ಪ್ರಗತಿವಾಹಿನಿ ಸುದ್ದಿ, ಸಂಕೇಶ್ವರ :
ಕತ್ತಿ ಸಹೋದರರಿಗೆ ಟಿಕೆಟ್ ನಿರಾಕರಣೆ ಮಾಡಿದ ಬಿಜೆಪಿ ವರಿಷ್ಠರ ವಿರುದ್ಧ ಕಾರ್ಯಕರ್ತರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಚಿಕ್ಕೋಡಿ ಲೋಕಸಭಾ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ರಮೇಶ ಕತ್ತಿ ಅವರಿಗೆ ಟಿಕೆಟ್ ಕೈತಪ್ಪಿರುವ ವಿಷಯ ತಿಳಿದು ಶುಕ್ರವಾರ ಸಾಯಂಕಾಲ ಅವರ ಸ್ವಗ್ರಾಮ ಬೆಲ್ಲದ ಬಾಗೇವಾಡಿಯಲ್ಲಿರುವ ನಿವಾಸದತ್ತ ದೌಡಾಯಿಸಿದ ಕಾರ್ಯಕರ್ತರು ಬಿಜೆಪಿ ವರಿಷ್ಠರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕುವ ಜೊತೆಗೆ ಮುಂಬರುವ ದಿನಮಾನಗಳಲ್ಲಿ ಉಗ್ರ ನಿರ್ಧಾರ ಕೈಕೊಳ್ಳುವದಾಗಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇವಲ ೩೦೦೦ ಮತಗಳ ಅಂತರದಿಂದ ಪರಾಭವಗೊಂಡಿರುವ ರಮೇಶ ಕತ್ತಿ ಅವರ ಬಗ್ಗೆ ಕ್ಷೇತ್ರದಾದ್ಯಂತ ಜನರು ಉತ್ತಮ ಅಭಿಪ್ರಾಯ ವ್ಯಕ್ತವಾಗಿದ್ದರೂ ಸಹ ಯಾರದ್ದೋ ಒತ್ತಡಕ್ಕೆ ಮಣಿದು ಬಿಜೆಪಿ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಟಿಕೆಟ್ ನೀಡಿದೆ ಎಂದು ನೂರಾರು ಕಾರ್ಯಕರ್ತರು ಜಮಾಯಿಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಪರಿಸ್ಥಿತಿ ನಿಭಾಯಿಸಲು ಹರಸಾಹಸ:
ಇತ್ತೀಚಿಗೆ ಟಿಕೆಟ್ ಕೈತಪ್ಪಿತೆಂಬ ಸುದ್ದಿ ತಿಳಿಯುತ್ತಿದ್ದಂತೆ ಕಾರ್ಯಕರ್ತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಮೇಶ ಕತ್ತಿ ಅವರಿಗೆ ಬೆದರಿಕೆ ಹಾಕಿದ್ದ, ಅಲ್ಲದೇ ಕಾರ್ಯಕರ್ತನೋರ್ವ ಕತ್ತಿ ಸಾಹುಕಾರ ಎಂದು ಕೈಮೇಲೆ ಹಚ್ಚೆ ಹಾಕಿಸಿಕೊಂಡು ತನ್ನ ನೋವನ್ನು ಸಹ ಹೊರಹಾಕಿದ್ದರು. ವಿವಿಧ ಗ್ರಾಮಗಳಿಂದ ಅವರ ಅಭಿಮಾನಿಗಳು ನಿವಾಸದತ್ತ ದೌಡಾಯಿಸಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದು, ಅಭಿಮಾನಿಗಳ ಆಕ್ರೋಶ ಕಟ್ಟಿಹಾಕಲು ಕತ್ತಿ ಸಹೋದರರೇ ಹರಸಾಹಸ ಪಡಬೇಕಾಗಿದೆ.
ತೆಪೆ ಹಚ್ಚಿದ ಉಮೇಶ ಕತ್ತಿ:
ರಮೇಶ ಕತ್ತಿ ಅಭಿಮಾನಿಗಳ ಆಕ್ರೋಶ ತಡೆಯಲು ಉಮೇಶ ಕತ್ತಿ, ಟಿಕೆಟ್ ಕೈತಪ್ಪಿದ್ದಕ್ಕಾಗಿ ಯಾರನ್ನೂ ದೂರುವ ಅವಶ್ಯಕತೆಯಿಲ್ಲ. ಕಾದು ನೋಡೋಣ ಎನ್ನುವ ಜೊತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಟಿಕೆಟ್ ಮರುಪರಿಶೀಲನೆ ಮಾಡುವಂತೆ ಮನವಿ ಮಾಡುತ್ತೇನೆ. ಅಣ್ಣಾಸಾಹೇಬ ಜೊಲ್ಲೆ ಅವರ ಉತ್ಸಾಹ ನೋಡಿ ವರಿಷ್ಟರು ನೀಡಿರಬಹುದು. ಏ.೪ರವರೆಗೆ ಕಾದು ನೋಡೋಣ. ಎಲ್ಲವೂ ಸರಿಯಾಗುತ್ತದೆ ಎನ್ನುವ ಮೂಲಕ ನಿವಾಸಕ್ಕೆ ಬರುವ ಎಲ್ಲ ಅಭಿಮಾನಿಗಳನ್ನು ಸಾಗಿಹಾಕುವ ಪ್ರಯತ್ನ ಮಾಡಿದರು.
ಪಕ್ಷೇತರರಾಗಿ ಸ್ಪರ್ಧಿಸುವಂತೆ ಒತ್ತಡ:
ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ರಮೇಶ ಕತ್ತಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಚಿಹ್ನೆಯ ಅವಶ್ಯಕತೆಯಿಲ್ಲ. ಅವರು ಪಕ್ಷೇತರರಾಗಿ ಸ್ಪರ್ಧಿಸುವ ಕುರಿತು ಎರಡು ದಿನಗಳಲ್ಲಿ ತೀರ್ಮಾನ ಕೈಕೊಳ್ಳಬೇಕು. ಇಲ್ಲದಿದ್ದರೆ ನಾವು ಮುಂಬರುವ ಚುನಾವಣೆಯಲ್ಲಿ ಉಗ್ರ ನಿರ್ಧಾರ ಕೈಕೊಳ್ಳುತೇವೆ ಎಂದು ಕತ್ತಿ ಸಹೋದರಿಗೆ ಎಚ್ಚರಿಕೆ ನೀಡಿದರು.