ಪ್ರಗತಿವಾಹಿನಿ ಸುದ್ದಿ, ಗೋಕಾಕ – ಕೃಷ್ಣಾ ನದಿಗೆ ನೀರು ಬಿಡುಗಡೆಗೊಳಿಸುವ ಸಂಬಂಧ ಮಹಾರಾಷ್ಟ್ರ ಸರ್ಕಾರದ ಜತೆ ಚರ್ಚಿಸಲಿದ್ದೇನೆ. ಈಗ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರದ ಜಲಸಂಪನ್ಮೂಲ ಸಚಿವರೊಂದಿಗೆ ಭೇಟಿ ಸಾಧ್ಯವಾಗಿಲ್ಲ. ಲಾಕ್‍ಡೌನ್ ಮುಗಿದ ನಂತರ ಚರ್ಚಿಸಿ ಕೃಷ್ಣಾ ನದಿಗೆ ನೀರು ಬಿಡುಗಡೆಗೆ ಮನವಿ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಾರಕಿಹೊಳಿ, ಕೃಷ್ಣಾ ನದಿಗೆ ನೀರು ಬಿಡುಗಡೆಗೆ ಎಲ್ಲ ಪ್ರಯತ್ನ ನಡೆದಿದೆ. ಮಹಾರಾಷ್ಟ್ರ ಸರ್ಕಾರದ ಜತೆ ಮುಖಾಮುಖಿ ಚರ್ಚೆ ಬಾಕಿ ಇದೆ. ಆ ರಾಜ್ಯದ ನೀರಾವರಿ ಸಚಿವರೊಂದಿಗೆ ಇಷ್ಟರಲ್ಲೇ ಚರ್ಚಿಸಲಿದ್ದೇನೆ ಎಂದರು.
ಇನ್ನು ಮಹದಾಯಿ ವಿಚಾರವಾಗಿ ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳ ಜತೆ ಚರ್ಚೆ ನಡೆಸುತ್ತೇನೆ. ಲಾಕ್‍ಡೌನ್ ನಂತರ ದೆಹಲಿಗೆ ತೆರಳಿ ಈ ಕುರಿತು ಚರ್ಚಿಸಲಿದ್ದೇನೆ ಎಂದರು.
ರಾಜ್ಯಕ್ಕೆ ಅವಶ್ಯಕವಾಗಿರುವ ನೀರನ್ನು ಸದ್ಬಳಕೆ ಮಾಡುವ ದೃಷ್ಟಿಯಿಂದ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ