
ಕನ್ನಡ ಸಾಹಿತ್ಯ ಲೋಕದ ಹಿರಿಯ ಚೇತನ, ಕಾದಂಬರಿ ಸಾರ್ವಭೌಮ ಡಾ. ಎಸ್.ಎಲ್. ಭೈರಪ್ಪನವರು ನಮ್ಮನ್ನು ಅಗಲಿದ್ದಾರೆ. ಕಾದಂಬರಿಗಳ ಮೂಲಕವೇ ಬದುಕಿನ ಸೂಕ್ಷ್ಮಗಳನ್ನು, ಭಾರತೀಯ ಸಂಸ್ಕೃತಿಯ ಮಹತ್ವವನ್ನು ನಮಗೆಲ್ಲ ತಿಳಿಸಿಕೊಟ್ಟ ಮಹಾನ್ ಚೇತನವದು. ತಮ್ಮ ಮಾಂತ್ರಿಕವಾದಂತಹ ಅಕ್ಷರಗಳ ಮೂಲಕ ಕನ್ನಡ ಭಾಷಾ ಸಿರಿವಂತಿಕೆಗೆ ಇನ್ನಷ್ಟು ಮೆರುಗು ನೀಡಿದ್ದು ಗಮನಾರ್ಹ.
ಅವರ ಬಾಲ್ಯ, ಕೌಟುಂಬಿಕ ಸಂಕಷ್ಟಗಳನ್ನು ಎದುರಿಸಿದ ಪರಿ, ತಾವು ನಂಬಿದ ಮೌಲ್ಯಗಳನ್ನು ಕಾಪಿಟ್ಟುಕೊಂಡು ಬರಹಗಳಲ್ಲಿ ಮೂಡಿಸಿದ ಶೈಲಿ ನಿಜಕ್ಕೂ ಸೋಜಿಗ. ಅವರ ಜೀವನವೇ ಇತರರಿಗೆ ಪ್ರೇರಣೆ, ಸ್ಪೂರ್ತಿ ಒದಗಿಸುವಂತಹದ್ದು.
ಬಾಲ್ಯ :
ಕೇವಲ ಐದು ವರ್ಷದವರಾಗಿದ್ದಾಗಲೇ ಪ್ಲೇಗ್ ರೋಗದಿಂದ ಅವರ ತಾಯಿ ಮತ್ತು ತಂದೆ ಇಬ್ಬರೂ ತೀರಿಕೊಂಡ ನಂತರ ಬಾಲ್ಯದಲ್ಲೇ ಅನಾಥರಾದರು. ಈ ನೋವು ಅವರ ಬದುಕಿನಲ್ಲಿ ಆಳವಾದ ಪರಿಣಾಮ ಬೀರಿದ್ದು ಸುಳ್ಳಲ್ಲ.. ಈ ಕಷ್ಟಗಳೇ ಭೈರಪ್ಪನವರನ್ನು ಗಟ್ಟಿಗೊಳಿಸಿದವು. ಅವರು ಸ್ವಾಭಿಮಾನದಿಂದ, ಯಾರ ಹಂಗೂ ಇಲ್ಲದೆ ಬದುಕನ್ನು ರೂಪಿಸಿಕೊಂಡಿದ್ದು, ಬಾಲ್ಯದ ಅನುಭವಗಳು, ಗ್ರಾಮೀಣ ಬದುಕು, ಬಡತನ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಅವರ ಅನೇಕ ಕಾದಂಬರಿಗಳಲ್ಲಿ ಕಾಣಬಹುದು.
ಸ್ಪೂರ್ತಿ :
ಕೌಟುಂಬಿಕ ಬೆಂಬಲವಿಲ್ಲದಿದ್ದರೂ ಭೈರಪ್ಪನವರು ಧೃತಿಗೆಡದೇ, ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ನಿರ್ಧರಿಸಿ, ಹೊಟ್ಟೆ ತುಂಬಿಸಿಕೊಳ್ಳಲು ಮತ್ತು ಶಿಕ್ಷಣಕ್ಕಾಗಿ ಅವರು ಮೈಸೂರಿಗೆ ತೆರಳಿ, ಅಲ್ಲಿ ಹಾಸ್ಟೆಲ್‌ನಲ್ಲಿ ಉಳಿದು, ವಾರಾನ್ನ ಮಾಡಿ ಕಷ್ಟಪಟ್ಟು ಓದುವ ಮೂಲಕ ತಮ್ಮ ಛಲ ಸಾಧಿಸಿದ್ದು ಸ್ಪೂರ್ತಿ & ಪ್ರೇರಣಾದಾಯಕ.
ಕೇವಲ ಹದಿಮೂರು ವರ್ಷದವರಾಗಿದ್ದಾಗ, ಗಾಂಧೀಜಿಯವರ ಚಿಂತನೆಗಳಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದು ಗಮನಾರ್ಹ.
ಓದುಗರ ನೆಚ್ಚಿನ ಲೇಖಕ :
ಅವರ ಪ್ರತಿಯೊಂದು ಕಾದಂಬರಿಯಲ್ಲಿಯೂ ಭಾಷೆಯ ಸೊಗಸು, ಪಾತ್ರ ಪರಿಕಲ್ಪನೆ ಮತ್ತು ಅಪರೂಪದ ಕಥನ ಶೈಲಿಯನ್ನು ಕಾಣಬಹುದಾಗಿದೆ.. ಓದುಗರನ್ನು ಅತ್ಯಾಪ್ತತೆಯಿಂದ ಆವರಿಸುವ ಪರಿ, ಭಾವುಕತೆ, ತಲ್ಲೀನತೆ, ಚಿಂತನೆಗೆ ಒಡ್ಡುವ ಮನೋಜ್ಞತೆಯನ್ನು ವಿಪರೀತ ಜೀವನಪ್ರೀತಿ ಇರುವ ಲೇಖಕರಿಂದ ಮಾತ್ರ ನಿರೀಕ್ಷಿಸಲು ಸಾಧ್ಯ. ಈ ವಿಷಯಗಳಲ್ಲಿ ಭೈರಪ್ಪನವರಿಗೆ ಭೈರಪ್ಪನವರೇ ಸಾಟಿಯೆಂದರೆ ತಪ್ಪಲ್ಲ.
ಮನು಼ಷ್ಯನ ಚಿಂತನೆಗೆ ಪ್ರೇರಣೆ ನೀಡುವ ಆಧ್ಯಾತ್ಮ, ಮನಃ ಶಾಸ್ತ್ರ, ಮತ್ತು ತರ್ಕ ಶಾಸ್ತ್ರ, ಸಮಾಜ ಶಾಸ್ತ್ರ, ನ್ಯಾಯಮೀಮಾಂಸೆ, ಸೌಂದರ್ಯ ಮೀಮಾಂಸೆ, ಇತಿಹಾಸ, ವಿಜ್ಞಾನ, ರಾಜಕೀಯ ಘಟನೆಗಳು, ವೇದ ಪುರಾಣಗಳ ಸಾರ, ಇನ್ನೂ ಅನೇಕ ವಿಷಯಗಳನ್ನು ಒಳಗೊಂಡಂತೆ ಓದುಗನನ್ನು ಆವರಿಸಿಕೊಳ್ಳುವ ಡಾ. ಎಸ್. ಎಲ್. ಭೈರಪ್ಪನವರ ಪದಬಳಕೆ ವಿನೂತನ ಅನುಭೂತಿ ಒದಗಿಸುವಂತಹದ್ದು.
ಪ್ರತಿಯೊಂದೂ ಕಾದಂಬರಿ ಬರೆಯುವುದಕ್ಕೆ ಮಾಡಿಕೊಳ್ಳುತ್ತಿದ್ದ ಪೂರ್ವ ಭಾವಿ ತಯಾರಿ, ಅಧ್ಯಯನ, ಸಂಚಾರ, ಸಂದರ್ಶನ, ವಿಧ್ವಾಂಸರೊಂದಿಗಿನ ಚರ್ಚೆಗಳು ಅವರ ವಿಷಯಾಸಕ್ತಿಗೆ ಹಿಡಿದ ಕನ್ನಡಿ ಎನ್ನಬಹುದು. ʼಮಂದ್ರʼ ಕಾದಂಬರಿಗೆ ಅವರು ನಡೆಸಿದ ತಯಾರಿ, ಹಿಂದೂಸ್ತಾನಿ ಸಂಗೀತದ ಕುರಿತಾದ ಅಧ್ಯಯನದ ಸುಧೀರ್ಘವಾಗಿತ್ತು ಎನ್ನುವುದನ್ನು ಮಂದ್ರ ಕಾದಂಬರಿ ಓದಿದವರಿಗೆ ಗೊತ್ತು.
ಅವರ ಬರಹಗಳ ಸಾರದ ಗಟ್ಟಿತನದಿಂದ ಮಾತ್ರವೇ ಕನ್ನಡವಲ್ಲದೆ ಗುಜರಾತಿ, ಹಿಂದಿ, ಸಂಸ್ಕೃತ, ಮಲಯಾಳ, ತಮಿಳು, ತೆಲುಗು, ಇಂಗ್ಲೀಷ್ ಭಾಷೆಗಳಿಗೂ ಅವರ ಕೃತಿಗಳು ತರ್ಜುಮೆಗೊಂಡಿದ್ದಕ್ಕೆ ಸಾಕ್ಷಿ. ಅವರ ಕೃತಿಗಳು ಕನ್ನಡಿಗರನ್ನು ಮಾತ್ರವಲ್ಲದೆ, ಇಡೀ ಭಾರತೀಯರನ್ನು ತಲುಪಿವೆ. ನಾಡಿನ ಸಂಸ್ಕೃತಿ, ಕನ್ನಡ ಭಾಷೆ ಮತ್ತು ಸಮಾಜದ ಕುರಿತು ಅವರಿಗಿದ್ದ ಪ್ರೀತಿ ಎಲ್ಲರಿಗೂ ಸ್ಪೂರ್ತಿ.
ಭೈರಪ್ಪನವರ ಬರಹಗಳು ಕೇವಲ ಅಕ್ಷರಗಳಲ್ಲ, ಅವು ನಮ್ಮ ಬದುಕಿಗೆ ದಾರಿದೀಪ. ಅವರ ಕೃತಿಗಳನ್ನು ಓದಿದ ಪ್ರತಿಯೊಬ್ಬರಿಗೂ ಅವರೊಬ್ಬ ಮಾರ್ಗದರ್ಶಕರಾಗಿದ್ದರು. ಸತ್ಯ, ಮೌಲ್ಯ, ಸಂಬಂಧಗಳ ಕುರಿತು ಅವರು ಬರೆದದ್ದು ಕನ್ನಡಿಗರಿಗೆ ಮಾತ್ರವಲ್ಲ, ಇತರ ಭಾಷೆಯವರಿಗೂ ಪ್ರೇರಣೆ.
ಭೈರಪ್ಪನವರ ನಿಧನ ಕೇವಲ ಒಬ್ಬ ಸಾಹಿತಿಯ ಅಗಲಿಕೆಯಲ್ಲ, ಅದು ಕನ್ನಡದ ಆತ್ಮವೊಂದರ ನಿರ್ಗಮನ. ಅವರ ಅಕ್ಷರಗಳು ಸದಾ ಜೀವಂತವಾಗಿ, ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಅವರ ಕುಟುಂಬ ವರ್ಗ, ಅಪಾರ ಸಾಹಿತ್ಯಾಸಕ್ತರು, ಕನ್ನಡದ ಮನಸ್ಸುಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ಆಶಿಸುತ್ತೇನೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.
ಭಾವಪೂರ್ಣ ನಮನಗಳು…
ಸದ್ಗತಿ !
(ಫೇಸ್‌ಬುಕ್ ಪುಟದಿಂದ)