ಪ್ರಗತಿವಾಹಿನಿ ಸುದ್ದಿ, ಶಿರಸಿ – ತಾಳಗುಪ್ಪಾದಿಂದ – ಸಿದ್ದಾಪುರ – ಶಿರಸಿ – ಹುಬ್ಬಳ್ಳಿ ರೈಲು ಮಾರ್ಗ ವಿಸ್ತರಣೆ ಯೋಜನೆಯ ಸರ್ವೇ ಕಾರ್ಯದ ಟೆಂಡರ್ ಪ್ರಕ್ರಿಯೆ ಇಂದು ಪೂರ್ಣಗೊಂಡಿದ್ದು, ಮುಂದಿನ 6 ತಿಂಗಳಲ್ಲಿ ಸರ್ವೆ ಕಾರ್ಯ ಪೂರ್ಣಗೊಳ್ಳಲಿದೆ.
ಶಿರಸಿ – ಸಿದ್ದಾಪುರ ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಕುರಿತು ಮಾಹಿತಿ ನೀಡಿದ್ದಾರೆ.
ಒಮೇಗಾ ಅನಾಲೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ಸರ್ವೇ ಕಾರ್ಯದ ಟೆಂಡರ್ ಪಡೆದಿದೆ. ಸರ್ವೇ ಪ್ರಕ್ರಿಯೆಯಲ್ಲಿ ಯೋಜನೆಯ ವೆಚ್ಚ, ಯೋಜನೆಗೆ ಬೇಕಾಗುವ ಭೂಮಿಯ ಅವಶ್ಯಕತೆ, ಅವಶ್ಯವಿರುವ ರೈಲ್ವೇ ಸ್ಟೇಷನ್ ಗಳ ಸಂಖ್ಯೆ, ರೈಲ್ವೇ ಮಾರ್ಗ ಜೋಡಣೆ ಹಾಗೂ ಇನ್ನಿತರ ಅಂಶಗಳು ಒಳಗೊಂಡಿರುತ್ತವೆ.
ಈ ಸರ್ವೇ ಪ್ರಕ್ರಿಯೆಯನ್ನು ಮುಂದಿನ 6 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಿ, ಕೇಂದ್ರ ರೈಲ್ವೇ ಸಚಿವಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ. ಯೋಜನೆಯ ಅನುಷ್ಟಾನ ಹಂತದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಕಾಗೇರಿ ಕೋರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ