ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಣಬಿಸಿಲಿನ ನಡುವೆ ಬಿಸಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶದ ಹಲವೆಡೆಗಳಲ್ಲಿ ಉಷ್ಣ ಗಾಳಿ ಬೀಸಲಿದ್ದು, ಏಪ್ರಿಲ್ ನಿಂದ ಜೂನ್ ವರೆಗೂ ತಾಪಮಾನ ಹೆಚ್ಚಲಿದ್ದು, ಬಿಸಿಗಾಳಿ ಬೀಸುವ ಸಾಧ್ಯತೆ ಇದೆ.
ಬಿಸಿಗಾಳಿ ಲೋಕಸಭಾ ಚುನಾವಣಾ ಪ್ರಚಾರಕಾರ್ಯಕ್ಕೂ ಅಡ್ಡಿಯಾಗಬಹುದು. ಮತದಾನದ ಮೇಲೂ ಪರಿಣಾಮ ಬೀರುವ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ಚುನಾವಣಾ ಆಯೋಗಕ್ಕೆ ತಿಳಿಸಿದೆ.
ಏಪ್ರಿಲ್ ನಿಂದ ಜೂನ್ ವರೆಗೆ ಭಾರತ ಬಿರುಬೇಸಿಗೆಯನ್ನು ಅನುಭವಿಸಲಿದ್ದು, ಮಧ್ಯಭಾರತ ಹಾಗೂ ದಕ್ಷಿಣ ಭಾರತದ ಮೇಲೆ ಬಿಸಿಗಾಳಿ ಕೆಟ್ಟ ಪರಿಣಾಮ ಬೀರಲಿದೆ. ಅದರಲ್ಲಿಯೂ ಉತ್ತರ ಕರ್ನಾಟಕ, ಮಧ್ಯ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ, ಆಂಧ್ರಪ್ರದೇಶದಲ್ಲಿ ಬಿಸಿಗಾಳಿ ಬೀಸಲಿದೆ. ಉಷ್ಣ ಅಲೆಯ ಶಾಖ ೧೦-೨೦ ದಿನಗಳವರೆಗೆ ಇರಲಿದೆ.
ಮಾರ್ಚ್ ತಿಂಗಳ ಮಧ್ಯಭಾಗದಲ್ಲಿ ಕರ್ನಾಟಕದಲ್ಲಿ ಮಳೆಯಾಗುವ ನಿರೀಕ್ಷೆ ಇತ್ತು. ಆದರೆ ವಿಜಯಪುರ,ಬೆಳಗಾವಿ, ಕೊಡಗು ಜಿಲ್ಲೆಯ ಕೆಲವೆಡೆಗಳಲ್ಲಿ ಮಾತ್ರ ಮಳೆಯಾಗಿದೆ. ಇದನ್ನು ಹೊರತುಪಡಿಸಿ ಮಳೆ ನಿರೀಕ್ಷೆಯೂ ಸುಳ್ಳಾಗಿದೆ. ಈಗಾಗಲೇ ರಾಜ್ಯದಲ್ಲಿ ಬಿಸಿಲಿನ ಝಳ ಹೆಚ್ಚಾಗಿದ್ದು, ಹಲವರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಒಂದೆಡೆ ತಾಪಮಾನ ಹೆಚ್ಚಳ, ಇನ್ನೊಂದೆಡೆ ಕುಡಿಯುವ ನೀರಿಗೆ ಹಾಹಾಕಾರ ಆರಂಭವಾಗಿದೆ. ಇದರ ಜೊತೆಗೆ ಜೂನ್ ವರೆಗೆ ಬಿರು ಬೇಸಿಗೆಯೊಂದಿಗೆ ಬಿಸಿಗಾಳಿ ಎಚ್ಚರಿಕೆ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ