಗೆದಿರಿಸಲಾಗುವುದು. ಇದರಿಂದ ವಾರ್ಷಿಕವಾಗಿ 60-70 ಕೋಟಿ ರೂ.ಗಳು ವಿಮೆಗೆ ಒಳಪಡಲಿವೆ.

40 ಪೈಸೆ ಹಾಲು ಮಾರಾಟ ಮಾಡುವ ಏಜೆಂಟರಿಗೆ ನೀಡಲಾಗುವುದು. ಉಳಿದ 20 ಪೈಸೆಯನ್ನು ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಪ್ರೋತ್ಸಾಹಧನ ರೂಪದಲ್ಲಿ ನೀಡಲು ಆಡಳಿತ ಮಂಡಳಿ ತೀರ್ಮಾನ ತೆಗೆದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

Home add -Advt

ಫೆಬ್ರುವರಿ 1 ರಿಂದ ಜಾರಿಗೆ ಬರುವಂತೆ ನಂದಿನಿ ಹಾಲು ಹಾಗೂ ಮೊಸರಿನ ಬೆಲೆಯನ್ನು ತಲಾ 2 ರೂ. ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ರಾಜ್ಯದ 14 ಒಕ್ಕೂಟಗಳಿಂದ ನಂದಿನಿ ಹಾಲು ಹಾಗೂ ಮೊಸರಿನ ಬೆಲೆಯನ್ನು ಏರಿಕೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಹಾಲು ಮತ್ತು ಮೊಸರು ದರದಲ್ಲಿ ಈಗಿರುವ ದರವನ್ನು 4 ರೂ. ಹೆಚ್ಚಳ ಮಾಡುವಂತೆ ಒಕ್ಕೂಟಗಳು ಕರ್ನಾಟಕ ಹಾಲು ಮಹಾಮಂಡಳಿಯನ್ನು ಕೋರಿದ್ದವು. ಅಲ್ಲದೇ ಜನೇವರಿ 17 ರಂದು ನಡೆದ ಹಾಲು ಮಹಾಮಂಡಳಿಯ ಆಡಳಿತ ಮಂಡಳಿಯ ಸಭೆಯಲ್ಲಿ ದರ ಹೆಚ್ಚಳ ಮಾಡುವ ಅಧಿಕಾರವನ್ನು ನನಗೆ ಸಂಪೂರ್ಣವಾಗಿ ನೀಡಿದ್ದರು. ಆದರೆ ಮುಖ್ಯಮಂತ್ರಿಗಳು ವಿದೇಶ ಪ್ರವಾಸಕ್ಕೆ ತೆರಳಿದ್ದರಿಂದ ಅವರ ಭೇಟಿ ಸಾಧ್ಯವಾಗಿರಲಿಲ್ಲ ಎಂದು ಅವರು ಹೇಳಿದರು.

ಗುರುವಾರ ಬೆಳಿಗ್ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗೃಹ ಕಛೇರಿಯಲ್ಲಿ ಭೇಟಿ ಮಾಡಿ ದರ ಹೆಚ್ಚಳದ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಮುಖ್ಯಮಂತ್ರಿಗಳ ಅನುಮತಿ ಪಡೆದ ಬಳಿಕ ನಂದಿನಿ ಹಾಲು ಹಾಗೂ ಮೊಸರು ಬೆಲೆಯನ್ನು ಪರಿಷ್ಕರಿಸಲಾಗಿದೆ. ಬರುವ ಫೆ.1 ರಿಂದ ನಂದಿನಿ ಹಾಲು ಹಾಗೂ ಮೊಸರಿನ ಹೊಸ ದರಗಳು ಜಾರಿಗೆ ಬರಲಿವೆ ಎಂದು ಅವರು ಹೇಳಿದರು.

ನಂದಿನಿ ಹಾಲು, ಮೊಸರಿನ ದರ ಏರಿಕೆ

Related Articles

Back to top button