*ಶಿಕ್ಷಕರ ಮುಷ್ಕರ: ನ.18ರಿಂದ ಬೆಳಗಾವಿ, ಚಿಕ್ಕೋಡಿಯಲ್ಲಿ ಶಾಲಾ-ಕಾಲೇಜು ಬಂದ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನವೆಂಬರ್ 17ರಂದು ಧಾರವಾಡದಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರ ನೇತೃತ್ವದಲ್ಲಿ ನಡೆಯಲಿರುವ ಮುಷ್ಕರಕ್ಕೆ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳು ಸಂಪೂರ್ಣ ಬೆಂಬಲ ಸೂಚಿಸಿವೆ. ಅಲ್ಲದೆ, ನವೆಂಬರ್ 18ರಿಂದ ಅನಿರ್ದಿಷ್ಟಾವಧಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಅನುದಾನಿತ ಶಾಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಸ್. ಗಡದವರ ತಿಳಿಸಿದರು.
ಗುರುವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನುದಾನಿತ ಶಾಲಾ ನೌಕರರ ಬಹುದಿನಗಳ ಬೇಡಿಕೆಗಳನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ. ಹೀಗಾಗಿ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದರು.
2006ರ ಮಾರ್ಚ್ 1ರ ನಂತರ ನೇಮಕಗೊಂಡ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ನ್ಯಾಯಾಲಯದ ಆದೇಶದಂತೆ ಕಾಲ್ಪನಿಕ ವೇತನದ ಸೌಲಭ್ಯ ನೀಡಬೇಕು. 2015ರಿಂದ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರು ಹಾಗೂ ಸಿಬ್ಬಂದಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಶಾಲೆಗಳ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದ ಅಗ್ನಿ ಸುರಕ್ಷತೆ, ಕಟ್ಟಡ ಪರವಾನಗಿ ಹಾಗೂ ಪಿಟಿಆರ್ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿ ನವೀಕರಣ ಪ್ರಕ್ರಿಯೆಯನ್ನು ಸರಳಗೊಳಿಸಬೇಕು. ಅನುದಾನಿತ ಶಾಲೆಗಳ ಮೂರು ಕಿ.ಮೀ. ವ್ಯಾಪ್ತಿಯ ಹೊರಗೆ ಮಾತ್ರ ಪಿಎಂಶ್ರೀ ಹಾಗೂ ಕೆಪಿಎಸ್ ಶಾಲೆಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.
2006ರ ಏಪ್ರಿಲ್ 1ಕ್ಕೂ ಮುನ್ನ ನೇಮಕಾತಿ ಅಧಿಸೂಚನೆ ಹೊರಡಿಸಿ, ನಂತರ ನೇಮಕಾತಿ ಆದೇಶ ಪಡೆದ ನೌಕರರಿಗೂ ಹಳೆಯ ಪಿಂಚಣಿ ಯೋಜನೆ ಅನ್ವಯಿಸಬೇಕು. ಸರ್ಕಾರಿ ನೌಕರರಿಗೆ ಲಭ್ಯವಿರುವ ಆರೋಗ್ಯ ಸಂಜೀವಿನಿ ಯೋಜನೆ ಮತ್ತು ಮಹಿಳಾ ಸಿಬ್ಬಂದಿಗೆ ನೀಡುವ ಋತುಚಕ್ರ ರಜೆಯ ಸೌಲಭ್ಯವನ್ನು ಅನುದಾನಿತ ಶಾಲಾ ನೌಕರರಿಗೂ ಒದಗಿಸಬೇಕು ಎಂದರು.
ಇದರೊಂದಿಗೆ ಶಿಕ್ಷಕರ ಮೇಲಿರುವ ಹೆಚ್ಚುವರಿ ದಾಖಲೆ ನಿರ್ವಹಣೆಯ ಹೊರೆ ಇಳಿಸಬೇಕು. ಬ್ರಿಡ್ಜ್ ಕೋರ್ಸ್, ಎಫ್ಎಲ್ಎನ್, ಎಲ್ಬಿಎ ಹಾಗೂ ನಿರಂತರ ಸೇರಿದಂತೆ ವಿವಿಧ ಶೈಕ್ಷಣಿಕ ದಾಖಲೆಗಳ ನಿರ್ವಹಣೆಯನ್ನು ಸರಳೀಕರಿಸಬೇಕು. ತೃತೀಯ ಭಾಷೆ ರದ್ದುಗೊಳಿಸುವ ನಿರ್ಧಾರವನ್ನು ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಸಿ. ಮಾಲಗಾವಿ, ಎಸ್.ಐ. ಸಂಭಾಳ, ಬಿ.ಕೆ. ಯರಗಟ್ಟಿ, ಬಿ.ಬಿ. ಪಾಟೀಲ, ಬಿ. ಪಿ ಲಮಾಣಿ, ಎಂ.ಎಂ. ಹುಲಗಬಾಳಿ, ಆರ್.ಆರ್. ಮಧಾಳೆ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.




