Latest

*ಶಾಲಾ ಶಿಕ್ಷಕ ಧರಣಿ; ಗಮನಕ್ಕೆ ಬಂದಿಲ್ಲ ಎಂದ ಸರ್ಕಾರ; ಸದಾ ಕಾಲ ಕಿವಿಯಲ್ಲಿ ಕಮಿಷನ್ ಸದ್ದು ಗುಯ್ಗುಡುವಾಗ ಬಡವರ ಕೂಗು ಕೇಳುವುದು ಹೇಗೆ ?; ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಪ್ರತಿಭಟನೆಗಳ ಬಿಸಿ ತಟ್ಟುತ್ತಿದೆ. ಮುಷ್ಕರ ನಿರತ ಇಬ್ಬರು ಶಿಕ್ಷಕರು ಆತ್ಮಹತ್ಯೆ ಇದು ಸರ್ಕಾರಿ ಕೊಲೆಗಳು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಶಾಲಾ ಶಿಕ್ಷಕರು ನೂರಾರು ದಿನಗಳಿಂದ ಮುಷ್ಕರ ನಡೆಸುತ್ತಿದ್ದರೂ ಅವರ ಗೋಳು ಕೇಳದ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಪಿಂಚಣಿಗಾಗಿ ಮುಷ್ಕರದಲ್ಲಿ ತೊಡಗಿದ್ದ ಬಾಗಲಕೋಟೆ ಮೂಲದ ಶಿಕ್ಷಕ ಸಿದ್ದಯ್ಯ ಹಿರೇಮಠ ಮತ್ತು ರಾಯಚೂರು ಜಿಲ್ಲೆ ಸಿಂಧನೂರು ಮೂಲಕ ಶಂಕರಪ್ಪ ಬೋರಡ್ಡಿ ಅವರು ಸರ್ಕಾರ ತಮ್ಮ ಹೋರಾಟಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನು ಸರ್ಕಾರಿ ಕೊಲೆಗಳು ಅನ್ನದೆ ಬೇರೇನು ಹೇಳಬೇಕು ಎಂದು ಕಿಡಿ ಕಾರಿದ್ದಾರೆ.

ಕಳೆದ 141 ದಿನಗಳಿಂದ ಫ್ರೀಡಂ ಪಾರ್ಕ್ ನಲ್ಲಿ ಮುಷ್ಕರ ನಿರತರಾಗಿರುವ ಅನುದಾನಿತ ಶಾಲಾ ಶಿಕ್ಷಕರ ಗೋಳು ಕೇಳುವವರಿಲ್ಲ. ಶಿಕ್ಷಕರು ಕೇಳುತ್ತಿರುವುದು ತಮ್ಮ ಹಕ್ಕಿನ ಪಿಂಚಣಿಯನ್ನು ಎಂಬ ಕನಿಷ್ಠ ಜ್ಞಾನವಾದರೂ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬೇಡವೇ? ಅವರು ಕಣ್ಣು ಬಿಟ್ಟು ನೋಡಲು ಇನ್ನೆಷ್ಟು ಹೆಣ ಬೀಳಬೇಕು? ಅನುದಾನಿತ ಶಾಲಾ ಶಿಕ್ಷಕರು ಪ್ರತಿಭಟನೆ ಆರಂಭಿಸಿ 141 ದಿನಗಳು ಕಳೆದರೂ ಇನ್ನು ಈ ವಿಚಾರ ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರ ಇಷ್ಟು ದಿನ ಕೋಮಾದಲ್ಲಿತ್ತು ಎಂಬುದನ್ನು ಸ್ವತಃ ಒಪ್ಪಿಕೊಂಡಿದೆ. ಸದಾ ಕಾಲ ಕಿವಿಯಲ್ಲಿ ಕಮಿಷನ್ ಸದ್ದು ಗುಯ್ಗುಡುವಾಗ ಬಡವರ ಕೂಗು ಕೇಳುವುದಾದರೂ ಹೇಗೆ ? ಕೋಮುಗಲಭೆ ನಡೆದು ಕೊಲೆಯಾದರೆ ಗಂಟೆಯೊಳಗೆ ಹೆಣದ ಸುತ್ತ ನೊಣದಂತೆ ಹೋಗಿ ಕೂರುವ ಬಿಜೆಪಿ ಸರ್ಕಾರಕ್ಕೆ, ಸಾವಿರಾರು ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಜೀವಗಳು ಅಮೂಲ್ಯ ಅನ್ನಿಸುವುದಿಲ್ಲವೇ? ಎಂದು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನಷ್ಟು ಜೀವಗಳು ಬಲಿಯಾಗುವ ಮುನ್ನ ಮುಷ್ಕರದಲ್ಲಿ ತೊಡಗಿರುವ ಅನುದಾನಿತ ಶಾಲಾ ಶಿಕ್ಷಕರನ್ನು ಕರೆದು ಬಿಜೆಪಿ ಸರ್ಕಾರ ಮಾತುಕತೆ ನಡೆಸಿ, ಅವರ ಬೇಡಿಕೆಗಳನ್ನು ತಕ್ಷಣ ಈಡೇರಿಸುವ ಕೆಲಸ ಮಾಡಬೇಕು. ಪ್ರಾಣ ಕಳೆದುಕೊಂಡ ಶಿಕ್ಷಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Home add -Advt

*ಲಿಫ್ಟ್ ಗಾಗಿ ತೆಗೆದಿದ್ದ ಹೊಂಡಕ್ಕೆ ಬಿದ್ದ ಮಗು; ದಾರುಣ ಸಾವು*

https://pragati.taskdun.com/6-yers-girldeathlift-pitbangalore/

Related Articles

Back to top button