*ಗಣವೇಷಧಾರಿ ವಿದ್ಯಾರ್ಥಿಗೆ ಅವಮಾನಿಸಿ ಕ್ಷಮಿಸಿ ಎಂದ ಶಿಕ್ಷಕಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ನಗರದ ಪ್ರತಿಷ್ಠಿತ ಖಾಸಗಿ ಶಾಲೆಯೊಂದರ ವಿದ್ಯಾರ್ಥಿ ಕಳೆದ ಭಾನುವಾರ ನಗರದಲ್ಲಿ ಆಯೋಜಿಸಲಾಗಿದ್ದ ಆರ್ ಎಸ್ ಎಸ್ ಪಥಸಂಚಲನದಲ್ಲಿ ಭಾಗವಹಿಸಿ ಮರುದಿನ ಶಾಲೆಗೆ ಹೋದ ವೇಳೆ ಶಿಕ್ಷಕಿ ವಿದ್ಯಾರ್ಥಿಯ ಗಣವೇಷದ ಫೋಟೋಗಳನ್ನು ಸಾರ್ವಜನಿಕವಾಗಿ ತೋರಿಸಿ ಅವಮಾನ ಮಾಡಿದ್ದಲ್ಲದೆ, ತರಗತಿಯಿಂದ ಆಚೆ ಹಾಕಿ ಶಿಕ್ಷೆ ನೀಡಿದ್ದರು.
ಪಥಸಂಚಲನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗೆ ಅವಮಾನಿಸಿದ ಘಟನೆಯನ್ನು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ. ಸೋನಾಲಿ ಸರ್ನೋಬತ್ ತೀವ್ರವಾಗಿ ಖಂಡಿಸಿದ್ದಾರೆ. ಶಿಕ್ಷಕಿ ನಡೆ ಆಕ್ರೋಶಕ್ಕೆ ಕಾರಣವಾಗಿತ್ತು. ಶಿಕ್ಷಕಿ ಕಾವೇರಿ ಸಾರ್ವಜನಿಕವಾಗಿ ಕ್ಷಮೆ ಕೋರುವಂತೆ ಒತ್ತಾಯಗಳು ಕೇಳಿಬಂದಿದ್ದವು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನದಲ್ಲಿ ಭಾಗವಹಿಸಿದ್ದ ಖಾಸಗಿ ಶಾಲಾ ವಿದ್ಯಾರ್ಥಿಗೆ ಶಿಕ್ಷಕಿ ಶಿಕ್ಷೆ ನೀಡಿರುವ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ನನ್ನಿಂದ ತಪ್ಪಾಗಿದೆ ದಯವಿಟ್ಟು ಕ್ಷಮಿಸಿ ಎಂದು ಶಿಕ್ಷಕಿ ಕಾವೇರಿ ಕ್ಷಮೆ ಕೇಳಿದ್ದಾರೆ.
ನಾನು ಯಾವುದೇ ಅವಮಾನಕಾರಿ ಕೆಲಸ ಮಾಡಿಲ್ಲ. ಯಾವುದೇ ವಿದ್ಯಾರ್ಥಿ, ಸಮುದಾಯ, ಸಂಸ್ಥೆ ಅಥವಾ ಮಗುವಿನ ಭಾವನೆಗಳಿಗೆ ನೋವುಂಟು ಮಾಡುವ, ಹಾನಿ ಮಾಡುವ ಉದ್ದೇಶ ನನ್ನದಲ್ಲ. ಯಾರಾದರೂ ಭಾವನೆಗೆ ನೋವುಂಟಾದರೆ ಅದರ ಕುರಿತು ನನಗೆ ತುಂಬಾ ವಿಷಾದವಿದೆ ಮತ್ತು ಕ್ಷಮೆಯಾಚಿಸುತ್ತೇನೆ. ಭವಿಷ್ಯದದಲ್ಲಿ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುತ್ತೇನೆ. ಈ ಬಗ್ಗೆ ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕಿ ಕಾವೇರಿ ಕ್ಷಮಾಪಣಾ ಪತ್ರ ಕಳುಹಿಸಿದಾರೆ.