Belagavi NewsBelgaum NewsKannada NewsKarnataka NewsLatest

*ವಿದ್ಯಾರ್ಥಿನಿಯರು ಔದ್ಯಮಿಕ ಜಗತ್ತಿಗೆ ಅಗತ್ಯವಾದ ಕೋರ್ಸ್ ಮಾಡಿ, ಜೀವನ ರೂಪಿಸಿಕೊಳ್ಳಿ: ಡಾ. ಪ್ರಭಾಕರ ಕೋರೆ*

ಬೆಳಗಾವಿಯಲ್ಲಿ ನೂತನವಾಗಿ ನಿರ್ಮಾಣಗೊಂಡ, ಮಹಾಸಭೆಯ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯಕ್ಕೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಪ್ರವೇಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿದ್ಯಾರ್ಥಿನಿಯರು ಔದ್ಯಮಿಕ ಜಗತ್ತಿಗೆ ಅಗತ್ಯವಾದ ಕೋರ್ಸುಗಳನ್ನು ಅಧ್ಯಯನ ಮಾಡಿ ಜೀವನವನ್ನು ರೂಪಿಸಿಕೊಳ್ಳಬೇಕು. ಇಂದು ವೈದ್ಯಕೀಯ, ತಾಂತ್ರಿಕ ಕ್ಷೇತ್ರದಲ್ಲಿ ಹಲವಾರು ಅಲೈಡ್ ಕೋರ್ಸ್ಗಳು ಇವೆ. ಇಂತಹ ಕೋರ್ಸ್ ಗಳಿಂದ ಮಹಿಳೆಯರು ಸ್ವಾವಲಂಬಿ ಜೀವನವನ್ನು ನಡೆಸಬಹುದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷರು ಕೆ ಎಲ್ ಇ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಹೇಳಿದರು. 

ಅವರು ಸುಭಾಸ್ ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ನೂತನವಾಗಿ ನಿರ್ಮಾಣ ಮಾಡಿರುವ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯಕ್ಕೇ 60ಕ್ಕೂ ಹೆಚ್ಚು ಸಮಾಜದ ಬಡ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡುವುದರೊಂದಿಗೆ ಕರೆ ನೀಡಿದರು. 

ಬೆಳಗಾವಿಯ ನಗರದಲ್ಲಿ ವಿದ್ಯಾರ್ಜನೆಗಾಗಿ ಆಗಮಿಸುವ ವೀರಶೈವ ಲಿಂಗಾಯತ ಸಮಾಜದ ಬಡ ವಿದ್ಯಾರ್ಥಿನಿಯರಿಗೆ ಉಚಿತ ವಸತಿ ನಿಲಯವನ್ನು ನಿರ್ಮಾಣ ಮಾಡಿಕೊಡಬೇಕೆಂಬುದು ಬಹುದಿನಗಳ ಕನಸಾಗಿತ್ತು. ಅದನ್ನು ಸವಾಲಾಗಿ ಸ್ವೀಕರಿಸಿ, ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಬಿಎಸ್ ಯಡಿಯೂರಪ್ಪ ಅವರ ಸಹಾಯ ಸಹಕಾರದಿಂದ ಸುಭಾಷ್ ನಗರದಲ್ಲಿ ಸ್ಥಳವನ್ನು ಪಡೆದು ಅನೇಕ ದಾನಿಗಳ ಸಹಾಯದಿಂದ ಸುಸಜ್ಜಿತ ಹಾಗೂ ಬೃಹತ್ ವಸತಿ ನಿಲಯವನ್ನು ಸಿದ್ಧಪಡಿಸಿ ಇಂದು ಬಡವಿದ್ಯಾರ್ಥಿನಿಯರಿಗೆ ಹಸ್ತಾಂತರಿಸುತ್ತಿರುವುದು ಸಂತೋಷವೆನಿಸಿದೆ. ಬಡತನ ಎಲ್ಲರಿಗೂ ಇರುತ್ತದೆ ಅದನ್ನ ಮೆಟ್ಟಿ ನಿಲ್ಲುವುದು ನಮ್ಮ ಬದುಗಿನ ಗುರಿಯಾಗಬೇಕು. ವಿದ್ಯಾರ್ಥಿನಿಯರು ಯಾವ ಕಾರಣಕ್ಕೂ ಧೃತಿಗೆಡದೆ ಉತ್ತಮವಾದ ಕೋರ್ಸುಗಳನ್ನು ಮಾಡಿ ಯಶಸ್ವಿಯಾಗಿ ವಿದ್ಯಾಭ್ಯಾಸವನ್ನು ಪೂರೈಸಿ ಸ್ವಾವಲಂಬಿ ಜೀವನ ನಡೆಸಿದ್ದೆ ಆದರೆ ನಮ್ಮ ಉದ್ದೇಶ ಸಫಲವಾಗುವುದು. ಬಸವಣ್ಣವರ ತತ್ವ ಸಿದ್ಧಾಂತಗಳನ್ನ ಮನನ ಮಾಡಿಕೊಂಡು ಜೀವನವನ್ನು ರೂಪಿಸಿಕೊಳ್ಳುವುದು ನಿಮ್ಮೆಲ್ಲರ ಧ್ಯೇಯ ವಾಗಬೇಕೆಂದು ಡಾ. ಕೋರೆಯವರು ಹೇಳಿದರು. 

Home add -Advt

ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಹಿರಿಯ ನ್ಯಾಯವಾದಿ ಎಂ.ಬಿ. ಜಿರಲಿ ಅವರು ಮಾತನಾಡುತ್ತಾ, ನಮ್ಮ ಸಮಾಜವು ಮಹಿಳೆಯರಿಗೆ ವಿದ್ಯಾಭ್ಯಾಸಕ್ಕಾಗಿ ಎಲ್ಲ ರೀತಿಯ ಅವಕಾಶಗಳನ್ನು ಮಾಡಿಕೊಡುತ್ತಿದೆ. ಮಹಿಳೆಯರು ಸಮಾಜದ ಮುನ್ನೆಲೆಗೆ ಬರಬೇಕು ಎಂಬುದು ಬಸವಾದಿ ಶಿವಶರಣರ ಸಂಕಲ್ಪವಾಗಿತ್ತು. ಅಂತೆ ಇಂದು ನಮ್ಮ ಮಹಾಸಭೆಯು ಡಾ. ಕೋರೆಯವರ ನೇತೃತ್ವದಲ್ಲಿ ಬೃಹತ್ ಬೆಳಗಾವಿಯ ಹೃದಯ ಭಾಗದಲ್ಲಿಯೇ ಉಚಿತ ವಸತಿ ನಿಲಯವನ್ನು ನಿರ್ಮಿಸಿ ನಿಮಗೆಲ್ಲ ಅನುಕೂಲ ಕಲ್ಪಿಸಿದೆ. ಇದರ ಪ್ರಯೋಜನವನ್ನು ಪಡೆಯಬೇಕು. ನಮ್ಮ ಸಂಸ್ಕಾರಗಳನ್ನು ಮರೆಯಬಾರದು. ಕಷ್ಟಪಟ್ಟು ಓದಿ ಯಶಸ್ಸಿನ ಮೆಟ್ಟಲು ಹತ್ತಿದರೆ ಕೋರೆ ಅವರ ಶ್ರಮ ಸಾರ್ಥಕವಾಗುವುದು ಎಂದು ಹೇಳಿದರು. 

ಪ್ರಸ್ತಾವಿಕ ನುಡಿಗಳನ್ನು ಆಡಿದ ಉಪಾಧ್ಯಕ್ಷೆ ಡಾ. ಗುರುದೇವಿ ಹುಲೆಪ್ಪನವರಮಠ ಮಾತನಾಡಿ, ಡಾ. ಕೋರೆಯವರು ಅಗಾಧವಾದದ್ದನ್ನು ಸಾಧಿಸಿ ತೋರಿಸುತ್ತಾರೆ ಎನ್ನುವುದಕ್ಕೆ ಈ ಉಚಿತ ವಿದ್ಯಾರ್ಥಿ ನಿಲಯ ಸಾಕ್ಷಿಯಾಗಿ ನಿಂತಿದೆ. ವೀರಶೈವ ಲಿಂಗಾಯತ ಸಮಾಜಕ್ಕೆ ಅವರು ನೀಡಿದ ಕೊಡುಗೆ ಬಹುದೊಡ್ಡದು. ಮಹಾಸಭೇಯ ಎಲ್ಲಾ ರಚನಾತ್ಮಕ ಕಾರ್ಯಗಳ ಹಿಂದೆ ಕೋರೆಯವರ ಕೊಡುಗೆ ಅಪಾರವಾಗಿದೆ. ಬಡ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಆಶ್ರಯ ಮಾಡಿಕೊಡಬೇಕೆಂಬ ಅವರ ಸಂಕಲ್ಪ ಇಂದು ಈಡೇರಿದೆ. ಅವರ ಜೊತೆಗೆ ಹಗಲಿರುವ ಶ್ರಮಿಸಿದ ಜಿಲ್ಲಾ ಘಟಕದ ಅಧ್ಯಕ್ಷ ರತ್ನಪ್ರಭಾ ಬೆಲ್ಲದವರ ಕೊಡುಗೆಯನ್ನು ಅಲ್ಲಗಳಿವೆಂತಿಲ್ಲ . ವಿದ್ಯಾರ್ಥಿನಿಯರು ನಿರಂತರವಾಗಿ ಓದಿ ಈ ವಸತಿ ನಿಲಯದಲ್ಲಿ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು. 

ಜಿಲ್ಲಾ ಘಟಕದ ಅಧ್ಯಕ್ಷ ರತ್ನಪ್ರಭಾ ಬೆಲ್ಲದವರು ಮಾತನಾಡುತ್ತಾ, ವಸತಿ ನಿಲಯದ ನಿಯಮಗಳನ್ನು ವಿದ್ಯಾರ್ಥಿನಿಯರು ಯಾವ ಕಾರಣಕ್ಕೂ ಉಲ್ಲಂಘಿಸಬಾರದು. ಓದಿನೆಡೇಗೆ ಹೆಚ್ಚಿನ ಗಮನಹರಿಸಿ, ತಂದೆ ತಾಯಿಗಳ ಕನಸನ್ನು ಸಾಕಾರಗೊಳಿಸಬೇಕು. ಕಳೆದ ನಾಲ್ಕೈದು ವರ್ಷಗಳಿಂದ ನಿರಂತರವಾಗಿ ಡಾ ಕೋರೆಯವರ ಸಾರಥ್ಯದಲ್ಲಿ ಈ ವಸತಿ ನಿಲಯವನ್ನು ರೂಪಿಸಲಾಗಿದೆ. ತಾವೆಲ್ಲ ಉತ್ತಮವಾಗಿ ಕಲಿತು ಉದ್ಯೋಗ ಪಡೆದು ಸಮಾಜಕ್ಕೆ ಕೀರ್ತಿಯನ್ನು ತರಬೇಕೆಂದು ಹೇಳಿದರು. 

ಅಮೆರಿಕದ ಖ್ಯಾತ ಉದ್ದಿಮೆದಾರ ರವಿಶಂಕರ್ ಭೂಪಲಾಪುರೆ ಅವರು ಕೋರೆಯವರ ಸೇವೆಯನ್ನು ಕೊಂಡಾಡುತ್ತಾ, ಸಮಾಜದ ಹೆಣ್ಣು ಮಕ್ಕಳಿಗೆ ಕಲಿಕೆಗಾಗಿ ಮಾಡಿರುವ ಈ ಸೇವೆ ಚಿರಸ್ಮರಣೀಯವಾಗಿದೆ. ವಸತಿ ನಿಲಯದಲ್ಲಿರುವ ಈ ಎಲ್ಲ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಊಟದ ವ್ಯವಸ್ಥೆಯ ಖರ್ಚು ವೆಚ್ಚವನ್ನು ನೋಡಿಕೊಳ್ಳುವುದಾಗಿ ಹೇಳಿದರು.

ಆಶಾ ಯಮಕನಮರಡಿ ನಿರೂಪಿಸಿದರು.  ಆಶಾ ಪ್ರಭಾಕರ್ ಕೋರೆ, ಜ್ಯೋತಿ ಬದಾಮಿ, ರಮೇಶ್ ಕಳಸಣ್ಣವರ, ಸೋಮಲಿಂಗ ಮಾವಿನಕಟ್ಟಿ, ಎಂ ವೈ ಮೇಣಸಿನಕಾಯಿ, ಬಾಲಚಂದ್ರ ಬಾಗಿ, ಉಮೇಶ್ ಬಾಳಿ ಮಹಾಸಭೆಯ ಪದಾಧಿಕಾರಿಗಳು, ಪ್ರವೇಶ ಪಡೆದ 61 ವಿದ್ಯಾರ್ಥಿನಿಯರು ಹಾಗೂ ಪಾಲಕರು ಉಪಸ್ಥಿತರಿದ್ದರು

Related Articles

Back to top button