Kannada News

ಬೆಳಗಾವಿ : ಆರಾಧನಾ ಮಹೋತ್ಸವ

ಆರಾಧನಾ ಮಹೋತ್ಸವ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ: ನಗರದ ಶ್ರೀ ಧರ್ಮನಾಥ ಭವನದಲ್ಲಿ ಸರ್ವರ ಆತ್ಮ ಕಲ್ಯಾಣಾರ್ಥವಾಗಿ ಶ್ರೀ ಬೃಹತ್ ಸಿದ್ಧ ಚಕ್ರ ಆರಾಧನಾ ಮಹೋತ್ಸವ ಗುರುವಾರ ಸಂಪನ್ನಗೊಂಡಿತು.

ಶ್ರೀ ಧರ್ಮನಾಥ ಜಿನಮಂದಿರ ಕಮಿಟಿ ಹಾಗೂ ಸಮ್ಯಕ್ತ್ವ ಮಹಿಳಾ ಮಂಡಳದ ಸಹಯೋಗದಲ್ಲಿ ಶನಿವಾರದಿಂದ ಆರಂಭವಾದ ಈ ಪೂಜೆಯಲ್ಲಿ ಬೆಳಗಾವಿ ನಗರ ಹಾಗೂ ಸುತ್ತ ಮುತ್ತಲಿನ ಗ್ರಾಮದ ಶ್ರಾವಕ, ಶ್ರಾವಕಿಯರು ಭಾಗವಹಿಸಿದ್ದರು.

ಧರ್ಮ ಧ್ವಜಾರೋಹಣ, ಮಂಗಲಕುಂಭ, ಪ್ರತಿಷ್ಠೆ, ಕಂಕಣ ಬಂಧನ, ಸಿದ್ಧ ಚಕ್ರ ಆರಾಧನೆ, ಸಾಮೂಹಿಕ ಪೂಜೆ, ಜಾಪ್ಯ ಆರತಿ ವಿಸರ್ಜನೆ, ಪಂಚಾಮೃತ ಅಭಿಷೇಕ, ಣಮೋಕಾರ ಮಹಾಮಂತ್ರ, ಸುಪ್ರಭಾತ ಸ್ತೋತ್ರ, ನಿತ್ಯ ವಿಧಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಗುರುವಾರ ನಡೆದ ಸಮಾರೋಪ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಡಾ.ಪಾರ್ಶ್ವನಾಥ ಕೆಂಪಣ್ಣವರ ಮಾತನಾಡಿ, ಜೈನರು ಶಾಂತಿಪ್ರಿಯರು. ಅಹಿಂಸಾ ಪರಮೋ ಧರ್ಮ ಎನ್ನುವುದು ಈ ಧರ್ಮದ ತಿರುಳು. ಈ ಧರ್ಮದ ತತ್ವಗಳನ್ನು ಇತರ ಧರ್ಮದವರು ಪಾಲಿಸುತ್ತಿದ್ದಾರೆ. ಭರತ ಚಕ್ರವರ್ತಿಯ ಆಡಳಿತದ ಅವಧಿಯಲ್ಲಿ ಭಾರತವೆನ್ನುವುದು ಇಂದಿನ ಅಪಘಾನಿಸ್ತಾನ, ಪಾಕಿಸ್ತಾನ, ಬರ್ಮಾ, ನೇಪಾಳ, ಭೂತಾನ್, ಶ್ರೀಲಂಕಾ, ಬಾಂಗ್ಲಾದೇಶವನ್ನೊಳಗೊಂಡಿತ್ತು.

Home add -Advt

ಅಲ್ಲೆಲ್ಲ ಇಂದಿಗೂ ಜೈನ ಧರ್ಮದ ಕುರುಹುಗಳು ಬಲವಾಗಿ ಬೇರೂರಿವೆ. ಇತರ ಧರ್ಮಗಳಂತೆ ಜೈನ ಧರ್ಮ ಭಾರತದಿಂದ ಹೊರಗೆ ಪ್ರಸಾರವಾಗಲಿಲ್ಲ. ಆದರೆ, ಸತ್ಯ, ಶಾಂತಿಯಿಂದ ಭಾರತದಲ್ಲಿದ್ದೇ ಜಗತ್ತನ್ನು ಗೆದ್ದ ಏಕೈಕ ಧರ್ಮ ಇದಾಗಿದೆ ಎಂದರು.

5-6 ಸಾವಿರ ವರ್ಷಗಳ ಹಿಂದೆಯೇ ಜೈನ ಧರ್ಮ ಅಸ್ತಿತ್ವದಲ್ಲಿತ್ತು. ಜಾಗತಿಕ ಧರ್ಮವೆಂದೆನಿಸಿಕೊಂಡಿರುವ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿಕೊಂಡಿರುವ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ. ಸಸ್ಯಾಹಾರವನ್ನು ಪ್ರಧಾನವಾಗಿ ಅಳವಡಿಸಿಕೊಂಡಿರುವ ಈ ಧರ್ಮದ ಜನರು ಸಾತ್ವಿಕತೆಯ ಜೀವನಕ್ಕೆ ಹೆಸರಾಗಿದ್ದಾರೆ ಎಂದರು.

ಬೆಳಗಾವಿ ಸೇರಿದಂತೆ ಜಿಲ್ಲೆಯಲ್ಲಿ ಜೈನ ಧರ್ಮದ ಬೇರುಗಳು ಗಟ್ಟಿಯಾಗಿವೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೈನರು ಇದ್ದು, ಕೃಷ್ಣಾ ನದಿದಂಡೆಯ ಪ್ರದೇಶಗಳಲ್ಲಿ ಜೈನ ಮನೆತನಗಳು ಬಹುಹಿಂದಿನಿಂದಲೂ ವಾಸವಾಗಿರುವುದು ಕಂಡು ಬರುತ್ತದೆ. ಜೈನರ ಕೋಟೆ, ಕೊತ್ತಲಗಳು, ಬಸದಿಗಳು ಈ ಭಾಗದಲ್ಲಿ ಬಹಳಷ್ಟು ಸಂಖ್ಯೆಯಲ್ಲಿವೆ. ನಗರದ ಕೋಟೆಯಲ್ಲಿರುವ ಕಮಲ ಬಸದಿಯ ಸುಂದರ ಕೆತ್ತನೆಯ ದೇವಾಲಯ ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಒಟ್ಟಾರೆ, ಜೈನರ ಕೊಡುಗೆ ಸಾಕಷ್ಟಿದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜೈನ ಮೈತ್ರಿಕೂಟದ ಸಂಸ್ಥಾಪಕ ಅಧ್ಯಕ್ಷ ಬಿ. ಗುಣಪಾಲ ಹೆಗ್ಡೆ ಮಾತನಾಡಿ, ಬೃಹತ್ ಸಿದ್ಧ ಚಕ್ರ ಆರಾಧನಾ ಮಹೋತ್ಸವದಂಥ ಶ್ರೇಷ್ಠ ಆಚರಣೆಗಳನ್ನು ಜೈನ ಧರ್ಮ ಒಳಗೊಂಡಿದೆ ಎಂದರು.

ಮಾಣಿಕಬಾಗ ದಿಗಂಬರ ಜೈನ ಬೋಡಿಂಗ್ ಅಧ್ಯಕ್ಷ ಕೀರ್ತಿ ಕಾಗವಾಡ, ಅಣ್ಣಾಸಾಬ ಚೌಗುಲೆ ದಂಪತಿ, ಕೆ.ಡಿ. ಚೌಗುಲೆ, ಸಮ್ಯಕ್ತ್ವ ಮಹಿಳಾ ಮಂಡಳದ ಅಧ್ಯಕ್ಷೆ ಜಯಶ್ರೀ ಮದನ ಶೆಟ್ಟರ, ಉಪಾಧ್ಯಕ್ಷೆ ರೇವತಿ ಅಡಿಕೆ, ಪದ್ಮಣ್ಣ ಶೆಟ್ಟಿ ಸೇರಿದಂತೆ ಇತರರು
ಉಪಸ್ಥಿತರಿದ್ದರು.

ಸಮ್ಯಕ್ತ್ವ ಮಹಿಳಾ ಮಂಡಳದ ಸದಸ್ಯೆಯರು ಣಮೋಕಾರ ಮಂತ್ರ ಪಠಿಸಿದರು. ರೂಪಾ ಪಾಯಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಎಂ. ಅಜಿತಕುಮಾರ ಸ್ವಾಗತ ಹಾಗೂ ನಿರೂಪಿಸಿದರು. ಶೀಲಾ ಪುಣಜಗೌಡ ವಂದಿಸಿದರು////

Related Articles

Back to top button