Kannada NewsKarnataka News

ಕೇಂದ್ರ ಪರಿಹಾರ ಕೊಡಬೇಕಾಗಿಲ್ಲ ಎಂದ ತೇಜಸ್ವಿ ಸೂರ್ಯ

ಕೇಂದ್ರ ಪರಿಹಾರ ಕೊಡಬೇಕಾಗಿಲ್ಲ ಎಂದ ತೇಜಸ್ವಿ ಸೂರ್ಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ/ ಹುಕ್ಕೇರಿ :  ರಾಜ್ಯದಲ್ಲಿನ ಪ್ರವಾಹ ಪರಿಹಾರಕ್ಕೆ ಕೇಂದ್ರ ಸರಕಾರ ಹಣಕಾಸಿನ ನೆರವು ಕೊಡಬೇಕಾಗಿಲ್ಲ ಎನ್ನುವ ಮೂಲಕ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೊಸ ವ್ಯಾಖ್ಯಾನ ನೀಡಿದ್ದಾರೆ.
ಪ್ರವಾಹ ಅಪ್ಪಳಿಸಿ ಒಂದೂವರೆ ತಿಂಗಳಾದರೂ ಕೇಂದ್ರ ಪರಿಹಾರ ಬಾರದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎಲ್ಲ ಮಂತ್ರಿಗಳು, ಶಾಸಕರು ಕೇಂದ್ರದ ಕಡೆಗೆ ನೋಡುತ್ತಿದ್ದರೆ ತೇಜಸ್ವಿ ಸೂರ್ಯ ತಮ್ಮದೇ ಹೊಸ ವ್ಯಾಖ್ಯಾನ ನೀಡಿದ್ದಾರೆ.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 14ನೇ ಹಣಕಾಸು ಯೋಜನೆ ಪ್ರಕಾರ ರಾಜ್ಯಗಳಿಗೆ ಹೆಚ್ಚಿನ ಹಣಕಾಸಿನ ಬಲ ನೀಡಲಾಗಿದೆ. ಹಾಗಾಗಿ ಕೇಂದ್ರ ಸರಕಾರ ಪ್ರವಾಹ ಪರಿಹಾರಕ್ಕೆ ಮತ್ತೆ ಪ್ರತ್ಯೇಕ ಹಣ ನೀಡಬೇಕಾಗಿಲ್ಲ ಎಂದು ಹೇಳಿದರು. ಕೇಂದ್ರದ ಮಂತ್ರಿಗಳು ಬಂದು ವೈಮಾನಿಕ ಸಮೀಕ್ಷೆ ನಡೆಸಿದ್ದೇ ಕೇಂದ್ರದ ದೊಡ್ಡ ನೆರವು, ಪ್ರವಾಹ ಸಂದರ್ಭದಲ್ಲಿ ಎನ್ ಡಿಆರ್ ಎಫ್ ತಂಡ ಕಳಿಸಿದ್ದೇ ದೊಡ್ಡ ನೆರವು ಎಂದು ಅವರು ಹೇಳಿದ್ದಾರೆ.
ತನ್ಮೂಲಕ ರಾಜ್ಯದ ಬಿಜೆಪಿ ಸರಕಾರದ ನಿಲುವೇ ಬೇರೆ, ತೇಜಸ್ವಿ ಸೂರ್ಯ ನಿಲುವೇ ಬೇರೆ ಎನ್ನುವಂತಾಗಿದೆ. ಇದು ಪ್ರವಾಹ ಪೀಡಿತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಹುಕ್ಕೇರಿ ಶ್ರೀಗಳಿಂದ ಸತ್ಕಾರ 

ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಇಂದು ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠಕ್ಕೆ ಭೇಟಿ ನೀಡಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದರು.
 ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಭಾಗದಲ್ಲಿ ಹುಕ್ಕೇರಿ ಹಿರೇಮಠ  ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ.  ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನ  ಪ್ರಧಾನಿ ನರೇಂದ್ರ ಮೋದಿಯವರನ್ನು  ಮುಟ್ಟಿರುವುದು ಅಭಿಮಾನದ ಸಂಗತಿ.  ನಾವೆಲ್ಲರೂ ಕೂಡ ಧರ್ಮಯುತ ರಾಜಕಾರಣವನ್ನು ಮಾಡಿದರೆ ಖಂಡಿತ ಭಾರತ ವಿಶ್ವಗುರುವಾಗುವಲ್ಲಿ ಸಂಶಯವಿಲ್ಲ ಎಂದರು.
ಸನ್ಮಾನವನ್ನು ನೀಡಿ  ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ,  ಸಂಸ್ಕಾರಯುತ ಮನೆತನದಿಂದ ಬಂದಿರುವ ತೇಜಸ್ವಿಸೂರ್ಯ ಅತಿ ಚಿಕ್ಕ ವಯಸ್ಸಿನಲ್ಲಿ ಸಂಸತ್ತನ್ನು ಪ್ರವೇಶಿಸಿದ್ದಾರೆ.  ಹೆಚ್ಚು ಕೆಲಸವನ್ನು ಮಾಡುವುದರೊಂದಿಗೆ ಕರುನಾಡಿನ ಕೀರ್ತಿಯನ್ನು ದೆಹಲಿಗೆ ತಲುಪಿಸಿ ಹೆಚ್ಚು ಕಾರ್ಯವನ್ನು ಮಾಡಲಿ ಎಂದರು.
ಮಾಜಿ ಸಚಿವ ಶಶಿಕಾಂತ ನಾಯಕ, ಮಾಜಿ ಶಾಸಕ ಸಂಜಯ್ ಪಾಟೀಲ್, ಬಿಜೆಪಿ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜು ಚಿಕ್ಕನಗೌಡ ಒಳಗೊಂಡಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button